ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕೋವಿಡ್‌ ಲಸಿಕಾಕರಣ: ಸಿಗಬೇಕಿದೆ ಇನ್ನಷ್ಟು ವೇಗ

ಮೊದಲ ಡೋಸ್‌ ಶೇ 87ರಷ್ಟು ಪೂರ್ಣ; ಇನ್ನೂ ಲಸಿಕೆ ಪಡೆಯಬೇಕಿದೆ 60 ಸಾವಿರ ಮಂದಿ
Last Updated 4 ಡಿಸೆಂಬರ್ 2021, 16:13 IST
ಅಕ್ಷರ ಗಾತ್ರ

ಚಾಮರಾಜನಗರ: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ರಾಜ್ಯಕ್ಕೆ ಕಾಲಿಟ್ಟ ಹೊತ್ತಿನಲ್ಲೇ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮೂರನೇ ಆಲೆಯ ಸಾಧ್ಯತೆ ಸೃಷ್ಟಿಯಾಗಿದೆ.

ಕೋವಿಡ್‌ನ ತೀವ್ರತೆಯಿಂದ ಜನರಿಗೆ ರಕ್ಷಣೆ ಒದಗಿಸಲು ಕೋವಿಡ್‌ ಲಸಿಕೆ ಹಾಕುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಇನ್ನೂ ಆಗಿಲ್ಲ. ಲಸಿಕೆಗಳು ಸಾಕಷ್ಟು ದಾಸ್ತಾನು (50 ಸಾವಿರಕ್ಕೂ ಹೆಚ್ಚು) ಇದ್ದರೂ, ಆರೋಗ್ಯ ಇಲಾಖೆಯ ಅಧಿಕಾರಿ– ಸಿಬ್ಬಂದಿಯ ಸತತ ಪ್ರಯತ್ನದ ನಡುವೆಯೂ ಮೊದಲ ಡೋಸ್‌ ಅನ್ನು ಅರ್ಹರೆಲ್ಲರು ಇನ್ನೂ ಪಡೆದಿಲ್ಲ.

ಈಗ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಹೆಚ್ಚು ಜನರಿಗೆ ಲಸಿಕೆ ಹಾಕಲು ಪ್ರಯತ್ನ ಮುಂದುವರೆಸಿದ್ದು, ಬುಡಕಟ್ಟು ಸಮುದಾಯದವರು ಹಾಗೂ ಗ್ರಾಮೀಣ ಪ್ರದೇಶದ ಜನರು ಈಗಲೂ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ.

ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ 7.78 ಲಕ್ಷ ಜನರನ್ನು ಸರ್ಕಾರ ಗುರುತಿಸಿದೆ. ಅಷ್ಟೂ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಸರ್ಕಾರ ಜಿಲ್ಲಾಡಳಿತಕ್ಕೆ ನೀಡಿದೆ. ಈ ವರ್ಷದ ಆರಂಭದಲ್ಲೇ ಲಸಿಕಾಕರಣ ಪ್ರಕ್ರಿಯೆ ಆರಂಭವಾಗಿತ್ತು. ಇದುವರೆಗೆ ಮೊದಲ ಡೋಸ್‌ ಲಸಿಕಾಕರಣ ಶೇ 87ರಷ್ಟು ಪ್ರಗತಿಯಾಗಿದೆ.

ಆರೋಗ್ಯ ಇಲಾಖೆ ನೀಡಿರುವ ಅಂಕಿ– ಅಂಶಗಳ ಪ್ರಕಾರ, ಶುಕ್ರವಾರದವರೆಗೆ (ಡಿ.3)6,79,529 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ನಿಗದಿತ ಗುರಿಯ ಪ್ರಕಾರ, ಇನ್ನೂ 99 ಸಾವಿರ ಮಂದಿ ಮೊದಲ ಡೋಸ್‌ ಲಸಿಕೆ ಹಾಕಿಸಿಕೊಂಡಿಲ್ಲ.

‘7.78 ಲಕ್ಷ ಮಂದಿಯಲ್ಲಿ 30 ಸಾವಿರ ಜನರು ಬೆಂಗಳೂರು ಸೇರಿದಂತೆ ಇತರ ಊರುಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲ ಅಲ್ಲೇ ಲಸಿಕೆ ಪಡೆದಿರುವ ಸಾಧ್ಯತೆ ಇದೆ. ಹಾಗಾಗಿ, ಅಷ್ಟು ಮಂದಿ ನಮ್ಮ ಜಿಲ್ಲೆಯಲ್ಲಿ ಲಸಿಕೆ ಪಡೆಯುವುದಿಲ್ಲ. ಇಷ್ಟು ಜನರನ್ನು ಬಿಟ್ಟರೂ ಅಂದಾಜು 69 ಸಾವಿರ ಮಂದಿ ಇನ್ನೂ ಮೊದಲ ಡೋಸ್‌ ಪಡೆದಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ 179 ಗ್ರಾಮ ಪಂಚಾಯಿತಿಗಳಲ್ಲಿ ಶೇ 100ರಷ್ಟು ಮಂದಿ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಗಿರಿಜನರು ಹೆಚ್ಚಾಗಿ ವಾಸವಿರುವ ಪ್ರದೇಶಗಳಲ್ಲಿ, ಮೂಲಸೌಕರ್ಯ ವಂಚಿತ ಗ್ರಾಮಗಳಲ್ಲಿ ಲಸಿಕಾಕರಣ ನಿಧಾನವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮುದಾಯದ, ಊರಿನ ಮುಖಂಡರು, ಆಶಾ, ಅಂಗನವಾಡಿ ಕಾರ್ಯಕರ್ತರು ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ಲಸಿಕೆ ನೀಡಲು ಯತ್ನಿಸುತ್ತಿದ್ದಾರೆ. ಲಸಿಕೆ ಬಗ್ಗೆ ಭಯ ಹೊಂದಿರುವವರ ಮನವೊಲಿಸಲು ಶ್ರಮಿಸುತ್ತಿದ್ದಾರೆ.

ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು, ಎಲ್ಲ ಇಲಾಖೆಗಳು ತಮ್ಮ ಫಲಾನುಭವಿಗಳಲ್ಲಿ ಯಾರು ಲಸಿಕೆ ಪಡೆದಿಲ್ಲ ಎಂಬುದನ್ನು ಗುರುತಿಸಿ ಆರೋಗ್ಯ ಇಲಾಖೆಯೊಂದಿಗೆ ಸೇರಿ ಅವರಿಗೆ ಲಸಿಕೆ ಕೊಡಿಸುವುದಕ್ಕೆ ಶ್ರಮಿಸಬೇಕು ಎಂದು ತಾಕೀತು ಮಾಡಿದ್ದರು. ಆದಾದ ಬಳಿಕ ಮೊದಲ ಡೋಸ್‌ ಪಡೆಯುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಐದು ದಿನಗಳ ಅಂಕಿ– ಅಂಶಗಳನ್ನು ಗಮನಿಸಿದರೆ, ಪ್ರತಿ ದಿನ 2,500ಕ್ಕಿಂತಲೂ ಹೆಚ್ಚು ಮಂದಿ ಮೊದಲ ಡೋಸ್‌ ಲಸಿಕೆ ಪಡೆಯುತ್ತಿದ್ದಾರೆ.

ಎರಡನೇ ಡೋಸ್‌ಗೂ ಒತ್ತು

ಜಿಲ್ಲೆಯಲ್ಲಿ ಇದುವರೆಗೆ11,76,286 ಡೋಸ್‌ ಲಸಿಕೆ ನೀಡಲಾಗಿದೆ.4,96,757 ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಕೋವಿಶೀಲ್ಡ್‌ ಲಸಿಕೆ ಪಡೆದವರು ಮೊದಲ ಡೋಸ್‌ ಪಡೆದು 84 ದಿನಗಳ ನಂತರ ಎರಡನೇ ಡೋಸ್‌ ಪಡೆಯಬೇಕು. ಕೋವ್ಯಾಕ್ಸಿನ್‌ ಲಸಿಕೆಯ ಮೊದಲ ಡೋಸ್‌ ಪಡೆದವರು 28 ದಿನಗಳ ನಂತರ ಎರಡನೇ ಡೋಸ್‌ ಪಡೆಯಬೇಕು.

ಜಿಲ್ಲಾಡಳಿತವು ಮೊದಲ ಡೋಸ್‌ ನೀಡುವುದರ ಜೊತೆಗೆ, ಮೊದಲ ಡೋಸ್‌ ಪಡೆದು ಸಮಯ ಆದವರು ಎರಡನೇ ಡೋಸ್‌ ಪಡೆಯುವಂತೆ ಮಾಡಲೂ ಗಮನ ಹರಿಸುತ್ತಿದೆ. ಪ್ರತಿ ದಿನ ಕನಿಷ್ಠ 20 ಸಾವಿರ ಮಂದಿಗೆ ಲಸಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿಯು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.

‘ಅರ್ಹ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಸಮಸ್ಯೆ ಕಂಡು ಬಂದ ಕಡೆಗಳಲ್ಲಿ ಜನರನ್ನು ಮನವೊಲಿಸಿ ಲಸಿಕೆ ನೀಡಲಾಗುತ್ತಿದೆ. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಲಸಿಕಾಕರಣವನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಅದರಂತೆ ಕಾರ್ಯನಿರ್ವಹಿಸಲಾಗುತ್ತಿದೆ. ಕೆಲವು ದಿನಗಳಿಂದ ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲಿ ಗುರಿ ತಲುಪಲಿದ್ದೇವೆ’ ಎಂದು ಆರ್‌ಸಿಎಚ್‌ ಅಧಿಕಾರಿ ಡಾ.ಅಂಕಪ್ಪ ತಿಳಿಸಿದರು.

--

ಸದ್ಯದ ಮಟ್ಟಿಗೆ ಕೋವಿಡ್‌ ವಿಚಾರದಲ್ಲಿ ಲಸಿಕೆಯೊಂದೇ ಜೀವರಕ್ಷಕ. ಜನರು ಅನಗತ್ಯ ಭಯ ಪಡದೆ ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಹಾಕಿಸಿಕೊಳ್ಳಬೇಕು

-ಡಾ.ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT