ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿ.ಸಿ ಡಾ.ಎಂ.ಆರ್.ರವಿ ಸೂಚನೆ

Last Updated 28 ಆಗಸ್ಟ್ 2020, 16:54 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಜನಾಕರ್ಷಣೆಯ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೂಚನೆ ನೀಡಿದರು.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಾದ್ಯಂತ ಅನೇಕ ಪ್ರವಾಸಿ ತಾಣಗಳಿದ್ದು, ಈ ಪ್ರವಾಸಿ ಸ್ಥಳಗಳಿಗೆ ಅಗತ್ಯವಾಗಿರುವ ರಸ್ತೆ, ಕುಡಿಯುವ ನೀರು, ಶೌಚಾಲಯ ಇನ್ನಿತರೆ ಮೂಲಸೌಕರ್ಯಗಳನ್ನು ಒದಗಿಸುವ ಅಗತ್ಯವಿದೆ’ ಎಂದು ಹೇಳಿದರು.

‘ನಗರದ ಕರಿವರದರಾಯನ ಬೆಟ್ಟ ಪ್ರದೇಶದ ಅಭಿವೃದ್ಧಿ, ಚಿಕ್ಕಹೊಳೆ, ಸುವರ್ಣಾವತಿ, ಗುಂಡಾಲ್ ಹಾಗೂ ಉಡುತೊರೆ ಜಲಾಶಯ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದುವರೆಗೆ ಆಗಿರುವ, ಆಗಬೇಕಾಗಿರುವ ವಿವಿಧ ಕಾಮಗಾರಿಗಳ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಅವುಗಳ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಪ್ರವಾಸಿ ತಾಣಗಳನ್ನು ಅಭಿವೃದ್ದಿಪಡಿಸಬೇಕಾಗಿದೆ’ ಎಂದರು.

‘ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಕರಿವರದರಾಯನ ಬೆಟ್ಟದ ದೇವಾಲಯಕ್ಕೆ 400 ವರ್ಷಗಳ ಇತಿಹಾಸವಿದೆ. ಕರಿವರದರಾಯನ ಬೆಟ್ಟ ಚಾಮರಾಜನಗರ ಪಟ್ಟಣದ ಸೌಂದರ್ಯಕ್ಕೆ ಮುಕುಟವಿದ್ದಂತೆ. ಅದನ್ನು ಸಂರಕ್ಷಿಸುವ ಕಾರ್ಯವಾಗಬೇಕು. ವಿಶೇಷವಾಗಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಪಡಿಸಿ ಜನರು ಸೆಳೆಯಬೇಕು’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು.

‘ಅರಣ್ಯ ಇಲಾಖೆ ವತಿಯಿಂದ ಬೆಟ್ಟದ ಸುತ್ತಲೂ ರಕ್ಷಣೆಗಾಗಿ 120 ಎಕರೆಗೆ ಬೇಲಿ ಅಳವಡಿಸಲಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ₹1.13 ಕೋಟಿ ವೆಚ್ಚದಲ್ಲಿ 820 ಸುಸಜ್ಜಿತ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಬೆಟ್ಟದಲ್ಲಿ ಸುಸ್ವಾಗತ ಕೋರುವ ಲೈಟಿಂಗ್ಸ್ ವ್ಯವಸ್ಥೆ ಮಾಡಬೇಕು. ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ಸುತ್ತುಗೋಡೆಯ ಅಗತ್ಯವಿದೆ. ಪ್ರವಾಸಿಗರಿಗೆ ಕುಡಿಯುವ ನೀರು, ಪ್ರವಾಸಿಗರಿಗೆ ಕುಳಿತುಕೊಳ್ಳಲು ಅಸನಗಳು, ಇನ್ನಿತರೆ ಸೌಕರ್ಯಗಳಿಗಾಗಿ ಯೊಜನಾಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು’ ಎಂದು ಹೇಳಿದರು.

‘ಚಿಕ್ಕಹೊಳೆ ಜಲಾಶಯದ ಪಕ್ಕದಲ್ಲಿ 30 ಎಕರೆ ಸರ್ಕಾರಿ ಜಾಗವಿದ್ದು, ಅಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಬೇಕು. ಇದಕ್ಕಾಗಿ ತಜ್ಞರಿಂದ ಪ್ರಸ್ತಾವನೆ ತಯಾರಿಸಿ ಸಲ್ಲಿಸಬೇಕು. ಸುವರ್ಣಾವತಿ ಜಲಾಶಯದ ರಸ್ತೆ ಪ್ರಗತಿಯಾಗಬೇಕು. ರಸ್ತೆ ಬದಿಯ ಸುತ್ತುಗೋಡೆ ಎತ್ತರ ಮಾಡಬೇಕು. ಎಲ್ಲ ಜಲಾಶಯಗಳ ಹೆಸರುಗಳಿಗೆ ಲೈಟಿಂಗ್ಸ್‌ ಅಳವಡಿಸಬೇಕು. ಪ್ರವಾಸಿಗರನ್ನು ಸೆಳೆಯಲು ಬೋಟಿಂಗ್ ವ್ಯವಸ್ಥೆ ಮಾಡಬೇಕು’ ಎಂದು ಅವರು ಸೂಚಿಸಿದರು.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು, ಕಾವೇರಿ ವನುಜೀವಿ ವಲಯದ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಡಿವೈಎಸ್‌ಪಿ ನವೀನ್‌ಕುಮಾರ್, ತಹಶೀಲ್ದಾರ್ ಕೆ.ಕುನಾಲ್, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ರಘು, ಇತರೆ ಅಧಿಕಾರಿಗಳು ಇದ್ದರು.

ಹೊಗೇನಕಲ್‌ನಲ್ಲಿ ತೂಗುಸೇತುವೆ: ಪ್ರಸ್ತಾವಕ್ಕೆ ಸೂಚನೆ

‘ಗುಂಡಾಲ್ ಹಾಗೂ ಉಡುತೊರೆ ಜಲಾಶಯಗಳ ಹೆಚ್ಚುವರಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕಾವೇರಿ ನೀರಾವರಿ ನಿಗಮದಿಂದ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು. ಹೊಗೇನಕಲ್ ಜಲಪಾತ ಕಾವೇರಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಬರುವುದರಿಂದ ಸೀಮಿತವಾಗಿ ಅಭಿವೃದ್ಧಿ ಪಡಿಸಬಹುದಾಗಿದೆ. ಪ್ರಮುಖವಾಗಿ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ಸೆಳೆಯಲು ಗೋಪಿನಾಥಂ ಪ್ರದೇಶವನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಬೇಕು. ಹೊಗೇನಕಲ್ ಜಲಪಾತದಲ್ಲಿ ತೂಗುಸೇತುವೆ ನಿರ್ಮಾಣಕ್ಕೆ ಕಾವೇರಿ ವನ್ಯಜೀವಿ ವಲಯ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಪ್ರಸ್ತಾವ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT