ಭಾನುವಾರ, ಜೂನ್ 26, 2022
28 °C
ಗ್ರಾಮೀಣರಿಗೆ ಮತ್ತಷ್ಟು ದೂರವಾದ ಆರೋಗ್ಯ ಸೇವೆ

ಚಾಮರಾಜನಗರ: ಏದುಸಿರು ಬಿಡುತ್ತಿರುವ ಆಸ್ಪತ್ರೆಗಳು

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಆಸ್ಪತ್ರೆಯಲ್ಲಿ ಮೇ 2ರಂದು ರಾತ್ರಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ ದುರಂತದ ಬಳಿಕ, ರೋಗಿಗಳಿಗೆ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಉಪಕೇಂದ್ರಗಳೇ ಅಕ್ಷರಶಃ ಮರಣಶಯ್ಯೆಯಲ್ಲಿವೆ. ಕಟ್ಟಡಗಳು ಶಿಥಿಲಗೊಂಡಿವೆ. ಜಿಲ್ಲೆಯ ಆರೋಗ್ಯ ವ್ಯವಸ್ಥೆಯೇ ಏದುಸಿರು ಬಿಡುತ್ತಿದೆ.

ಇಂತಹ ಅವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಮನಸ್ಥಿತಿಗೆ ಬಂದಿರುವ ಜನರು, ಈಗಾಗಲೇ ಆಚರಣೆಯಲ್ಲಿರುವ ಮೂಢನಂಬಿಕೆಗಳಿಗೆ ಇನ್ನಷ್ಟು ಜೋತುಬಿದ್ದಿದ್ದಾರೆ. ಇದರಿಂದಲಾದರೂ ರೋಗ ನಿರ್ಮೂಲನೆಯಾಗುತ್ತದೆ ಎಂಬ ನಂಬಿಕೆಯಿಂದ ಅಲ್ಲಲ್ಲಿ ಕೋಳಿ ಬಲಿ ಕೊಡುತ್ತಿದ್ದಾರೆ.

ಜಿಲ್ಲೆಯಲ್ಲಿರುವುದು ಕೇವಲ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳು. ಬಹುತೇಕ ಎಲ್ಲ ಆರೋಗ್ಯ ಉಪಕೇಂದ್ರಗಳು ಹೆಸರಿಲ್ಲದಂತಾಗಿವೆ. ಅವುಗಳಲ್ಲಿ ಕೆಲವು ಬಾಗಿಲು ತೆರೆದು ವರ್ಷಗಳೇ ಕಳೆದಿವೆ. ಹನೂರು ತಾಲ್ಲೂಕಿನಲ್ಲಿರುವ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೇವಲ ಐದು ಮಂದಿ ವೈದ್ಯರಷ್ಟೇ  ಕಾರ್ಯನಿರ್ವಹಿಸುತ್ತಿದ್ದಾರೆ.

25 ವೈದ್ಯರ ನೇಮಕಾತಿ ಆದೇಶವನ್ನು ಸರ್ಕಾರ ಮೇ 30ರಂದು ಹೊರಡಿಸಿದೆ. ಅವರಲ್ಲಿ ಎಷ್ಟು ವೈದ್ಯರು ಗಡಿಭಾಗದ ಜಿಲ್ಲೆಯ ಕರ್ತವ್ಯಕ್ಕೆ ಬರುತ್ತಾರೆ ಎಂಬುದನ್ನು ಕಾದು ನೋಡಬೇಕು.

ತಮಿಳುನಾಡಿನ ಗಡಿಭಾಗದಲ್ಲಿರುವ ಗೋಪಿನಾಥಂ ಪಂಚಾಯಿತಿ ವ್ಯಾಪ್ತಿಯ 8 ಹಳ್ಳಿಗಳ ಜನರೂ, ಜಿಲ್ಲೆಯ ಆರೋಗ್ಯ ವ್ಯವಸ್ಥೆಯನ್ನು ನೆಚ್ಚಿಕೊಂಡಿಲ್ಲ. ಬಹುತೇಕ ಭರವಸೆಯನ್ನೂ ಕೈಬಿಟ್ಟಿರುವ ಇವರು, ಆರೋಗ್ಯ ಕೆಟ್ಟರೆ 50 ಕಿ.ಮೀ ದೂರದಲ್ಲಿರುವ ತಮಿಳುನಾಡಿನ ಮೆಟ್ಟೂರಿನ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದಾರೆ.

ಗೋಪಿನಾಥಂ ಪಂಚಾಯಿತಿ ವ್ಯಾಪ್ತಿಯಲ್ಲಿನ ಪುದೂರಿನ ಆರೋಗ್ಯ ಉಪಕೇಂದ್ರದ ಬಾಗಿಲು ತೆರೆದು 5 ವರ್ಷಗಳ ಮೇಲಾಯಿತು ಎನ್ನುತ್ತಾರೆ ಸ್ಥಳೀಯರು.

ಹನೂರು ತಾಲ್ಲೂಕಾಗಿ ರೂಪುಗೊಂಡು 3 ವರ್ಷವಾದರೂ ಇಲ್ಲಿನ ಜನರು ಆಸ್ಪತ್ರೆಗಾಗಿ ಪಕ್ಕದ ಕೊಳ್ಳೇಗಾಲ ತಾಲ್ಲೂಕು ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಸದ್ಯ, ಹನೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಸರಿಗಷ್ಟೇ ಇದೆ. ತಾಲ್ಲೂಕಿನ ಬಹುತೇಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ವೈದ್ಯರ ಕೊರತೆ, ವೈದ್ಯಕೀಯ ಉಪಕರಣಗಳ ಕೊರತೆಗಳಿಂದ ನರಳುತ್ತಿವೆ.

ಮಧುವಿನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ವೇತನ ಹಾಗೂ ನಿರ್ವಹಣೆಗಾಗಿ ತಿಂಗಳಿಗೆ ₹ 5 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಇಷ್ಟು ಹಣ ಬಿಡುಗಡೆಯಾದರೂ, ಇದರ ಒಳಾಂಗಣ ಭೂತ ಬಂಗಲೆಯಂತಿದೆ.

ಹನೂರು ತಾಲ್ಲೂಕಿನ ಬಹುತೇಕ ಎಲ್ಲ ವೈದ್ಯರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಲಾಗಿದೆ. ಹೀಗಾಗಿ, ಇವರು ಒಂದು ಕೇಂದ್ರದಲ್ಲಿ ವಾರದಲ್ಲಿ ಎರಡು ದಿನ ಸಿಕ್ಕರೆ ಹೆಚ್ಚು ಎನ್ನುವಂತಾಗಿದೆ. ಮೀಣ್ಯಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳೆದ 5 ವರ್ಷದಿಂದ ವೈದ್ಯರಿಲ್ಲ. ‘ವೈದ್ಯರು ಇಲ್ಲ’ ಎಂಬ ಮಾತು ಕೇಳಿ ಕೇಳಿ ರೋಸಿ ಹೋಗಿರುವ ತಾಲ್ಲೂಕಿನ ಜನ, ಹೋಲಿ ಕ್ರಾಸ್ ಎಂಬ ಆಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದಾರೆ.

ಹನೂರು ತಾಲ್ಲೂಕಿನಲ್ಲಿರುವ ಈ ಬಗೆಯ ಸಮಸ್ಯೆಗಳಿಂದಾಗಿ, ಸೂಕ್ತ ಚಿಕಿತ್ಸೆಗೆ ಸಿಗದೇ ನಿತ್ಯವೂ ಇಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

ಕೊಳ್ಳೇಗಾಲ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್‌ ಹಾಗೂ ಕೋವಿಡ್‌ ಹೊರತಾದ ರೋಗಿಗಳನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಒಂದೇ ಬೆಡ್‌ ಮೇಲೆ ಮಲಗಿಸುತ್ತಾರೆ. ಕನಿಷ್ಠ ಬೆಡ್‌ ಮೇಲಿನ ಹೊದಿಕೆಯನ್ನೂ ಬದಲಿಸುತ್ತಿಲ್ಲ. ಒಂದೇ ಆಂಬುಲೆನ್ಸ್‌ನಲ್ಲಿ ಹಲವು ರೋಗಿಗಳನ್ನು ಕಳುಹಿಸುತ್ತಾರೆ ಎಂಬ ಆರೋಪವೂ ಇದೆ.

ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮಧುಮೇಹ, ರಕ್ತದೊತ್ತಡದ ರೋಗಿಗಳಿಗೆ ತಪಾಸಣೆ ನಡೆಸುತ್ತಿಲ್ಲ. ಇದರಿಂದ ರೋಗ ಉಲ್ಬಣಗೊಂಡು ಜೀವಕ್ಕೆ ಅಪಾಯ ಒದಗುವ ಸಾಧ್ಯತೆ ಇದೆ ಎನ್ನುತ್ತಾರೆ ಕುಂದಕೆರೆ ಗ್ರಾಮದ ಸಂಪತ್‌.

ಜಿಲ್ಲಾಡಳಿತ ನಿರಂತರವಾದ ಸಭೆಗಳನ್ನು ಮಾಡುತ್ತಿದೆ. ‘ಸಭೆಯಲ್ಲಿ ಭಾಗವಹಿಸುವುದಕ್ಕೇ ಹೆಚ್ಚಿನ ಸಮಯ ವ್ಯಯವಾಗುತ್ತಿದೆ’  ಎಂದು ಬೇಸರ ವ್ಯಕ್ತಪಡಿಸುತ್ತಾರೆ, ಹೆಸರು ಬಹಿರಂಗಪಡಿಸಲು ಬಯಸದ ವೈದ್ಯಾಧಿಕಾರಿಯೊಬ್ಬರು.

ಎಚ್ಚೆತ್ತ ಸಚಿವ, ಜಿಲ್ಲಾಡಳಿತ!

ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಹಲವು ಮಂದಿ ಮೃತಪಟ್ಟ ಬಳಿಕ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಅವರು ವಾರಕ್ಕೆರಡು ಬಾರಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇವರು ಭೇಟಿ ಕೊಡುವ ಕೋವಿಡ್ ಕೇಂದ್ರಗಳಲ್ಲಿ ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆದರೆ, ಕೆಲವೆಡೆ ಸರಿಯಾಗಿ ಊಟ ಕೊಡುತ್ತಿಲ್ಲ, ಸ್ವಚ್ಛತೆ ಇಲ್ಲ ಎಂದು ಸೋಂಕಿತರು ದೂರುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು