ಗುರುವಾರ , ಆಗಸ್ಟ್ 18, 2022
23 °C
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸಾಮೂಹಿಕ ಕಾಮಗಾರಿಗೆ ತಡೆ

ಕೋವಿಡ್ ಹೆಚ್ಚಳ: ನರೇಗಾ ಸ್ಥಗಿತ, ವೈಯಕ್ತಿಕ ಕೆಲಸಕ್ಕೆ ಒತ್ತು

ಮಲ್ಲೇಶ್‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಕೋವಿಡ್‌ ಸೋಂಕು ಪ್ರತಿ ದಿನವೂ ಹೆಚ್ಚುತ್ತಿದ್ದು, ನರೇಗಾ ಕಾಮಗಾರಿಯ ಮೇಲೂ ಪರಿಣಾಮ ಬೀರಿದೆ.

ತಾಲ್ಲೂಕಿನ ಅನೇಕ ಪಂಚಾಯಿತಿಗಳಲ್ಲಿ ಸೋಂಕು ಕಡಿಮೆ ಆಗುವವರೆಗೂ ನರೇಗಾ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಲಾಕ್‌ಡೌನ್‌ನಿಂದಾಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು ಗ್ರಾಮೀಣ ಜನರಿಗೆ ಕೆರೆ ಕಾಮಗಾರಿ ಸೇರಿದಂತೆ, ಅನೇಕ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದವು.

ಆದರೆ ನರೇಗಾ ಕೆಲಸಕ್ಕೆ ಒಂದೇ ಬಾರಿಗೆ ಹಿರಿಯ ಗ್ರಾಮದಲ್ಲಿ 800 ಜನರು ಭಾಗಿಯಾಗುತ್ತಿದ್ದರು. ಹೀಗಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದಾಗಲಿ, ಕನಿಷ್ಠ ಅಂತರ ಕಾಪಾಡುವುದು ಅಸಾಧ್ಯವಾಗಿತ್ತು. ಇದನ್ನು ಅರಿತು ಮುಂಜಾಗ್ರತಾ ಕ್ರಮವಾಗಿ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ನರೇಗಾ ಕೆಲಸಕ್ಕೆ ಕಡಿಮೆ ಕಾರ್ಮಿಕರು ಬರುವ ಗ್ರಾಮಗಳಲ್ಲಿ ಕಾಮಗಾರಿ ಮುಂದುವರೆಸಲಾಗಿದೆ. ಇವರು ಮಾಸ್ಕ್ ಧರಿಸಿ, ಕನಿಷ್ಠ ಅಂತರ ಪಾಲನೆ ಮಾಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿರುವುದರಿಂದ ಕೆಲ ಗ್ರಾ.ಪಂ.ಗಳಲ್ಲಿ ನರೇಗಾ ಎಂಜಿನಿಯರ್ ಮತ್ತು ಪಿಡಿಒಗಳು ಕೆರೆ ಕೆಲಸಕ್ಕೆ ಬರುವವರಿಗೆ ಒಂದು ಗುಂಡಿಗೆ 10 ಅಡಿ ಅಂತರ ನೀಡಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡುತ್ತಿದ್ದಾರೆ.

ವೈಯಕ್ತಿಕ ಕೆಲಸಕ್ಕೆ ಆದ್ಯತೆ: ಗ್ರಾಮಗಳಲ್ಲಿ ಜನರು ಸಾಮೂಹಿಕವಾಗಿ ನಿರ್ವಹಿಸುವ ಕಾಮಗಾರಿಗಳಾದ ಕೆರೆ ಹೂಳೆತ್ತುವುದು, ಕಾಲುವೆ ನಿರ್ಮಾಣ ಸೇರಿದಂತೆ ಇನ್ನಿತರ ಕೆಲಸಕ್ಕೆ ಬ್ರೇಕ್ ಹಾಕಲಾಗಿದ್ದು, ವೈಯಕ್ತಿಕವಾಗಿ ಇಂಗು ಗುಂಡಿ ನಿರ್ಮಾಣ, ಬಚ್ಚಲು ಗುಂಡಿ ನಿರ್ಮಾಣದಂತಹ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಪಿಡಿಒ ಕುಮಾರಸ್ವಾಮಿ ತಿಳಿಸಿದರು.

ಜಾಗೃತಿ: ದಿನೇ ದಿನೇ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸೋಂಕು ಉಲ್ಭಣವಾಗುತ್ತಿರುವುದರಿಂದ ಕೆಲ ಗ್ರಾಮ ಪಂಚಾಯಿತಿಯವರು ಮೈಕ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ತಪ್ಪಿದ್ದಲ್ಲಿ ₹ 100 ದಂಡ, ಒಂದೇ ಕಡೆ ಹೆಚ್ಚು ಜನ ಸೇರಬಾರದು ಎಂದು ತಿಳಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು