ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಬೆಳೆ ನಷ್ಟ ಪರಿಹಾರ: ರೈತರಿಗೆ ಸಿಹಿ–ಕಹಿ

ಲಾಕ್‌ಡೌನ್‌ನಲ್ಲಿ ನಷ್ಟ ಅನುಭವಿಸಿದ ಹೂ,ತರಕಾರಿ ಹಣ್ಣುಗಳ ಬೆಳೆಗಾರರಿಗೆ ಸಿಕ್ಕಿಲ್ಲ ಪರಿಹಾರ
Last Updated 11 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಹಾವಳಿಗೆ ಹೇರಲಾಗಿದ್ದ ಲಾಕ್‌ಡೌನ್‌ ಅವಧಿಯಲ್ಲಿ ಬೆಳೆ ನಷ್ಟ ಅನುಭವಿಸಿದ್ದ ಜಿಲ್ಲೆಯ ತೋಟಗಾರಿಕಾ ಬೆಳೆಗಾರರಲ್ಲಿ ಕೆಲವರಿಗೆ ಪರಿಹಾರ ಬಂದಿದ್ದರೆ, ಇನ್ನೂ ಕೆಲವರಿಗೆ ಬಂದಿಲ್ಲ. ಅಧಿಕಾರಿಗಳು ಪರಿಹಾರ ಹಣ ನೀಡುವ ಭರವಸೆ ನೀಡುತ್ತಿದ್ದಾರೆ. ನಷ್ಟ ಅನುಭವಿಸಿರುವ ರೈತರು, ಪರಿಹಾರಕ್ಕಾಗಿ ಕಾಯಬೇಕಾಗಿದೆ.

ಲಾಕ್‌ಡೌನ್‌ ಸಮಯದಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೇ ಇದ್ದುದರಿಂದ ನಷ್ಟ ಅನುಭವಿಸಿರುವ ಹೂವು, ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಪರಿಹಾರದ ಪ್ಯಾಕೇಜ್‌ ಅನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಘೋಷಿಸಿದ್ದರು.

ಹೂವು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಹಾಗೂ ಬಾಳೆ, ತರಕಾರಿ, ಹಣ್ಣುಗಳಿಗೆ ಹೆಕ್ಟೇರ್‌ಗೆ ₹15 ಸಾವಿರ ಪರಿಹಾರ ಘೋಷಿಸಲಾಗಿತ್ತು.

ಜಿಲ್ಲೆಯಲ್ಲಿ ಹೂವು ನಷ್ಟದ ಪ್ರಮಾಣವನ್ನು ತಿಳಿಯಲು ಕಂದಾಯ ಹಾಗೂ ತೋಟಗಾರಿಕಾ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿತ್ತು.

ತರಕಾರಿ ಬೆಳೆಗಾರರಿಗೆ ಪರಿಹಾರ ನೀಡಲು ಈ ಹಿಂದೆ ನಡೆಸಿದ ಬೆಳೆ ಸಮೀಕ್ಷೆಯನ್ನೇ ಆಧಾರವಾಗಿಟ್ಟುಕೊಳ್ಳಲಾಗಿತ್ತು. ಹಣ್ಣು (ಕಲ್ಲಂಗಡಿ) ಮತ್ತು ಬಾಳೆ ಬೆಳೆಗಾರರಿಂದ ಮಾತ್ರ ತೋಟಗಾರಿಕಾ ಇಲಾಖೆ ಅರ್ಜಿ ಆಹ್ವಾನಿಸಿತ್ತು.

₹2.57 ಕೋಟಿ ನಷ್ಟ:ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯ 67 ರೈತರು 27.72 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಹೂವುಗಳು ಹಾನಿಗೀಡಾಗಿದೆ ಎಂದು ಸಮೀಕ್ಷೆ ಹೇಳಿತ್ತು. ₹2.57 ಕೋಟಿಗಳಷ್ಟು ನಷ್ಟವಾಗಿತ್ತು ಎಂದು ಅಂದಾಜಿಸಲಾಗಿತ್ತು.

ಯಡಿಯೂರಪ್ಪ ಅವರು ಘೋಷಿಸಿದ ಪ್ಯಾಕೇಜ್‌ ಪ್ರಕಾರ,67 ರೈತರಿಗೆ ₹6.93 ಲಕ್ಷ ಪರಿಹಾರ ಸಿಗಬೇಕಿತ್ತು. ಹೆಕ್ಟೇರ್‌ಗೆ ₹25 ಸಾವಿರದಂತೆ58 ಮಂದಿಗೆ ₹4.15 ಲಕ್ಷ ಬ್ಯಾಂಕ್‌ ಖಾತೆಗೆ ಜಮೆ ಆಗಿದೆ. ಇನ್ನು 11 ಮಂದಿಗೆ ಬಾಕಿ ಇದೆ. ಅವರಿಗೂ ಶೀಘ್ರದಲ್ಲಿ ಖಾತೆಗೆ ಜಮೆ ಆಗಲಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ತರಕಾರಿ ಬೆಳೆಗಾರರ ಪೈಕಿ 2,157 ಮಂದಿಗೆ ₹1.84 ಕೋಟಿ ಪರಿಹಾರ ವಿತರಿಸಲಾಗಿದೆ. ಇವರ ಬೆಳೆ ಸಮೀಕ್ಷೆ ವಿವರಗಳು ಈಗಾಗಲೇ ಇಲಾಖೆಯ ಬಳಿ ಇದ್ದು, ಅದರ ಆಧಾರದಲ್ಲಿ ಹೆಕ್ಟೇರ್‌ಗೆ ₹15 ಸಾವಿರದಂತೆ ಖಾತೆಗೆ ಜಮೆ ಮಾಡಲಾಗಿದೆ. 384 ಮಂದಿಯ ದಾಖಲೆಗಳು ಲಭ್ಯವಿಲ್ಲದ ಕಾರಣ ಹಣ ಜಮೆ ಆಗಿಲ್ಲ. ಬೆಳೆ ಸಮೀಕ್ಷೆಯಲ್ಲಿ ವಿವರ ಇಲ್ಲದವರು ಕೂಡ ಪರಿಹಾರಕ್ಕಾಗಿ ದಾಖಲೆಗಳನ್ನು ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿತ್ತು’ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಶಿವಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತರಕಾರಿ ಬೆಳೆಯನ್ನು ಹಿಂಗಾರು ಬೆಳೆ ಎಂದು ಪರಿಗಣಿಸಲಾಗಿತ್ತು. ಆದರೆ, ಕಲ್ಲಂಗಡಿ ಹಾಗೂ ಬಾಳೆ ಬೆಳೆದವರಿಗೆ ಎಲ್ಲರಿಗೂ ನಷ್ಟವಾಗಿಲ್ಲ. ಕೆಲವು ರೈತರಿಗೆ ಮಾತ್ರ ಬೆಳೆ ನಷ್ಟವಾಗಿದ್ದರಿಂದ ಈ ಎರಡು ಬೆಳೆಗಾರರಿಂದ ಅರ್ಜಿಗಳನ್ನು ಕರೆಯಲಾಗಿತ್ತು. 2,167 ಮಂದಿ ಅರ್ಜಿ ಸಲ್ಲಿಸಿದ್ದಾರೆ. 607 ಮಂದಿಗೆ ₹58 ಲಕ್ಷ ಪರಿಹಾರ ನೀಡಲಾಗಿದೆ. ಉಳಿದ ಫಲಾನುಭವಿಗಳ ಸಮೀಕ್ಷೆ ನಡೆಸಬೇಕಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪರಿಹಾರ ವಿಳಂಬ: ರೈತರ ಅಸಮಾಧಾನ

ಆಗಿರುವ ನಷ್ಟಕ್ಕೆ ಹೋಲಿಸಿದರೆ ಪರಿಹಾರ ನಿಗದಿಪಡಿಸಿರುವುದು ಕಡಿಮೆ. ಆ ಹಣವನ್ನೂ ಸರಿಯಾಗಿ ಕೊಟ್ಟಿಲ್ಲ ಎಂಬುದು ರೈತರ ಅಸಮಾಧಾನ. ಹೂ, ತರಕಾರಿ ಬೆಳೆದು ಕೋವಿಡ್‌ನಿಂದಾಗಿ ಕೈಸುಟ್ಟುಕೊಂಡವರು ಈಗ ಆ ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ ಎಂದು ಹೇಳುತ್ತಾರೆ ರೈತ ಮುಖಂಡರು.

‘ಹೂ ಬೆಳೆಗೆ ಪರಿಹಾರ ಹಣ ಬಂದಿದೆ. ಕೃಷಿಕರ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ಜಮೆ ಆಗಿದೆ. ತರಕಾರಿ, ಕಲ್ಲಂಗಡಿ ಬೆಳೆದು ನಷ್ಟ ಅನುಭವಿಸದವರಿಗೆ ಇನ್ನೂ ಬಂದಿಲ್ಲ. ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕಎಲ್ಲ ತೋಟಗಾರಿಕೆ ಮತ್ತು ಪುಷ್ಪ ಕೃಷಿ ನೆಚ್ಚಿಕೊಂಡವರಿಗೆ ನೆರವು ಕಲ್ಪಿಸಬೇಕು. ಲಾಕ್‌ಡೌನ್‌ ಅವಧಿಯಲ್ಲಿ ನಷ್ಟಕ್ಕೆ ಒಳಗಾಗಿರುವ ಹಲವು ರೈತರು ಈಗ ತರಕಾರಿ ಬೆಳೆಯುವುದನ್ನೇ ಬಿಟ್ಟಿದ್ದಾರೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ ತಿಳಿಸಿದರು.

ರೈತರು ಏನಂತಾರೆ?

ಕೈಗೆ ಹಣ ಸಿಗಲಿಲ್ಲ

ಲಾಕ್‍ಡೌನ್ ಸಮಯದಲ್ಲಿ ಎರಡು ಎಕರೆಯಲ್ಲಿ ಟೊಮೆಟೊ ಹಾಕಿದ್ದೆ. ₹80 ಸಾವಿರ ಖರ್ಚಾಗಿತ್ತು. ₹4 ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದೆ. ಲಾಕ್‍ಡೌನ್ ಕಾರಣಕ್ಕೆ ಟೊಮೆಟೊ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗಲಿಲ್ಲ. ಖರೀದಿಸುವವರು ಇಲ್ಲದೇ ಎರಡು ಎಕರೆ ಟೊಮೆಟೊ ದನ ಕರುಗಳ ಪಾಲಾಯಿತು. ಪರಿಹಾರವಾಗಿ ₹20 ಸಾವಿರ ನನ್ನ ಖಾತೆಗೆ ಹಣ ಬಂದಿತ್ತು. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಸಂತೇಮರಹಳ್ಳಿ ಶಾಖೆಯವರು ಬೆಳೆ ಸಾಲ ಇದೆ ಎಂದು ಜಮಾ ಮಾಡಿಕೊಂಡರು. ಕೈಗೆ ಪರಿಹಾರ ಹಣ ಬರಲಿಲ್ಲ.

–ಯೋಗೇಂದ್ರಸ್ವಾಮಿ. ಹೆಗ್ಗವಾಡಿಪುರ, ಚಾಮರಾಜನಗರ ತಾಲ್ಲೂಕು

ಭರವಸೆ ಬಿಟ್ಟು ಏನಿಲ್ಲ

ಲಾಕ್‍ಡೌನ್ ಸಮಯದಲ್ಲಿ ಎರಡೂವರೆ ಎಕರೆಯಲ್ಲಿ ಸುಗಂಧರಾಜ ಹೂ ಬೆಳೆದಿದ್ದೆ. ಲಾಕ್‍ಡೌನ್ ಆದ ಕಾರಣ ಬೆಳೆದ ಹೂ ಖರೀದಿಸುವವರು ಇಲ್ಲದೇ ಜಮೀನಿನಲ್ಲಿಯೇ ಹೂ ಹುದುರಿ ಹೋಯಿತು. ಇದರಿಂದ ₹3 ಲಕ್ಷದ ವರೆಗೆ ನಷ್ಟ ಉಂಟಾಯಿತು. ಪರಿಹಾರಕ್ಕಾಗಿ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಅಧಿಕಾರಿಗಳು ಪರಿಹಾರ ಕೊಡುವುದಾಗಿ ಭರವಸೆ ನೀಡುತ್ತಿದ್ದಾರೆ. ಇಂದಿಗೂ ಯಾವುದೇ ಪರಿಹಾರ ಬಂದಿಲ್ಲ.

–ಎಚ್.ಸಿ.ಮಹೇಶ್ ಕುಮಾರ್, ರೈತ ಮುಖಂಡ

ನಷ್ಟ ಅನುಭವಿಸಿದೆ

ಮಾರ್ಚ್ ಏಪ್ರಿಲ್ ತಿಂಗಳಲ್ಲಿ ತರಕಾರಿಗೆ ಉತ್ತಮ ಬೇಡಿಕೆ ಇರುತ್ತದೆ ಎಂದು ಟೊಮೆಟೊ, ಆಲೂಗಡ್ಡೆ ಬೀನ್ಸ್ ಗಳನ್ನು ಬೆಳೆದಿದ್ದೆವು. ಇದ್ದಕ್ಕಿದ್ದಂತೆ ಲಾಕ್ ಡೌನ್ ಮಾಡಿದ್ದರಿಂದ ಬೆಳೆಗೆ ಉತ್ತಮ ಬೆಲೆ ಸಿಗಲಿಲ್ಲ. ಜೊತೆಗೆ ಹೊರ ರಾಜ್ಯಗಳಿಗೆ ತರಕಾರಿ ತೆಗೆದುಕೊಂಡ ಹೋಗಲು ತೊಂದರೆ ಆಯಿತು. ಇದರಿಂದಾಗಿ ನಷ್ಟ ಅನುಭವಿಸಿದೆ.

–ದೇವಯ್ಯ, ರಾಘವಾಪುರ, ಗುಂಡ್ಲುಪೇಟೆ ತಾಲ್ಲೂಕು

ಇನ್ನೂ ಬಂದಿಲ್ಲ ಪರಿಹಾರ

ಲಾಕ್‌ಡೌನ್‌ ಅಔಧಿಯಲ್ಲಿ ಬೆಳೆದಿದ್ದ ಕೋಸು, ಬಾಳೆ ತಾಕಿನಲ್ಲೇ ಕೊಳೆತು ಹೋಯಿತು.ಟೊಮೆಟೊ ಕೊಳ್ಳುವವರು ಇಲ್ಲದೆ ಲಕ್ಷಾಂತರ ರೂಪಾಯಿ ನಷ್ಟವಾಯಿತು. 4 ಎಕರೆಯಲ್ಲಿ ಬೆಳೆದಿದ್ದ ಫಸಲು ಹಾಳಾಯಿತು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಾಕಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ
ಯಾವ ಪರಿಹಾರವೂ ಕೈಸೇರಿಲ್ಲ

– ಕಾರಪುರ ಬಸವರಾಜಸ್ವಾಮಿ,ಯಳಂದೂರು

ಅರ್ಜಿ ಹಾಕಿದ್ದೇ ಬಂತು

ಪ್ರತಿ ವರ್ಷವೂ ನಾವು ಮೂರು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದೆವು. ಆದರೆ, ಕೋವಿಡ್ 19 ಪರಿಣಾಮ ಲಾಕ್ ಡೌನ್ ಆದ ಕಾರಣ ಕಲ್ಲಂಗಡಿ ಹಣ್ಣಿನ ಬೆಲೆ ಕುಸಿಯಿತು. ₹4 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದೆವು. ಕಲ್ಲಂಗಡಿ ಬೆಲೆ 1 ಕೆಜಿಗೆ ₹2 ಆಯಿತು. ಆ ಕಾರಣದಿಂದ ಕಲ್ಲಂಗಡಿ ಕಟಾವು ಮಾಡದೆ ಜಮೀನಿನಲ್ಲೇ ಬಿಟ್ಟೆವು. ಪರಿಹಾರಕ್ಕಾಗಿ ಅರ್ಜಿಯನ್ನು ಹಾಕಿದ್ದೇವೆ. ಇದುವರೆಗೆ ಪರಿಹಾರಧನ ಬಂದಿಲ್ಲ.

ರತ್ನಮ್ಮ,ಸತ್ತೇಗಾಲ, ಕೊಳ್ಳೇಗಾಲ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT