ಮಂಗಳವಾರ, ಸೆಪ್ಟೆಂಬರ್ 28, 2021
22 °C
ಬಂಡೀಪುರ: ಬೆಳೆ ನಾಶದಿಂದ ಕಾಡಂಚಿನ ರೈತರು ಹೈರಾಣ, ನಾಶಕ್ಕೆ ಸಿಗುತ್ತಿಲ್ಲ ಪರಿಹಾರ

ಗುಂಡ್ಲುಪೇಟೆ: ಆನೆ ಕಾಟ ನಿಂತರೂ, ತಪ್ಪದ ಹಂದಿ ಉಪಟಳ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕೆಲವು ತಿಂಗಳುಗಳಿಂದೀಚೆಗೆ ಕಾಡು ಪ್ರಾಣಿಗಳ ಹಾವಳಿ ಕಡಿಮೆಯಾಗಿದ್ದರೂ, ಕಾಡುಹಂದಿಗಳ ಕಾಟ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ.  

ಆಲೂಗಡ್ಡೆ, ಕಡಲೇಕಾಯಿ, ಟೊಮೆಟೊ, ಮುಸುಕಿನ ಜೋಳ ಬೆಳೆಗಾರರು ಹಂದಿಗಳ ಹಾವಳಿಯಿಂದ ಹೈರಾಣರಾಗಿದ್ದಾರೆ. 

ಆನೆಗಳು ಜಮೀನುಗಳಿಗೆ ನುಗ್ಗುವುದನ್ನು ತಡೆಯುವುದಕ್ಕಾಗಿ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳಲ್ಲಿ ಕಂದಕಗಳನ್ನು ನಿರ್ಮಿಸಿದೆ. ಇದರಿಂದಾಗಿ ಆನೆಗಳ ಉಪಟಳ ಗರಿಷ್ಠ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕೆಲವೊಂದು ಕಡೆಗಳಲ್ಲಿ ಮಾತ್ರ ಆನೆಗಳು ಕಂದಕಗಳನ್ನು ದಾಟಿ ಬರುತ್ತಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಇಂತಹ ಸ್ಥಳಗಳನ್ನು ಗುರುತಿಸಿ ರಾತ್ರಿಯ ಸಮಯದಲ್ಲಿ ಕಾವಲು ಕಾಯುತ್ತಾರೆ. ಆನೆ ದಾಟುವಾಗ ಮತ್ತೆ ಕಾಡಿಗೆ ಓಡಿಸುವ ಕೆಲಸ ಮಾಡುತ್ತಿದ್ದಾರೆ.

ಕಾಡು ಹಂದಿಗಳು ಸಾಮಾನ್ಯವಾಗಿ ಅರಣ್ಯದಿಂದ ಹೊರಗಡೆ ಇರುತ್ತವೆ. ರಾತ್ರಿಯಾದರೆ ಅವುಗಳು ಕೃಷಿ ಜಮೀನಿಗಳಿಗೆ ದಾಳಿ ಮಾಡುತ್ತವೆ. ಹಂದಿಗಳಿಂದ ಬೆಳೆ ನಾಶವಾದರೆ ಅರಣ್ಯ ಇಲಾಖೆ ಪರಿಹಾರ ನೀಡುವುದಿಲ್ಲ. ಹಾಗಾಗಿ, ಹಂದಿಗಳ ಕಾಟ ತಡೆಯದೆ ರೈತರು ಕೃಷಿ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

‘ಕಾಡಂಚಿನ ಗ್ರಾಮದಲ್ಲಿ ಹಂದಿಗಳೇ ಹೆಚ್ಚಿದ್ದು, ಅವುಗಳಿಂದ ಬೆಳೆ ನಾಶವಾದರೆ ಮಾನವೀಯ ದೃಷ್ಟಿಯಿಂದ ಈ ಮೊದಲು ಪರಿಹಾರ ನೀಡಲಾಗುತ್ತಿತ್ತು. ಸೌರ ಬೇಲಿ ನಿರ್ಮಾಣ ಮಾಡಿರುವುದರಿಂದ ಹಂದಿಗಳಿಂದ ಆಗಿರುವ ಬೆಳೆನಾಶಕ್ಕೆ ಪರಿಹಾರ ನೀಡುವುದನ್ನು ಕಡಿಮೆ ಮಾಡಿದ್ದೇವೆ. ಕೋತಿಗಳು ಹಾಗೂ ಹಂದಿಗಳಿಂದ ಬೆಳೆ ನಾಶವಾದರೆ ಪರಿಹಾರ ಕೊಡುವಂತೆ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳೆ ನಾಶವಾದಾಗ ಇಲಾಖೆಯ ಆ್ಯಪ್‌ನಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಹಂದಿಯಿಂದ ಬೆಳೆ ನಾಶ ಎಂಬ ಆಯ್ಕೆ ಅದರಲ್ಲಿ ಇಲ್ಲ. ಹಾಗಾಗಿ, ಪರಿಹಾರ ಕೊಡಲು ಕಷ್ಟವಾಗುತ್ತದೆ’ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಅವರು ತಿಳಿಸಿದರು.

10 ಪಟ್ಟು ನಾಶ: ‘ಆನೆಗಳಿಗಳಿಗಿಂತಲೂ ಹತ್ತು ಪಟ್ಟು ಹೆಚ್ಚು ಬೆಳೆ ನಾಶ ಹಂದಿಗಳಿಂದ ಆಗುತ್ತದೆ. ಆದರೆ ಅರಣ್ಯ ಇಲಾಖೆ ಅದಕ್ಕೆ ಪರಿಹಾರ ನೀಡುವುದಿಲ್ಲ. ಇದರಿಂದಾಗಿ ರೈತರಿಗೆ ಹೆಚ್ಚು ನಷ್ಟವಾಗುತ್ತದೆ. ಇಲಾಖೆ ಪರಿಹಾರ ನೀಡಿದರೆ ನಷ್ಟ ಅನುಭವಿಸಿದ ಬೆಳೆಗಾರರಿಗೆ ಸ್ವಲ್ಪ ಅನುಕೂಲವಾದರೂ ಆಗುತ್ತದೆ’ ಎಂದು ರೈತ ಮಹದೇವಪ್ಪ ಅವರು ಅಭಿಪ್ರಾಯಪಟ್ಟರು. 

ಕಾಡಂಚಿನ ಗ್ರಾಮದಲ್ಲಿ ಹೋಟೆಲ್, ಹೋಂ ಸ್ಟೇಗಳು. ರೆಸಾರ್ಟ್‌ಗಳು ಹೆಚ್ಚು. ಹೀಗಾಗಿ ಹಂದಿಗಳು ತ್ಯಾಜ್ಯವನ್ನು ತಿಂದು ಅಲ್ಲೇ ಉಳಿದಿರುತ್ತವೆ. ರಾತ್ರಿಯ ಸಮಯದಲ್ಲಿ ಜಮೀನುಗಳಿಗೆ ನುಗ್ಗುತ್ತದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಪಂಚಾಯತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ರೈತರ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು