ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಬೆಳೆ ಸಮೀಕ್ಷೆ: ಚಾಮರಾಜನಗರ ಜಿಲ್ಲೆಯಲ್ಲಿ ಶೇ 22.04 ಪ್ರಗತಿ

ರೈತರೇ ಮಾಡುತ್ತಿರುವ ಸಮೀಕ್ಷೆ: ಗುಂಡ್ಲುಪೇಟೆಯಲ್ಲಿ ಹೆಚ್ಚು, ಕೊಳ್ಳೇಗಾಲದಲ್ಲಿ ಕಡಿಮೆ
Last Updated 13 ಸೆಪ್ಟೆಂಬರ್ 2020, 7:47 IST
ಅಕ್ಷರ ಗಾತ್ರ

ಚಾಮರಾಜನಗರ: ರೈತರು ಸ್ವಯಂ ಆಗಿ ಬೆಳೆ ಸಮೀಕ್ಷೆ ನಡೆಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಸಾಗಿದ್ದು, ಈವರೆಗೆ ಶೇ 22.04 ಪ್ರಗತಿ ಸಾಧಿಸಿದೆ.

ಕೃಷಿ ಇಲಾಖೆಯು 2020–21ನೇ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪ್ರಕ್ರಿಯೆಯನ್ನು ಆಗಸ್ಟ್‌ 10ರಂದು ಆರಂಭಿಸಿದ್ದು, ಇದೇ ಮೊದಲ ಬಾರಿಗೆ ಸಮೀಕ್ಷೆ ನಡೆಸುವ ಹೊಣೆಯನ್ನು ರೈತರಿಗೆ ವಹಿಸಿದೆ. ‘ಬೆಳೆ ಸಮೀಕ್ಷೆಆ್ಯಪ್‌ (farmers crop survey app 2020-21) ಮೂಲಕ ರೈತರು ಬೆಳೆಯ ಮಾಹಿತಿ ಹಾಗೂ ಕೃಷಿ ಜಮೀನಿನ ಚಿತ್ರಗಳನ್ನು ಅಪ್‌ಲೋಡ್‌ ಮಾಡಬೇಕು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ, ಸಾಲ ಯೋಜನೆಗಳ ಸೌಲಭ್ಯ, ಬೆಳೆ ಕಟಾವು ಪ್ರಯೋಗ ಹಾಗೂ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ ಈ ಬೆಳೆ ಸಮೀಕ್ಷೆ ಸಹಕಾರಿಯಾಗಲಿದೆ ಎಂದು ಕೃಷಿ ಇಲಾಖೆ ಹೇಳಿದೆ.ಆರಂಭದಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಆಗಸ್ಟ್‌ 24ರವರೆಗೆ ಅವಕಾಶ ನೀಡಲಾಗಿತ್ತು. ಈ ಗಡುವನ್ನು ಸೆಪ್ಟೆಂಬರ್‌ 23ರವರೆಗೆ ವಿಸ್ತರಿಸಲಾಗಿದೆ.

ಕಳೆದ ತಿಂಗಳಿಗೆ ಹೋಲಿಸಿದರೆ, ಜಿಲ್ಲೆಯಲ್ಲಿ ಈಗ ಸಮೀಕ್ಷೆ ಪ್ರಕ್ರಿಯೆ ಸ್ವಲ್ಪ ಚೇತರಿಸಿಕೊಂಡಿದೆ. ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸಮೀಕ್ಷೆಯನ್ನು ಗಡುವಿನೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಶೇ 78ರಷ್ಟು ತಾಕುಗಳ ಸಮೀಕ್ಷೆ ಬಾಕಿ:ಜಿಲ್ಲೆಯಾದ್ಯಂತ 4,30,109 ಕೃಷಿ ತಾಕುಗಳನ್ನು (ಪ್ಲಾಟ್‌) ಗುರುತಿಸಲಾಗಿದೆ. ಇದುವರೆಗೆ 94,790 ತಾಕುಗಳ ಸಮೀಕ್ಷೆ ಪೂರ್ಣಗೊಂಡಿದೆ. ಶೇಕಡವಾರು ಲೆಕ್ಕದಲ್ಲಿ ಶೇ 22.06ರಷ್ಟು ಸಮೀಕ್ಷೆ ಆಗಿದೆ. ಇನ್ನೂ ಶೇ 78ರಷ್ಟು ತಾಕುಗಳ ಸಮೀಕ್ಷೆ ನಡೆಸಬೇಕಾಗಿದೆ.

ಗುಂಡ್ಲುಪೇಟೆಯಲ್ಲಿ ಹೆಚ್ಚು: ಕೃಷಿ ಇಲಾಖೆಯ ನೀಡಿರುವ ಅಂಕಿ ಅಂಶಗಳ ಪ್ರಕಾರ ಸದ್ಯ ಗುಂಡ್ಲುಪೇಟೆಯಲ್ಲಿ ಹೆಚ್ಚು ಸಮೀಕ್ಷೆಯಾಗಿದೆ. 25,233 ತಾಕುಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಶೇ 25.27ರಷ್ಟು ಪ್ರಗತಿಯಾಗಿದೆ. ಅತಿ ಕಡಿಮೆ ಪ್ರಮಾಣದಲ್ಲಿ ಸಮೀಕ್ಷೆ ನಡೆದಿರುವುದು ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅಲ್ಲಿ ಕೇವಲ 10,050 ತಾಕುಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಶೇಕಡವಾರು ಲೆಕ್ಕದಲ್ಲಿ ಶೇ 17.60ರಷ್ಟು ಮಾತ್ರ ಪ್ರಗತಿಯಾಗಿದೆ. ಹನೂರಿನಲ್ಲಿ ಶೇ 23.27 (14,765 ತಾಕು), ಚಾಮರಾಜನಗರದಲ್ಲಿ ಶೇ 21.73 (37,077 ತಾಕು), ಯಳಂದೂರು ತಾಲ್ಲೂಕಿನಲ್ಲಿ ಶೇ 19.59ರಷ್ಟು (7,665 ತಾಕು) ಪ್ರದೇಶದಲ್ಲಿ ಸಮೀಕ್ಷೆ ನಡೆದಿದೆ.

ನಿಧಾನಕ್ಕೆ ಹಲವು ಕಾರಣಗಳು

ಜಿಲ್ಲೆಯಲ್ಲಿ ಬಹುತೇಕ ರೈತರ ಬಳಿ ಸ್ಮಾರ್ಟ್‌ಫೋನ್‌ಗಳಿಲ್ಲ, ಸ್ಮಾರ್ಟ್‌ಫೋನ್‌ಗಳ ಬಳಕೆಯೂ ಅವರಿಗೆ ತಿಳಿದಿಲ್ಲ. ಇದರ ಜೊತೆಗೆ ಆ್ಯಪ್‌ನಲ್ಲೂ ತಾಂತ್ರಿಕ ದೋಷಗಳಿವೆ. ಕಾಡಂಚಿನ ಗ್ರಾಮಗಳಲ್ಲಿ ಹಾಗೂ ತೀರಾ ಒಳಪ್ರದೇಶಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸರಿ ಇಲ್ಲದಿರುವುದರಿಂದ ಇಂಟರ್‌ನೆಟ್‌ ಸಿಗುತ್ತಿಲ್ಲ.. ಈ ಕಾರಣಗಳಿಂದ ಸಮೀಕ್ಷೆ ವಿಳಂಬವಾಗಿದೆ ಎಂಬ ಕಾರಣಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರು ಹೇಳುತ್ತಾರೆ.

‘ರೈತರಿಗೆ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳು ಅವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಶೇ 80ರಷ್ಟು ರೈತರಲ್ಲಿ ಸ್ಮಾರ್ಟ್‌ಫೋನ್‌ಗಳಿಲ್ಲ. ಸ್ವತಃ ಅಧಿಕಾರಿಗಳೇ ಜಮೀನುಗಳಿಗೆ ಬಂದು ಸಮೀಕ್ಷೆ ಮಾಡುವ ವಿಧಾನವನ್ನು ಹೆಚ್ಚು ಹೆಚ್ಚು ರೈತರಿಗೆ ತಿಳಿಸಿಕೊಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗಿಯವರಿಗೆ ಅವಕಾಶ: ಜಿಲ್ಲೆಯಲ್ಲಿ ಸಮೀಕ್ಷೆ ಸ್ವಲ್ಪ ನಿಧಾನವಾಗಿದ್ದು ನಿಜ. ಕೆಲವು ಕಡೆಗಳಲ್ಲಿ ಮೊಬೈಲ್‌ ಸಿಗ್ನಲ್‌ ಸಮಸ್ಯೆ ಇದೆ.ಆದರೆ, ಈಗ ಬಿರುಸಾಗಿ ಸಮೀಕ್ಷೆ ನಡೆಯುತ್ತಿದೆ. ಎಲ್ಲ ತಾಲ್ಲೂಕುಗಳಲ್ಲಿ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದೇ 23ರವರೆಗೆ ರೈತರೇ ಸ್ವಯಂ ಆಗಿ ಸಮೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. ನಂತರ, ತರಬೇತಿ ನೀಡಲಾದ ಖಾಸಗಿ ವ್ಯಕ್ತಿಗಳಿಂದ ಸಮೀಕ್ಷೆ ನಡೆಸಲಾಗುವುದು. ಅದಕ್ಕಾಗಿ ಪ್ರತ್ಯೇಕ ಆ್ಯಪ್‌ ಬಿಡುಗಡೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT