ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪ್ರಭಾವ; ಕಳೆಗಟ್ಟದ ಗೊಂಬೆಮನೆ

ದಸರಾ ರಾಜ ರಾಣಿಗಿಲ್ಲ ಆಹ್ವಾನ: ನೆರೆಯವರನ್ನು ಕರೆಯಲು ವನಿತೆಯರಿಗೆ ನಿರಾಸಕ್ತಿ
Last Updated 17 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಯಳಂದೂರು: ಮನೆಗಳಲ್ಲಿ ಆಚರಿಸುವ ದಸರಾದ ಮೇಲೆಯೂ ಕೋವಿಡ್‌ ಪರಿಣಾಮ ಬೀರಿದೆ. ಮಹಿಳೆಯರು ಯುವತಿಯರು ಈ ಬಾರಿ ದಸರಾ ಗೊಂಬೆ ಕೂರಿಸಲು ಹೆಚ್ಚು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.

ಪ್ರತಿ ವರ್ಷ ದಸರಾ ಸಮಯದಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಜೋಡಿಸುವುದೇ ಸಂಭ್ರಮದ ಗಳಿಗೆ. ವನಿತೆಯರು ಚಿಣ್ಣರು ಉತ್ಸಾಹದಿಂದಲೇ ಇದರಲ್ಲಿ ಪಾಲ್ಗೊಳ್ಳುತ್ತಿದ್ದರು.ಪಟ್ಟಣದ ಬೀದಿಗಳಲ್ಲಿ ಅಂತಹ ಉತ್ಸಾಹ ಈ ಬಾರಿ ಕಂಡು ಬಂದಿಲ್ಲ.

ಅಟ್ಟ ಏರಿದ್ದ ಗೊಂಬೆಗಳನ್ನು ಇಳಿಸಲು ಮಕ್ಕಳು, ಯುವತಿಯರು ಮುಂದಾಗುತ್ತಿದ್ದರು. ಗೊಂಬೆಗಳ ನಡಿಗೆಯ ದರ್ಬಾರು ಸಂಸ್ಕೃತಿಯ ದ್ಯೋತಕವಾಗಿತ್ತು. ಕೂಡು ಕುಟುಂಬದ ಗದ್ದಲದಲ್ಲಿ ಸೃಜನಶೀಲತೆ ಒಡಮೂಡುತ್ತಿತ್ತು. ಆದರೆ, ಕೋವಿಡ್ ವ್ಯಾಪಕರವಾಗಿ ಹರಡುತ್ತಿರುವ ಕಾರಣದಿಂದ ಅನೇಕರು ಕಡಿಮೆ ಸಂಖ್ಯೆಯ ಗೊಂಬೆ ಇಟ್ಟು ನವರಾತ್ರಿ ಆಚರಿಸುತ್ತಿದ್ದಾರೆ.

ನವರಾತ್ರಿಯ ಸೊಬಗಿನೊಂದಿಗೆ ಬಂಧು-ಬಾಂಧವರು ಸ್ನೇಹಿತರು ಮನೆಗಳಿಗೆ ಬರುವುದು ಸಾಮಾನ್ಯ. ಪ್ರೀತಿ, ವಿಶ್ವಾಸದ ಜೊತೆಗೆ ಸಿಹಿಯ ವಿತರಣೆಯೂ ನಡೆಯುತ್ತಿತ್ತು. ಈಗ ಕೊರೊನಾ ಹಿನ್ನಲೆಯಲ್ಲಿ ಯಾರನ್ನು ಕರೆಯಲು ಜನರಲ್ಲಿ ಉತ್ಸಾಹ ಇಲ್ಲವಾಗಿದೆ.

ಗೊಂಬೆ ಕೂರಿಸುವ ಪದ್ಧತಿ ನೂರಾರು ವರ್ಷಗಳ ಚರಿತ್ರೆಯನ್ನು ಹೊಸ ಪೀಳಿಗೆಗೆ ದಾಟಿಸುತ್ತದೆ. ವಿಜಯನಗರ ಮತ್ತು ಮೈಸೂರು ಅರಸರ ಕಾಲದ ಸಾಂಸ್ಕೃತಿಕ ಬದುಕನ್ನು ಕಣ್ಣ ಮುಂದೆ ತರುತ್ತದೆ. ಆದರೆ, ಈ ವರ್ಷ ಜನರು ಸಂಪ್ರದಾಯಕ್ಕೆ ಕಟ್ಟುಬಿದ್ದು, ಸಾಂಕೇತಿಕವಾಗಿ ಗೊಂಬೆ ಕೂರಿಸಲು ಮುಂದಾಗಿದ್ದಾರೆ.

‘ಮಂಟಪ ರಚಿಸಿ ಗೊಂಬೆ ಕೂರಿಸುವುದು ವಾಡಿಕೆ. ಮೊದಲ ಮೆಟ್ಟಿಲಿನಲ್ಲಿ ರಾಜ ರಾಣಿ, ಕೆಳ ಭಾಗದಲ್ಲಿ ಕಳಸ ಕಡ್ಡಾಯ. ಹಳೆಯ ಗೊಂಬೆಗಳ ಜತೆಗೆ ಹೊಸ ಬೊಂಬೆಗಳನ್ನು ಕೂರಿಸುತ್ತಿದ್ದರು. ಹಾಗಾಗಿ, ಮರದ ಬೊಂಬೆಗಳ ಜತೆ ಹೊಸದಾಗಿ ನಾನೇ ತಯಾರಿಸಿದ ಗೊಂಬೆಯನ್ನು ಇಟ್ಟು ಹಬ್ಬ ಆಚರಿಸುತ್ತೇನೆ. ಪ್ರತಿ ವರ್ಷ ಖರೀದಿಸಿ ಈ ವರ್ಷ ಗೊಂಬೆಗಳ ಸಂಖ್ಯೆ 1,200 ದಾಟಿದೆ’ ಎನ್ನುತ್ತಾರೆ ದೇವಾಂಗ ಬೀದಿಯ ಅಶ್ವಿನಿ ಜಗದೀಶ್.

‘ಆದರೆ, ಈ ಬಾರಿ ಕೋವಿಡ್‌ ಕಾರಣದಿಂದ ಎಲ್ಲ ಗೊಂಬೆಗಳನ್ನು ತೆಗೆದಿಲ್ಲ. 250ರಿಂದ 300 ಗೊಂಬೆಗಳನ್ನು ಮಾತ್ರ ಕೂರಿಸಿದ್ದೇನೆ’ ಎಂದು ಅಶ್ವಿನಿ ಅವರು ಹೇಳಿದರು.

ಅವರ ನೆರೆಹೊರೆಯ ಮನೆವರು ಪ್ರತಿ ವರ್ಷ ಗೊಂಬೆಗಳನ್ನು ಇರಿಸುತ್ತಿದ್ದರು. ಈ ಬಾರಿ ಯಾರೂ ಇಟ್ಟಿಲ್ಲ.

‘ಪಟ್ಟದ ಗೊಂಬೆ ಇಟ್ಟು ಕಳಸ ಪ್ರತಿಷ್ಠಾಪಿಸಿದ ಬಳಿಕ ಯಾವುದೇ ಗೊಂಬೆ ಇಡುವಂತಿಲ್ಲ. ಒಮ್ಮೆ ಇಟ್ಟ ಗೊಂಬೆಗಳನ್ನು ಬೇರಡೆ ಸ್ಥಳಾಂತರಿಸುವಂತಿಲ್ಲ. ಹಬ್ಬ ಮುಕ್ತಾಯದ ನಂತರ ಇವುಗಳನ್ನು ಶಾಸ್ತ್ರೋಕ್ತ ಪೂಜೆಯ ನಂತರ ತೆಗೆಯಲಾಗುವುದು’ ಎಂದು ಸ್ಥಳೀಯರಾದ ಸವಿತಾ ಸೋಮಣ್ಣ ಹೇಳಿದರು.

‘ಪಟ್ಟಣದ ಹಲವೆಡೆ ದಸರಾ ಹಬ್ಬದ ವೇಳೆ ಗೊಂಬೆ ಸ್ಪರ್ಧೆ ಆಯೋಜಿಸಿ, ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಪೆಟ್ಟಿಗೆ, ಶೋಕೇಸ್‌ನಲ್ಲಿದ್ದ ಬೊಂಬೆಗಳು ಆಗ ಹೊರ ಬರುತ್ತಿತ್ತು. ಪ್ರತಿ ರಾತ್ರಿ ಬೊಂಬೆ ಮನೆಯಲ್ಲಿ ಯುವತಿಯರ ಕಲರವ ರಂಗು ತುಂಬುತ್ತಿತ್ತು. ಈ ಬಾರಿ ನಿರಾಸೆಯಾಗಿದೆ. ಕೊರೊನಾ ಕಾರಣಕ್ಕೆ ಹೆಚ್ಚಿನ ಉತ್ಸಾಹ ಕಂಡುಬರುತ್ತಿಲ್ಲ’ ಎಂದು ಪಟ್ಟಣದ ರಾಧ ಗೋಪಾಲಕೃಷ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT