ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ

ಜಿಲ್ಲೆಯ ವಿವಿಧ ಕಡೆಗಳಿಗೆ ದೇವರಾಜ ಅರಸು ನಿಗಮದ ಅಧ್ಯಕ್ಷರ ಭೇಟಿ ಪರಿಶೀಲನೆ
Last Updated 19 ಸೆಪ್ಟೆಂಬರ್ 2021, 4:28 IST
ಅಕ್ಷರ ಗಾತ್ರ

ಚಾಮರಾಜನಗರ: ಬ್ಯಾಂಕಿಂಗ್‌, ಫೈನಾನ್ಸ್‌ ಹಾಗೂ ಇನ್ನಿತರ ಕ್ಷೇತ್ರಗಳಿಗೆ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಸಜ್ಜುಗೊಳಿಸುವುದಕ್ಕಾಗಿನಿಗಮದ ವ್ಯಾಪ್ತಿಗೆ ಬರುವ 200 ಜಾತಿಗಳಿಗೆ ಸೇರಿದ ಯುವಕ ಯುವತಿಯರಿಗೆ ತರಬೇತಿ ನೀಡಲು ಯೋಜಿಸಲಾಗುತ್ತಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ಅವರು ಶನಿವಾರ ಹೇಳಿದರು.

ಜಿಲ್ಲೆಯ ಪ್ರವಾಸ ಕೈಗೊಂಡಿರುವ ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇದಿನ್ನೂ ಪ್ರಸ್ತಾವದ ಹಂತದಲ್ಲಿದೆ. ಇದನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವುದರಿಂದ ಹಿಂದುಳಿದ ವರ್ಗಗಳ ಸಾವಿರಾರು ಯುವಕ ಯುವತಿಯರಿಗೆ ಅನುಕೂಲವಾಗುತ್ತದೆ’ ಎಂದರು.

ಗ್ರಾಮೀಣ ಭಾಗದಲ್ಲೂ ಈ ಯೋಜನೆಯನ್ನು ವಿಸ್ತರಿಸುವ ಯೋಚನೆ ಇದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರುದ್ಯೋಗ ಯುವಕ ಯುವತಿಯನ್ನು ಗುರುತಿಸಿ ಅವರಿಗೆ ನಿಗಮದಿಂದ ಕೌಶಲ ತರಬೇತಿಯನ್ನು ನೀಡಿ, ಆಯಾ ಗ್ರಾಮದಲ್ಲಿಯೇ ಅವರು ಸ್ವಾವಲಂಬನೆ ಜೀವನ ನಡೆಸಲು ಅನುಕೂಲ ಮಾಡಿಕೊಡಲು ಚಿಂತನೆ ಮಾಡಲಾಗಿದೆ. ಯುವತಿಯರಿಗೆ ಹೊಲಿಗೆ ಯಂತ್ರ, ಯುವಕರಿಗೆ ಕಂಪ್ಯೂಟರ್ ತರಬೇತಿಗಳನ್ನು ನೀಡಲಾಗುತ್ತದೆ. ಸ್ವಾವಲಂಬನೆ ಭಾರತಕ್ಕಾಗಿ ಹಳ್ಳಿಗಳ ಉದ್ಧಾರ ಮತ್ತು ಯುವಕರು ಪಟ್ಟಣಗಳಿಗೆ ವಲಸೆ ಬರುವುದನ್ನು ಇದರಿಂದ ತಪ್ಪಿಸಬಹುದಾಗಿದೆ’ ಎಂದರು.

ಸೋಲಾರ್‌ ಅಳವಡಿಕೆ: ‘ನಿಗಮದ ಅಡಿಯಲ್ಲಿ ಜಾರಿಯಲ್ಲಿರುವ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಕೊರೆಸುವ ಕೊಳವೆ ಬಾವಿಗಳಿಗೆ ಈಗ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದನ್ನು ತಪ್ಪಿಸುವುದಕ್ಕಾಗಿ ಸೌರಶಕ್ತಿ ಚಾಲಿತ ಪಂಪುಗಳನ್ನು ಅಳವಡಿಸುವ ಪ್ರಸ್ತಾವವಿದೆ. ಇದನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮತಿ ಪಡೆಯಲು ಯತ್ನಿಸಲಾಗುವುದು’ ಎಂದು ರಘು ಕೌಟಿಲ್ಯ ಅವರು ಹೇಳಿದರು.

ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೊಳವೆ ಬಾವಿ ಕೊರೆಸಿ ಮೋಟರ್ ಪಂಪ್‌ಗಳನ್ನು ನೀಡಿ, ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಈ ಯೋಜನೆಯ ಪಾರದರ್ಶಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಒಬ್ಬ ಗುತ್ತಿಗೆದಾರರನ್ನೇ ಅವಲಂಬಿಸಬೇಕಾಗಿತ್ತು. ಈ ವ್ಯವಸ್ಥೆಯನ್ನು ಬದಲಾಯಿಸಲಾಗಿದ್ದು, ಹಲವು ಗುತ್ತಿಗೆದಾರರು ಲಭ್ಯವಿರುತ್ತಾರೆ. ಫಲಾನುಭವಿಗಳು ತಮಗೆ ಬೇಕಾದ ಗುತ್ತಿಗೆದಾರರನ್ನು ಆಯ್ಕೆ ಮಾಡಿಕೊಂಡು, ಅನುಷ್ಠಾನದ ವಿಳಂಬವನ್ನು ತಪ್ಪಿಸಬಹುದು’ ಎಂದು ಅವರು ಹೇಳಿದರು.

ತೆಂಗು ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ಪುಟ್ಟರಸು, ನಿಗಮದ ವ್ಯವಸ್ಥಾಪಕಿ ಶ್ವೇತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT