ಶುಕ್ರವಾರ, ಜುಲೈ 30, 2021
28 °C

ಕೋವಿಡ್‌ ಗೆದ್ದವರ ಕಥೆಗಳು | ಕೀಳಾಗಿ ಕಾಣಬೇಡಿ, ಧೈರ್ಯತುಂಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಕೋವಿಡ್‌–19 ದೃಢಪಟ್ಟ ನಂತರ ಒಂದೇ ದಿನದಲ್ಲಿ ಈ ರೋಗದ ಬಗ್ಗೆ ಹೆದರುವ ಅಗತ್ಯವಿಲ್ಲ ಎಂಬುದು ಮನವರಿಕೆಯಾಯಿತು. ಜನರು ಮಾತನಾಡಿಕೊಳ್ಳುವ ರೀತಿಯಲ್ಲಿ ಹಾಗೂ ಟಿವಿ ಮಾಧ್ಯಮಗಳು ಬಿಂಬಿಸುವಷ್ಟು ಮಾರಣಾಂತಿಕ ಕಾಯಿಲೆ ಅಲ್ಲ ಇದು.

ಸಮಾಜ ಸೋಂಕಿತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಅವರನ್ನು ವಿಚಿತ್ರವಾಗಿ, ಕೀಳಾಗಿ ಕಾಣುವ ಬದಲು ಧೈರ್ಯ ತುಂಬುವ ಕೆಲಸ ಮಾಡಬೇಕು. ಇದರಿಂದ ಸೋಂಕಿತರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆತ್ಮಬಲ ಇದ್ದರೆ ಕೋವಿಡ್ ಅನ್ನು ಸುಲಭವಾಗಿ ಜಯಿಸಬಹುದು. 

ಮೆಕ್ಯಾನಿಕ್ ಆಗಿರುವ ನನಗೆ ಹೇಗೆ ಸೋಂಕು ತಗುಲಿತು ಎಂಬುದೇ ಗೊತ್ತಿಲ್ಲ. ನಾನು ಹೊರ ರಾಜ್ಯಗಳಿಗೆ, ಬೇರೆ ಜಿಲ್ಲೆಗಳಿಗೂ ಪ್ರಯಾಣ ಮಾಡಿರಲಿಲ್ಲ. ಜ್ವರ ಬಂದ ಕಾರಣಕ್ಕೆ ಆಸ್ಪತ್ರೆಗೆ ಹೋದಾಗ ಗಂಟಲು ದ್ರವ ಸಂಗ್ರಹಿಸಿದರು. ಮೂರು ದಿನಗಳ ನಂತರ ಸೋಂಕು ತಗುಲಿದೆ ಎಂದು ಮಾಹಿತಿ ಬಂತು. ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚಾಮರಾಜನಗರದಲ್ಲಿರುವ ಕೋವಿಡ್‌ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಕೋವಿಡ್‌ ಕೇರ್‌ ಕೇಂದ್ರದಲ್ಲಿ ಇರಿಸಿದ್ದರು.

ಹತ್ತು ದಿನಗಳ ಅಲ್ಲಿ ಇರಬೇಕಾಯಿತು. ಪ್ರತಿದಿನ ಮಾತ್ರೆ ಮತ್ತು ಒಳ್ಳೆಯ ಊಟ ನೀಡುತ್ತಿದ್ದರು ಅಷ್ಟೇ. ನಮ್ಮನ್ನು ಆರೈಕೆ ಮಾಡುವ ವೈದ್ಯರು ಮತ್ತು ನರ್ಸ್‌ಗಳು ಕೂಡ ನಮಗೆ ದೈರ್ಯ ತುಂಬುತ್ತಾರೆ. ಕೋವಿಡ್‌ ಬಂದವರು ಯಾರೂ ಭಯ ‍ಪಡಬೇಕಾಗಿಲ್ಲ. ಧೈರ್ಯದಿಂದ ಇದ್ದರೆ ಸಾಕು. 

ಆಸ್ಪತ್ರೆಯಿಂದ ಮನೆಗೆ ತೆರಳಿದ ನಂತರ, ಜನರು ನಮ್ಮನ್ನು ಅನುಮಾನದಿಂದ ನೋಡಬಾರದು. ಮೊದಲಿನಂತೆಯೇ ವರ್ತಿಸಬೇಕು. ಇಲ್ಲವಾದಲ್ಲಿ ಗುಣಮುಖರಾದವರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಕ್ಕಪಕ್ಕದ ಜನರು ಸೋಂಕು ಮುಕ್ತರಾದವರ ಮನಸ್ಸು ನೋಯಿಸುವಂತಹ ವರ್ತನೆ ತೋರಬಾರದು. 

–ಮುಬಾರಕ್‌, ಗುಂಡ್ಲುಪೇಟೆ

ನಿರೂಪಣೆ: ಮಲ್ಲೇಶ ಎಂ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು