ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನರ: ಅನುಮತಿ ಪಡೆಯದ ಕ್ರಷರ್, ಟಾರು ಮಿಶ್ರಣ ಘಟಕ ಜಪ್ತಿ

Last Updated 31 ಜನವರಿ 2021, 2:11 IST
ಅಕ್ಷರ ಗಾತ್ರ

ಚಾಮರಾಜನಗರ: ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದ ಕ್ರಷರ್‌ ಘಟಕ ಹಾಗೂ ಟಾರು ಮಿಶ್ರಣ ಘಟಕವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹನೂರು ತಾಲ್ಲೂಕಿನ ಚಂದಗಾರನಹಳ್ಳಿ ಗ್ರಾಮದ ಸರ್ವೆ ನಂಬರ್‌ 148 ರಲ್ಲಿ ಕ್ರಷರ್‌ ಘಟಕ ನಿರ್ಮಿಸಲಾಗಿತ್ತು.ಬೈರನತ್ತ ಗ್ರಾಮದ ಸರ್ವೆ ನಂಬರ್‌ 90ರಲ್ಲಿ ಟಾರು ಮಿಶ್ರಣ ಘಟಕ ಇತ್ತು.

ತಾಲ್ಲೂಕಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಅಲ್ಲಿನ ಶಾಸಕ ಆರ್‌.ನರೇಂದ್ರ ಅವರು ಇತ್ತೀಚೆಗೆ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಪ್ರಸ್ತಾಪಿಸಿದ್ದರು.

ಪರಿಶೀಲನೆ ತೀವ್ರ: ಶಿವಮೊಗ್ಗ ಜಿಲ್ಲೆಯಲ್ಲಿ ಜಿಲೆಟಿನ್‌ ಸ್ಫೋಟ ಪ್ರಕರಣ ನಡೆದ ಬಳಿಕ ಜಿಲ್ಲೆಯಲ್ಲೂ ಗಣಿಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೂಚಿಸಿದ್ದರು. ಇದಲ್ಲದೇ, ಕೆಡಿಪಿ ಸಭೆಯಲ್ಲೂ ವಿಚಾರ ಪ್ರಸ್ತಾಪವಾದ ಬಳಿಕ ಗಣಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಕಲ್ಲುಗಣಿ ಗುತ್ತಿಗೆ ಮಂಜೂರಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದೇ 27ರಂದುಹನೂರು ತಾಲ್ಲೂಕಿನ ಚಂದಗಾರನಹಳ್ಳಿ ಗ್ರಾಮದ ಸರ್ವೆ ನಂ. 148 ರಲ್ಲಿ ನಿರ್ಮಾಣ ಮಾಡಿರುವ ಕ್ರಷರ್ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನುಮತಿ ಪಡೆಯದೇ ಘಟಕ ಸ್ಥಾಪಿಸಿದ್ದು ತಿಳಿದು ಬಂತು.ಘಟಕದ ಪಕ್ಕದಲ್ಲಿ 800 ಟನ್‍ಗಳಷ್ಟು ಕಟ್ಟಡ ಕಲ್ಲು ದಾಸ್ತಾನು ಇರಿಸಲಾಗಿದೆ. ಇದು ಬಿಟ್ಟು, ಅಕ್ಕಪಕ್ಕದಲ್ಲಿ ಯಾವುದೇ ಅನಧಿಕೃತ ಗಣಿಗಾರಿಕೆ ನಡೆದಿಲ್ಲ. ಈ ಕ್ರಷರ್‌ ಅನ್ನು ಜಪ್ತಿ ಮಾಡಿ, ಅದರ ನಿರ್ವಾಹಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಅದೇ ದಿನ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರೊಡನೆ ಬೈರನತ್ತ ಗ್ರಾಮದ ಸರ್ವೆ ನಂ 90ರಲ್ಲಿ ಈ ಹಿಂದೆ ಕ್ರಷರ್ ಘಟಕ ಸ್ಥಾಪಿಸಿದ್ದ ಪ್ರದೇಶಕ್ಕೆ ಭೇಟಿ ನೀಡಿದ್ದೆವು. ಅಕಲ್ಲಿ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಆದರೆ, ಇದಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲಿ ಟಾರು ಮಿಶ್ರಣ ಘಟಕ ಸ್ಥಾಪಿಸಲಾಗಿದ್ದು, 150 ಟನ್‌ಗಳಷ್ಟು ಜಲ್ಲಿಯನ್ನು ದಾಸ್ತಾನು ಮಾಡಲಾಗಿದೆ. ಘಟಕವನ್ನು ಕಾರ್ಯನಿರ್ವಹಿಸದಂತೆ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಜಿಲ್ಲೆಯಲ್ಲಿರುವ ಎಲ್ಲ 25 ಕ್ರಷರ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ವೇಳೆ ಪರವಾನಗಿ ಪಡೆದು ಉಪ ಖನಿಜ ಸಾಗಾಣಿಕೆ ಮಾಡಬೇಕು. ಅನಧಿಕೃತವಾಗಿ ಸಾಗಾಣಿಕೆ ಮಾಡಿದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ’ ಎಂದು ಲಕ್ಷ್ಮಮ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT