ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕರ್ಫ್ಯೂ: ಗಡಿಜಿಲ್ಲೆ ಚಾಮರಾಜನಗರ ಸ್ತಬ್ಧ

ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳು ಲಭ್ಯ, ತುರ್ತು ಪರಿಸ್ಥಿತಿಯಲ್ಲಿ ಓಡಾಟಕ್ಕೆ ಅವಕಾಶ
Last Updated 24 ಏಪ್ರಿಲ್ 2021, 12:57 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ 2ನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಘೋಷಿಸಿರುವ ವಾರಾಂತ್ಯ ಕರ್ಫ್ಯೂನ ಮೊದಲ ದಿನವಾದ ಶನಿವಾರ ಜಿಲ್ಲೆಯಾದ್ಯಂತ ಸಂಪೂರ್ಣ ಯಶಸ್ವಿಯಾಗಿದ್ದು, ವ್ಯಾಪಾರ ವಹಿವಾಟು ಸ್ಪಬ್ಧಗೊಂಡಿತ್ತು.

ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳನ್ನು ತೆರೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಔಷಧ ಅಂಗಡಿಗಳು, ದಿನಸಿ ಅಂಗಡಿ, ದಿನಪತ್ರಿಕೆ, ಹಾಲಿನ ಕೇಂದ್ರ, ಹಣ್ಣು ತರಕಾರಿ ಅಂಗಡಿಗಳು, ಬೇಕರಿ, ಕೆಲವು ಹೋಟೆಲ್‌ಗಳು ತೆರೆದಿದ್ದವು. ಉಳಿದ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇರಲಿಲ್ಲ.

ಕಡಿಮೆ ಸಂಖ್ಯೆಯಲ್ಲಿದ್ದ ಗ್ರಾಹಕರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿದರು. 10 ಗಂಟೆಯಾಗುತ್ತಲೇ ಔಷಧ ಅಂಗಡಿಗಳು ಬಿಟ್ಟು ಉಳಿದೆಲ್ಲ ಅಂಗಡಿಗಳು ಮುಚ್ಚಿದವು. ಬಹುತೇಕ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದರು. ಇನ್ನೂ ಕೆಲವನ್ನು ಪೊಲೀಸರು ಮುಚ್ಚಿಸಿದರು. ಮಳಿಗೆಗಳಿಗೆ ಬಂದಿದ್ದ ಗ್ರಾಹಕರನ್ನು ಮನೆಗೆ ತೆರಳುವಂತೆ ಸೂಚಿಸಿದರು.

ಆಸ್ಪತ್ರೆ, ಕ್ಲಿನಿಕ್‌ಗಳು, ಔಷಧ ಅಂಗಡಿಗಳು ಇಡೀ ದಿನ ತೆರೆದಿದ್ದವು. ಉಳಿದೆಲ್ಲ ಮಳಿಗೆಗಳು ಮುಚ್ಚಿದ್ದರಿಂದ ನಗರ ಮತ್ತು ಪಟ್ಟಣಗಳ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಬಸ್‌ ಇದ್ದರೂ ಜನ ಇರಲಿಲ್ಲ: ಕರ್ಫ್ಯೂ ಕಾರಣದಿಂದ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳಿದ್ದವು. ಆದರೆ, ಪ್ರಯಾಣಿಕರಿರಲಿಲ್ಲ. ಬೆಳಿಗ್ಗೆ 10 ಗಂಟೆಯವರೆಗೆ ಬೆರಳೆಣಿಕೆಯಷ್ಟು ಪ್ರಯಾಣಿಕರಿದ್ದರು. 10 ಗಂಟೆಯ ನಂತರ ಬಸ್‌ನಲ್ಲಿ ಓಡಾಡುವವರೇ ಇರಲಿಲ್ಲ.

ಪೊಲೀಸ್‌ ಬಂದೋಬಸ್ತ್‌:ಕರ್ಫ್ಯೂ ಅವಧಿಯಲ್ಲಿ ಜನರ ಸಂಚಾರಕ್ಕೂ ಅವಕಾಶ ಇರಲಿಲ್ಲ. ಹಾಗಿದ್ದರೂ ಅಗತ್ಯ ಕೆಲಸಗಳಿಗೆ ಹೋಗುವವರಿಗೆ, ದೂರದ ಊರಿಂದ ಬರುವವರ ಸಂಚಾರಕ್ಕೆ ತೊಡಕಾಗಲಿಲ್ಲ.

ಜಿಲ್ಲೆಯಾದ್ಯಂ ಪೊಲೀಸರು ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಂಡಿದ್ದರು. ಚಾಮರಾಜನಗರದಲ್ಲಿ ಸೋಮವಾರ ಪೇಟೆ, ಸಂತೇಮರಹಳ್ಳಿ ವೃತ್ತ, ಗುಂಡ್ಲುಪೇಟೆ ಸರ್ಕಲ್‌, ನಂಜನಗೂಡು ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ಸಂಚಾರ ಮಾಡುತ್ತಿದ್ದ ವಾಹನಗಳನ್ನು ತಡೆದು ಪೊಲೀಸರು ವಿಚಾರಿಸುತ್ತಿದ್ದಾರೆ.

ಪೊಲೀಸ್‌ ನಿಗಾವಣೆ ಇದ್ದರೂ, ನಗರದಲ್ಲಿ ಕೆಲವರು ಅನಗತ್ಯವಾಗಿ ದ್ವಿಚಕ್ರವಾಹನಗಳಲ್ಲಿ ಓಡಾಡುತ್ತಿದ್ದರು. ಪೊಲೀಸರು ಅವರನ್ನು ತಡೆದು ವಿಚಾರಿಸಿ ಎಚ್ಚರಿಕೆ ನೀಡಿದರು. ಕೆಲವರಿಗೆ ದಂಡವನ್ನೂ ವಿಧಿಸಿದರು.

ಕೋವಿಡ್‌ ಕರ್ಫ್ಯೂ ಉಲ್ಲಂಘನೆಗಾಗಿ ಪೊಲೀಸರು ಈವರೆಗೆ 52 ಪ್ರಕರಣಗಳನ್ನು ದಾಖಲಿಸಿದ್ದಾರೆ.

‘ವಾರಾಂತ್ಯದ ಕರ್ಫ್ಯೂ ಮೊದಲ ದಿನ ಯಶಸ್ವಿಯಾಗಿ ನಡೆದಿದೆ. ಜಿಲ್ಲೆಯ ಜನತೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ನಾವು ಸ್ವಲ್ಪ ಸಾರ್ವಜನಿಕರಿಗೆ ಸ್ವಲ್ಪ ಬಲವಂತ ಮಾಡಬೇಕಿತ್ತು. ಆದರೆ, ಶನಿವಾರ ಜನರೇ ಸ್ವತಃ ಸ್ವಯಂ ಪ್ರೇರಿತರಾಗಿ ಮನೆಯಲ್ಲೇ ಉಳಿದಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಸಂಚಾರ ಮಾಡುವವರಿಗೆ ಅವಕಾಶ ನೀಡಲಾಗಿತ್ತು. ಅನಗತ್ಯವಾಗಿ ಓಡಾಡುತ್ತಿದ್ದವರನ್ನು ತಡೆದು ಎಚ್ಚರಿಸಿದ್ದೇವೆ. ದಂಡವನ್ನೂ ವಿಧಿಸಿದ್ದೇವೆ. ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಮುಂದುವರಿಯಲಿದೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT