ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ದಾಸೋಹ ದಿನವಾಗಿ ಆಚರಣೆ

ತ್ರಿವಿಧ ದಾಸೋಹಿ ಶಿವಕುಮಾರಸ್ವಾಮೀಜಿ 4ನೇ ಪುಣ್ಯಸ್ಮರಣೆ, ಜನರಿಗೆ ಅನ್ನದಾನ
Last Updated 21 ಜನವರಿ 2023, 16:40 IST
ಅಕ್ಷರ ಗಾತ್ರ

ಚಾಮರಾಜನಗರ: ತ್ರಿವಿಧ ದಾಸೋಹಿ, ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರಸ್ವಾಮೀಜಿಯವರ 4ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಭಕ್ತರು ಶನಿವಾರ ಆಚರಿಸಿದರು.

ದಾಸೋಹ ದಿನವನ್ನಾಗಿ ಆಚರಿಸಿದ ಭಕ್ತರು ವಿವಿಧ ಕಡೆಗಳಲ್ಲಿ ದಾಸೋಹ ಏರ್ಪಡಿಸಿದರು.

ನಗರದ ರಾಚಯ್ಯ ಜೋಡಿ ರಸ್ತೆಯಲ್ಲಿ ಜಿಲ್ಲಾಡಳಿತ ಭವನದ ಗೇಟಿನ ಮುಂಭಾಗ ಇರುವ ಹೋಟೆಲ್‌ ಅಧ್ಯಕ್ಷ ಬಳಿ, ಜಿಲ್ಲಾಸ್ಪತ್ರೆಯ ಮುಂಭಾಗ ಸೇರಿದಂತೆ ವಿವಿಧ ಕಡೆಗಳಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನದಾಸೋಹ ಮಾಡಲಾಯಿತು.

ಅಧ್ಯಕ್ಷ ಹೋಟೆಲ್‌ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹರವೆ ವಿರಕ್ತ ಸರ್ಪಭೂಷಣ ಸ್ವಾಮೀಜಿ, ‘ಈ ನಾಡು ಕಂಡ ಪುಣ್ಯ ಪುರುಷರಲ್ಲಿ ಡಾ. ಶಿವಕುಮಾರಸ್ವಾಮೀಜಿ ಒಬ್ಬರು. ಸಹಸ್ರಾರು ವಿದ್ಯಾರ್ಥಿಗಳಿಗೆ ಅನ್ನ, ವಿದ್ಯೆ ಆಶ್ರಯ ನೀಡಿ ಅವರ ಬದುಕನ್ನು ಬೆಳಗಿದ ಪುಣ್ಯಾತ್ಮರು’ ಎಂದರು.

‘12ನೇ ಶತಮಾನದ ಬಸವಾದಿ ಶರಣರು ಕಂಡಂತಹ ದಾಸೋಹ, ಜ್ಞಾನದ ಚಿಂತನೆ ಈಗಿನ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದೆ. ಬಸವಣ್ಣನವರ ಅನುಯಾಯಿಯಾಗಿ ತಮ್ಮ ಜೀವಿತಾವಧಿಯ ಉದ್ದಕ್ಕೂ ನುಡಿದಂತೆ ನಡೆದರು. ಸಂಕಷ್ಟದಲ್ಲಿರುವವರಿಗೆ ಮಠ ಮಾನ್ಯಗಳು ಯಾವ ರೀತಿ ನೆರವಾಗಬೇಕು ಎಂಬುದನ್ನು ತೋರಿಸಿದರು. ಕಾಯಕ ದಾಸೋಹಕ್ಕೆ ಮಹತ್ವ ನೀಡಿದ ಅವರು, ಹಸಿದು ಬಂದ ಜನರಿಗೆ ಆನ್ನ ನೀಡಿದರು’ ಎಂದು ಬಣ್ಣಿಸಿದರು.

‘ಇಂದು ರಾಜ್ಯದಾದ್ಯಂತ ದಾಸೋಹ ದಿನವನ್ನಾಗಿ ಆಚರಿಸಲಾಗುತ್ತದೆ, ಅದರಂತೆ ಅಧ್ಯಕ್ಷ ಹೋಟೆಲ್‌ನ ಕುಮಾರ್ ಉಚಿತವಾಗಿ ಅನ್ನದಾಸೋಹ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲುಪುರ ನಂದೀಶ್, ಕುಮಾರ್ ಅಧ್ಯಕ್ಷ ಹೋಟೆಲ್, ನಾಗೇಂದ್ರ (ಪುಟ್ಟು), ಬಸವರಾಜು, ಎನ್.ಜಿ. ಪ್ರಶಾಂತ್, ಮಲ್ಲಿಕಾರ್ಜುನ್, ಸೋಮು, ರಮೇಶ್‌ಬಾಬು, ಶಿವಕುಮಾರ್, ಬಸಪ್ಪ, ವಿಶ್ವನಾಥ್, ಹಿರಿಬೇಗೂರು ಗುರುಸ್ವಾಮಿ, ಪ್ರಕಾಶ್, ಕಂಠಿ, ತೊರವಳ್ಳಿ ಕುಮಾರ್, ಕುಮಾರಸ್ವಾಮಿ, ಮಲ್ಲಿಕಾರ್ಜುನ, ರಾಜು, ಮಹೇಶ್ ಇತರರು ಇದ್ದರು

ಗ್ರಾಮೀಣ ಭಾಗಗಳಲ್ಲೂ ಸ್ಮರಣೆ: ತಾಲ್ಲೂಕಿನ ಅರಕಲವಾಡಿ ಸೇರಿದಂತೆ ಹಲವು ಗ್ರಾಮಗಳಲ್ಲೂ ಶಿವಕುಮಾರಸ್ವಾಮೀಜಿ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.

ಬಿಜೆಪಿ ಕಚೇರಿಯಲ್ಲೂ ಆಚರಣೆ

ಜಿಲ್ಲಾ ಕೇಂದ್ರದಲ್ಲಿರುವ ಬಿಜೆಪಿ ಕಚೇರಿಯಲ್ಲೂ ದಾಸೋಹ ದಿನ ಆಚರಿಸಲಾಯಿತು.

ಸಿದ್ಧಗಂಗಾ ಶ್ರೀಗಳ ಭಾವವಿತ್ರಕ್ಕೆ ಪೂಜೆ ಸಲ್ಲಿಸಿದ ಮುಖಂಡರು, ನಂತರ ಎಲ್ಲರಿಗೂ ಪ್ರಸಾದ ವಿತರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಸುಂದರ್ ಮಾತನಾಡಿ, ‘ಶ್ರೀಗಳು 111 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ, ಜನ ಮಾನಸದಲ್ಲಿ ಉಳಿಯುವ ಜೊತೆಗೆ ವಿಶ್ವಕ್ಕೆ ಮಾದರಿಯಾದ ದಾಸೋಹ ನೀಡಿದರು’ ಎಂದರು.

ಮುಖಂಡ ಅಮ್ಮನಪುರ ಮಲ್ಲೇಶ್ ಮಾತನಾಡಿ, ‘ಸಿದ್ಧಗಂಗಾ ಶ್ರೀಗಳ ಹೆಸರು ಹೇಳಿಕೊಂಡು ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡಲು ಮುಂದಾದರೆ ಯಶಸ್ಸು ಖಂಡಿತ ದೊರೆಯುತ್ತಿದೆ’ ಎಂದರು.

ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ನಾಗಶ್ರೀಪ್ರತಾಪ್, ಮಂಗಲ ಶಿವಕುಮಾರ್, ಕಾಡಾ ಅಧ್ಯಕ್ಷ ನಿಜಗುಣರಾಜು, ಮುಖಂಡ ಎಂ.ರಾಮಚಂದ್ರ, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ಮುಖಂಡರಾದ ಡಾ.ಎ.ಆರ್. ಬಾಬು, ನಗರಸಭಾ ಅಧ್ಯಕ್ಷೆ ಆಶಾನಟರಾಜು, ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT