ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಗಳ ಅಭಿವೃದ್ಧಿ ತ್ವರಿತಕ್ಕೆ ತಾಕೀತು

ಅಧಿಕಾರಿಗಳಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸಭೆ
Last Updated 24 ಅಕ್ಟೋಬರ್ 2020, 13:00 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ, ಶಿವನಸಮುದ್ರದ ರಂಗನಾಥಸ್ವಾಮಿ, ಚಾಮರಾಜನಗರದ ಚಾಮರಾಜೇಶ್ವರಸ್ವಾಮಿ ಮತ್ತು ಹಿಮವದ್ ಗೋಪಾಲಸ್ವಾಮಿ ದೇವಾಲಯದ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶುಕ್ರವಾರ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ತು ರಚನೆಯ ಸಭೆಯಲ್ಲಿ ಮಾತನಾಡಿದ ಅವರು, ‘ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಬ್ರಹ್ಮರಥ ನಿರ್ಮಾಣ, ಬಿಳಿಗಿರಿ ಭವನ ವಸತಿ ಗೃಹ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ರಂಗನಾಥಸ್ವಾಮಿ ಮತ್ತು ಸಮೂಹ ದೇವಾಲಯಗಳ ಅಭಿವೃದ್ದಿ ಹಾಗೂ ವಸತಿ ಗೃಹಗಳ ನಿರ್ಮಾಣ ಕೆಲಸವನ್ನೂ ಬೇಗ ಮುಗಿಸಬೇಕು’ ಎಂದು ಹೇಳಿದರು.

‘ನಗರದ ಚಾಮರಾಜೇಶ್ವರ ದೇವಾಲಯದ ಬ್ರಹ್ಮರಥ ಹಾಗೂ ರಥ ನಿಲುಗಡೆ ಕೊಠಡಿಯ ಕಾಮಗಾರಿಯನ್ನು ವೇಗಗೊಳಿಸಬೇಕು. ವಿಳಂಬಕ್ಕೆ ಅವಕಾಶವಾಗಬಾರದು. ಏಪ್ರಿಲ್ ಅಂತ್ಯದೊಳಗೆ ಈ ಎಲ್ಲಾ ಕೆಲಸ ಮುಗಿಸಬೇಕು’ ಎಂದು ಸೂಚನೆ ನೀಡಿದರು.

ಪ್ರಸ್ತಾವನೆ ಸಲ್ಲಿಸಿ:ಶತಮಾನ ಕಂಡಿರುವ, ಮುಜರಾಯಿ ಇಲಾಖೆಗೆ ಒಳಪಡುವ 185, ಖಾಸಗಿ 563 ದೇವಾಲಯಗಳನ್ನು ಅಭಿವೃದ್ಧಿ ಪಡಿಸುವ ಸಂಬಂಧ ತುರ್ತಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ದೇವಾಲಯದಲ್ಲಿ ಭಕ್ತಾಧಿಗಳಿಗೆ ಮೂಲ ಸೌಕರ್ಯ, ದೇವಾಲಯದ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳು ಪರೀಶೀಲನೆ ಮಾಡಬೇಕು. ಕೊಳ್ಳೇಗಾಲ ಪಟ್ಟಣದಲ್ಲಿ ಮರಳೇಶ್ವರ ಸ್ವಾಮಿ ದೇವಾಲಯದಲ್ಲಿರುವ ಅಂಗಡಿ ಮಳಿಗೆಗಳ ಬಾಕಿ ಇರುವ ಬಾಡಿಗೆಯನ್ನು ಪಡೆದು ದೇವಾಲಯದ ಖಾತೆಗೆ ಜಮಾ ಮಾಡಬೇಕು. ಈ ಅಂಗಡಿ ಮಳಿಗೆಗಳಿಗೆ ಹೊಸದಾಗಿ ಬಾಡಿಗೆ ನಿಗದಿಪಡಿಸಲು ಶೀಘ್ರವಾಗಿ ಟೆಂಡರ್ ಕರೆಯಬೇಕು’ ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಂದ್ರ, ತಹಶೀಲ್ದಾರ್‌ಗಳಾದ ಚಿದಾನಂದ ಗುರುಸ್ವಾಮಿ, ನಂಜುಂಡಯ್ಯ, ಸುದರ್ಶನ್, ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT