ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ದಸರಾ: ಸಂಗೀತ, ಹಾಸ್ಯ ನೃತ್ಯ‌ದ ರಂಗು

ನಾಲ್ಕು ದಿನ ಮೂರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಕಲಾವಿದರಿಗೆ ಆದ್ಯತೆ
Last Updated 23 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಇದೇ 27ರಿಂದ 30ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಜಿಲ್ಲಾ ದಸರಾಗೆ ದಿನಗಣನೆ ಆರಂಭವಾಗಿದ್ದು, ಎರಡು ವರ್ಷಗಳ ಬಳಿಕ ಅದ್ದೂರಿ ದಸರಾ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಕಲಾ ತಂಡಗಳ ಮೆರವಣಿಗೆ, ರೈತ ದಸರಾ, ಮಹಿಳಾ ದಸರಾ, ಕವಿಗೋಷ್ಠಿ, ಫಲ ಪುಷ್ಪ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಸಂಭ್ರಮವನ್ನು ಹೆಚ್ಚಿಸಲಿವೆ.

ಸಾಂಸ್ಕೃತಿಕ ವೈವಿಧ್ಯ: ಈ ಉತ್ಸವದ ಪ್ರಧಾನ ಆಕರ್ಷಣೆ ಎಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳು. ನಾಲ್ಕು ದಿನಗಳ ರಾತ್ರಿ ಪ‍್ರತಿ ದಿನ ಮಧ್ಯಾಹ್ನ 3.30ರಿಂದ ರಾತ್ರಿ 10 ಗಂಟೆಯವರೆಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಗಳಿಗೆ ಮೂರು ಕಡೆಗಳಲ್ಲಿ ವೇದಿಕೆ ನಿಗದಿಪಡಿಸಲಾಗಿದೆ.

ಚಾಮರಾಜೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗುವ ಪ್ರಧಾನ ವೇದಿಕೆಯಲ್ಲಿ, ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಹಾಗೂ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಲಿವೆ.

ಸ್ಥಳೀಯ ಕಲಾವಿದರ ಗಾಯನ, ಹಾಡು, ನೃತ್ಯಗಳ ಜೊತೆಗೆ ಬೆಂಗಳೂರಿನಿಂದ ಬರುವ ವಿವಿಧ ಕಲಾವಿದರು ಪ್ರದರ್ಶನಗಳು ದಸರಾ ಸಂಭ್ರಮವನ್ನು ಕಳೆಗಟ್ಟಿಸಲಿವೆ.

ಹಿನ್ನೆಲೆಗಾಯಕಿ ಅನುರಾಧ ಭಟ್‌ ತಂಡ, ರಿಯಾಲಿಟಿ ಶೋ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ಹರ್ಷಾ, ಅಂಕಿತಾ ಖಂಡು ಅವರು ಕೂಡ ಗಾನ ಸುಧೆ ಹರಿಸಲಿದ್ದಾರೆ. ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರು ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡಲಿದ್ದಾರೆ. ಖ್ಯಾತ ವಾಗ್ಮಿ ಪ್ರೊ.ಕೃಷ್ಭೇಗೌಡ ನೇತೃತ್ವದ ಹಾಸ್ಯ ಸಂಜೆ ಈ ಬಾರಿಯ ದಸರಾದ ಮತ್ತೊಂದು ವಿಶೇಷ.

ಮೊದಲ ದಿನ ಅಂದರೆ 27ರಂದು ಬೆಂಗಳೂರಿನ ಐಶ್ವರ್ಯಾ ಮತ್ತು ತಂಡದವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. 28ರಂದು ಪ್ರೊ.ಕೃಷ್ಣೇಗೌಡರ ತಂಡವು ಜಿಲ್ಲೆಯ ಜನರಿಗೆ ಹಾಸ್ಯ ರಸಾಯನ ಉಣಬಡಿಸಲಿದ್ದಾರೆ. 29ರಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಬಸವಟ್ಟಿ ಲೋಕೇಶ್‌ ಮತ್ತು ತಂಡ ನಗುವಿನ ಕಚಗುಳಿ ಇಡಲಿದ್ದಾರೆ. ಕಂಬದ ರಂಗಯ್ಯ ನೇತೃತ್ವದ ತಂಡ ಗಾಯನ ಕಾರ್ಯಕ್ರಮವೂ ಇದೇ ದಿನ ನಡೆಯಲಿದೆ. ಕೊನೆಯ ದಿನವಾದ 30ರಂದು ಗಾಯಕಿ ಅನುರಾಧ ಭಟ್‌ ಮತ್ತು ತಂಡದ ಗಾನಸುಧೆ ಹರಿಯಲಿದೆ.

‘ಸಾಂಸ್ಕೃತಿಕ ಕಾರ್ಯಕ್ರಮದ ವೇಳಾಪಟ್ಟಿ ಅಂತಿಮಗೊಂಡಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಕಿರುತೆರೆ ಹಾಗೂ ಹಿ‌ರಿತೆರೆಯ ಹಾಡುಗಾರರು ಕೂಡ ಬಂದು ಪ್ರದರ್ಶನ ನೀಡಲಾಗಿದ್ದಾರೆ’ ಎಂದು ದಸರಾ ಆಯೋಜನಾ ಸಮಿತಿ ಅಧ್ಯಕ್ಷ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ವೇದಿಕೆ ಕಲ್ಪಿಸಲಾಗಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗಿದೆ. ಹೆಚ್ಚಿನವರಿಗೆ ಅವಕಾಶ ನೀಡುವ ಉದ್ದೇಶದಿಂದ ಒಂದು ತಂಡಕ್ಕೆ ಒಂದು ಬಾರಿ ಮಾತ್ರ ಅವಕಾಶ ನೀಡಿದ್ದೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುಲಿಂಗಯ್ಯ ಹೇಳಿದರು.

ಜಗಮಗಿಸಲಿದೆ ಜಿಲ್ಲಾ ಕೇಂದ್ರ

ದಸರಾ ಅಂಗವಾಗಿ ಸೆಸ್ಕ್‌ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗುತ್ತಿದೆ. ಚಾಮರಾಜೇಶ್ವರ ದೇವಸ್ಥಾನ, ಆವರಣ, ಪ್ರಮುಖ ಐದು ವೃತ್ತಗಳು, ಬಿ.ರಾಚಯ್ಯ ಜೋಡಿ ರಸ್ತೆ, ಜಿಲ್ಲಾಡಳಿತ ಭವನ ಸೇರಿದಂತೆ ವಿವಿಧ ಕಡೆಗಳಲ್ಲಿ ದೀಪಾಲಂಕಾರ ಮಾಡುವ ಪ್ರಕ್ರಿಯೆ ಆರಂಭವಾಗಿದೆ.

‘ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಿಂದ ದೀಪಗಳ ಅಲಂಕಾರಕ್ಕೆ ಒತ್ತು ನೀಡಲಾಗಿದೆ. ಇದಕ್ಕಾಗಿ ₹27 ಲಕ್ಷ ಬಜೆಟ್‌ ಮೀಸಲಿಡಲಾಗಿದೆ. ಐದು ವೃತ್ತಗಳು, ಬಿ.ರಾಚಯ್ಯ ಜೋಡಿ ರಸ್ತೆ, ಜಿಲ್ಲಾಡಳಿತ ಭವನ, ಎಸ್‌ಪಿ ಕಚೇರಿ ಸೆಸ್ಕ್‌ ಕಚೇರಿ, ಚಾಮರಾಜೇಶ್ವರ ಸ್ವಾಮಿ ದೇವಾಲಯದ ಆವರಣಗಳಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗುತ್ತಿದೆ. ಇದಲ್ಲದೇ ವಿದ್ಯುತ್‌ ಬಲ್ಬ್‌ಗಳ ಮೂಲಕ ಚಾಮುಂಡೇಶ್ವರಿ, ಮಲೆ ಮಹದೇಶ್ವರ ಸ್ವಾಮಿ, ಹಿಮವದ್‌ ಗೋಪಾಲಸ್ವಾಮಿಯ ಪ್ರತಿಕ್ರಿತಿಯನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಸೆಸ್ಕ್‌ ಚಾಮರಾಜನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ವಸಂತ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT