ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸುರಕ್ಷತೆ: ವೈಜ್ಞಾನಿಕ ಕ್ರಮ ಅಳವಡಿಕೆಗೆ ಸೂಚನೆ

Last Updated 4 ಫೆಬ್ರುವರಿ 2021, 15:27 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ರಾಷ್ಟ್ರೀಯ, ರಾಜ್ಯ ಹೆದ್ದಾರಿ, ನಗರ ಹಾಗೂ ಪಟ್ಟಣಗಳ ಪ್ರಮುಖ ರಸ್ತೆಗಳಲ್ಲಿ ವೈಜ್ಞಾನಿಕ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರು ಸೂಚನೆ ನೀಡಿದರು.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಬೇಗೂರಿನಿಂದ ಬಂಡೀಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳು ಬರುತ್ತವೆ. ಈ ಭಾಗದಲ್ಲಿ ಹಠಾತ್ತಾಗಿ ವಾಹನ ಹಾಗೂ ಜನರ ಸಂಚಾರ ನಡೆಯುವುದರಿಂದ ವೈಜ್ಞಾನಿಕವಾಗಿ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು’ ಎಂದರು.

‘ಕೊಳ್ಳೇಗಾಲದ ಪ್ರವೇಶ ಭಾಗ, ನಗರದ ಮರಿಯಾಲ, ಸುಲ್ತಾನ್ ಶರೀಫ್ ವೃತ್ತದಿಂದ ಸೋಮವಾರಪೇಟೆ, ಗುಂಡ್ಲುಪೇಟೆ ರಸ್ತೆ, ಯಳಂದೂರಿನ ಬಳೆ ಮಂಟಪ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನ ಸಂಚಾರರಿಗೆ ವೇಗ ನಿರ್ಬಂಧ, ದಟ್ಟಣೆ ಸಂಕೇತ ತಿಳಿಸುವ ಸೂಚನಾ ಫಲಕಗಳನ್ನು ಅಳವಡಿಸಬೇಕು’ ಎಂದು ಸೂಚಿಸಿದರು.

ಮಾದರಿ ವೃತ್ತ ಮಾಡಿ:ನಗರದ ಭುವನೇಶ್ವರಿ ವೃತ್ತವನ್ನು ಜಿಲ್ಲೆಯಲ್ಲೇ ಎಲ್ಲ ಸುರಕ್ಷತಾ ಕ್ರಮಗಳನ್ನು ಅಳವಡಿಸಿದ ಮಾದರಿ ವೃತ್ತವನ್ನಾಗಿ ಅಭಿವೃದ್ದಿ ಪಡಿಸಬೇಕು. ಜೀಬ್ರಾ ಕ್ರಾಸಿಂಗ್, ಎಲ್.ಇ.ಡಿ. ಪರದೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆಯೊಂದಿಗೆ ಸಮಗ್ರ ರಸ್ತೆ ಸಂಚಾರ ಸುರಕ್ಷತಾ ವಿಧಾನಗಳು ಇರಬೇಕು. ಭುವನೇಶ್ವರಿ ವೃತ್ತದಿಂದ ರಾಮಸಮುದ್ರದವರೆಗಿನ ರಸ್ತೆಯಲ್ಲಿ ಸುರಕ್ಷತಾ ನಿಯಮಗಳನ್ನು ಅನುಸರಿಸಲು ಪೇಂಟಿಂಗ್ ಇನ್ನಿತರ ಕ್ರಮಗಳಿಗೆ ಮುಂದಾಗಬೇಕು. ಆಂಗವಿಕಲರ ಸ್ನೇಹಿಯಾಗಿಯೂ ರಸ್ತೆ ನಿಯಮಗಳು ರೂಪುಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

‘ರಸ್ತೆ ಅಪಘಾತಗಳು ಯಾವ ಭಾಗದಲ್ಲಿ ಹೆಚ್ಚು ಸಂಭವಿಸುತ್ತಿವೆ ಎಂಬ ಬಗ್ಗೆ ಅಪರಾಧ ವೈಜ್ಞಾನಿಕ ತನಿಖಾ ತಂಡ ಪರಿಶೀಲಿಸಬೇಕು, ಅಪಘಾತಗಳ ತಡೆಗೆ ಸ್ಥಳದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ನೀಡಬೇಕು’ ಎಂದರು.

ಟ್ರಕ್‌ ಟರ್ಮಿನಲ್‌:ನಗರದ ಸಮೀಪ ಲಾರಿ, ಟ್ರಕ್‌ಗಳ ನಿಲುಗಡೆಗಾಗಿ ಟ್ರಕ್ ಟರ್ಮಿನಲ್ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಬೇಕು. ತಹಶೀಲ್ದಾರರು ಸ್ಥಳ ಪರಿಶೀಲಿಸಿ ಟ್ರಕ್ ಗಳ ನಿಲುಗಡೆಯನ್ನು ಟರ್ಮಿನಲ್ಲಿಗೆ ಸ್ಥಳಾಂತರಿಸಲು ಪ್ರಕ್ರಿಯೆ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಶ್ರೀಧರ್, ನಗರಸಭೆ ಆಯುಕ್ತ ರಾಜಣ್ಣ, ಚುಡಾ ಆಯುಕ್ತೆ ಪಂಕಜ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಕೆ. ಸುರೇಶ್, ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT