ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ, ಬಿಳಿಗಿರಿರಂಗನಬೆಟ್ಟ ಸೇರಿ ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ನಿಷೇಧ

ವಿವಿಧ ಸ್ಥಳಗಳಲ್ಲಿ ಪ್ಲಾಸ್ಟಿಕ್ ನಿಷೇಧ : ಡಿ.ಸಿ ಆದೇಶ
Last Updated 1 ಮಾರ್ಚ್ 2022, 3:58 IST
ಅಕ್ಷರ ಗಾತ್ರ

ಚಾಮರಾಜನಗರ: ಪರಿಸರಕ್ಕೆ ಹಾನಿ ಹಾಗೂ ಮಾನವ ಸೇರಿದಂತೆ ಇತರ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಒಡ್ಡುವ ಪ್ಲಾಸ್ಟಿಕ್‌ ಬಳಕೆಯನ್ನು ಜಿಲ್ಲೆಯ ಹಲವು ಪರಿಸರ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿರುವ ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಆದೇಶಿಸಿದ್ದಾರೆ.

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹಾಗೂ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ, ಶಿವನ ಸಮುದ್ರದ ರಂಗನಾಥಸ್ವಾಮಿ ಮತ್ತು ಸಮೂಹ ದೇವಾಲಯಗಳು, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯ, ಚಾಮರಾಜೇಶ್ವರ ದೇವಾಲಯ ಹಾಗೂ ಇತರೆ ಮುಜಾರಾಯಿ ದೇವಾಸ್ಥಾನಗಳು, ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ಸ್ಥಳಗಳಾದ ಹೊಗೇನಕಲ್, ಭರಚುಕ್ಕಿ ಜಲಪಾತಗಳು, ಕೆ.ಗುಡಿ ಅರಣ್ಯ ಪ್ರದೇಶ ಹಾಗೂ ಜಿಲ್ಲೆಯ ಇತರೆ ಎಲ್ಲ ಪ್ರವಾಸಿ ಸ್ಥಳಗಳಲ್ಲಿಯೂ ಹಲವು ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.

ದೇವಾಲಯದ ಆವರಣ ಹಾಗೂ ಹೊರಗಡೆ, ಧಾರ್ಮಿಕ ಕೇಂದ್ರ, ಪ್ರವಾಸೋದ್ಯಮ ಸ್ಥಳಗಳ ಆವರಣದಲ್ಲಿ ಮತ್ತು ಹೊರಗಡೆ ನಿಷೇಧಿತ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಕ್ಯಾರಿಬ್ಯಾಗ್, ತಟ್ಟೆ, ಲೋಟ, ಬಟ್ಟಲು, ಬ್ಯಾನರ್, ಬಂಟಿಂಗ್ಸ್ ಮುಂತಾದವುಗಳನ್ನು ಬಳಕೆ ಮಾಡಬಾರದು. ದೇವಾಲಯ, ಧಾರ್ಮಿಕ, ಪ್ರವಾಸೋದ್ಯಮ ಸ್ಥಳಗಳ ಪ್ರಾಂಗಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ಎಂಬ ಫಲಕವನ್ನು ಅಳವಡಿಸುವ ಸಾರ್ವಜನಿಕರು ಹಾಗೂ ಭಕ್ತರಲ್ಲಿ ಜಾಗೃತಿ ಮೂಡಿಸಬೇಕು.ದೇವಸ್ಥಾನದಲ್ಲಿ ಪ್ರತಿದಿನ ಪ್ರಸಾದವನ್ನು ವಿತರಿಸಲು ಹಾಗೂ ಊಟ ತಿಂಡಿಗಾಗಿ ಯಾವುದೇ, ಪ್ಲಾಸ್ಟಿಕ್ ತಟ್ಟೆ, ಕಪ್ ಅಥವಾ ಬಟ್ಟಲನ್ನು ಉಪಯೋಗಿಸಬಾರದು. ಪ್ರವಾಸೋದ್ಯಮ ಸ್ಥಳಗಳಲ್ಲಿಯೂ ಊಟ ತಿಂಡಿಗಾಗಿ ಪ್ಲಾಸ್ಟಿಕ್ ತಟ್ಟೆ, ಕಪ್ ಅಥವಾ ಬಟ್ಟಲನ್ನು ಬಳಕೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಪೂಜ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತರದಂತೆ ಭಕ್ತರಿಗೆ ಸೂಚನೆ ನೀಡಬೇಕು. ದೇವರ ಪೂಜೆ ಮತ್ತು ಬಟ್ಟೆ, ಕಾಗದದ ಕೈಚೀಲಗಳಲ್ಲಿ, ಸ್ಟೀಲ್ ಅಥವಾ ಇನ್ನಿತರ ಲೋಹ, ಮಣ್ಣಿನ ಪಾತ್ರೆಗಳಲ್ಲಿ ತರುವಂತೆ ಭಕ್ತರಿಗೆ ಕಡ್ಡಾಯ ಸೂಚನೆ ನೀಡಬೇಕು. ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಜಾಹೀರಾತು ನೀಡಲು ಪ್ಲಾಸ್ಟಿಕ್‌ನಿಂದ ತಯಾರಿಸಿದ ಬ್ಯಾನರ್ ಮತ್ತು ಬಂಟಿಂಗ್ಸ್ ಬಳಸದಂತೆ ಕ್ರಮವಹಿಸಬೇಕು. ಪ್ಲಾಸ್ಟಿಕ್‌ನಿಂದ ತಯಾರಿಸಿದ ಅಲಂಕಾರಿಕ ಹೂವು, ತೋರಣ ಮುಂತಾದವುಗಳನ್ನು ಬಳಸದಂತೆ ಜಾಗ್ರತೆ ವಹಿಸಬೇಕು.

ನಿಷೇಧಾಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ಎಚ್ಚರಿಸಿದ್ದಾರೆ.

ಬಂಡೀಪುರದಲ್ಲೂ ನಿರ್ಬಂಧ

ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

ಅರಣ್ಯ ಸಂರಕ್ಷಿತ ಪ್ರದೇಶದ ಆವರಣದಲ್ಲಿ ಹಾಗೂ ಹೊರಗಡೆ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಕ್ಯಾರಿಬ್ಯಾಗ್, ತಟ್ಟೆ, ಲೋಟ, ಬಟ್ಟಲು, ಬ್ಯಾನರ್, ಬಂಟಿಂಗ್ಸ್‌ಗಳನ್ನು ಬಳಕೆ ಮಾಡಬಾರದು.

ಊಟ ತಿಂಡಿಗಾಗಿ ಪ್ಲಾಸ್ಟಿಕ್ ತಟ್ಟೆ, ಕಪ್ ಅಥವಾ ಬಟ್ಟಲನ್ನು ಉಪಯೋಗಿಸಬಾರದು. ವಿಶೇಷ ಸಂದರ್ಭಗಳಲ್ಲಿ ಜಾಹಿರಾತು ನೀಡಲು ಪ್ಲಾಸ್ಟಿಕ್‌ನಿಂದ ತಯಾರಿಸಿದ ಬ್ಯಾನರ್ ಮತ್ತು ಬಂಟಿಂಗ್ಸ್ ಬಳಸದಂತೆ ಕ್ರಮ ವಹಿಸಬೇಕು. ನಿಷೇಧಾಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT