ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ: ಕುಡಿಯುವ ನೀರು ಕೊರತೆ ತಡೆಗೆ ಮುಂಜಾಗ್ರತಾ ಕ್ರಮಕ್ಕೆ ಡಿಸಿ ಸೂಚನೆ

Last Updated 1 ಮಾರ್ಚ್ 2021, 15:02 IST
ಅಕ್ಷರ ಗಾತ್ರ

ಚಾಮರಾಜನಗರ: ಬೇಸಿಗೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶದ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ಸೂಚನೆ ನೀಡಿದರು.

ಬೇಸಿಗೆ ವೇಳೆ ಉಂಟಾಗಬಹುದಾದ ಅಭಾವ ಪರಿಸ್ಥಿತಿ ಮತ್ತು ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸರಬರಾಜು ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ‘ಈಗಾಗಲೇ ಜಿಲ್ಲೆಯಲ್ಲಿ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಜೂನ್‌ವರೆಗೂ ಕುಡಿಯುವ ನೀರು ಸಮಸ್ಯೆ ತಲೆದೋರದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಮುಂದಿನ ಮೂರರಿಂದ ನಾಲ್ಕು ತಿಂಗಳ ಕಾಲ ನಗರ, ಪಟ್ಟಣ ಅಥವಾ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದರು.

‘ಲಭ್ಯವಿರುವ ಕೊಳವೆ ಬಾವಿಗಳು, ಕಿರು ನೀರು ಸರಬರಾಜು ಯೋಜನೆ ಇತರೆ ಜಲ ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ನೀರು ಪೂರೈಸಬೇಕು. ಕೊಳವೆ ಬಾವಿಗಳಲ್ಲಿ ಅಂತರ್ಜಲ, ನೀರಿನ ಮಟ್ಟ ಕಡಿಮೆಯಾಗಿದ್ದರೆ, ಅವುಗಳನ್ನು ಇನ್ನಷ್ಟು ಆಳವಾಗಿ ಕೊರೆದು, ಪುನಶ್ಚೇತನಗೊಳಿಸುವ ಪ್ರಕ್ರಿಯೆಗೆ ಮುಂದಾಗಬೇಕು’ ಎಂದು ಹೇಳಿದರು.

ಸಾರ್ವಜನಿಕ ನೀರಿನ ಲಭ್ಯತೆ ಇಲ್ಲದ ಕಡೆ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ನೀರು ಸರಬರಾಜು ಮಾಡಬೇಕು. ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಜೊತೆಗೂಡಿ ಗ್ರಾಮೀಣ ಭಾಗಗಳಿಗೆ ವ್ಯಾಪಕವಾಗಿ ಭೇಟಿ ನೀಡಿ ಕುಡಿಯುವ ನೀರಿನ ಬವಣೆ ನೀಗಿಸಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ಆದ್ಯತೆ ಮೇರೆಗೆ ನೀರು ಒದಗಿಸುವ ಕಾರ್ಯಗಳಿಗೆ ತಕ್ಷಣವೇ ಕಾರ್ಯೋನ್ಮುಖರಾಗಬೇಕು’ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಶುದ್ಧ ನೀರಿನ ಘಟಕಗಳ ದುರಸ್ತಿ:ಶುದ್ಧ ಕುಡಿಯುವ ನೀರಿನ ಘಟಕಗಳು ಬೇಸಿಗೆ ಸಮಯದಲ್ಲಿಯೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉಪಯುಕ್ತವಾಗಬೇಕಿದೆ.ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಏನಾದರೂ ಸಮಸ್ಯೆಗಳಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ತಾಂತ್ರಿಕ ತೊಂದರೆ ಅಥವಾ ನಿರ್ವಹಣಾ ಕಾರ್ಯದಲ್ಲಿ ಬದಲಾವಣೆಗಳು ಅಗತ್ಯವಿದ್ದರೆ ಕೂಡಲೇ ಸರಿಪಡಿಸಬೇಕು. ಬಾಕಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.

ಜಾನುವಾರುಗಳ ಬಗ್ಗೆಯೂ ಗಮನ ಹರಿಸಿ

‘ಬೇಸಿಗೆ ಸಂದರ್ಭದಲ್ಲಿ ಜಾನುವಾರುಗಳಿಗೂ ನೀರಿನ ಕೊರತೆ ಕಾಡಬಾರದು. ಮೇವು ಪೂರೈಕೆಯಲ್ಲಿಯೂ ವ್ಯತ್ಯಯವಾಗಬಾರದು. ಮೇವು ದಾಸ್ತಾನು ಲಭ್ಯವಿರಬೇಕು. ಎಲ್ಲಿಯೂ ದೂರುಗಳಿಗೆ ಅವಕಾಶವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು’ ಎಂದು ಡಾ.ಎಂ.ಆರ್‌.ರವಿ ಅವರು ಹೇಳಿದರು.

‘ಗೃಹಬಳಕೆಯ ಕುಡಿಯುವ ನೀರಿನ ಪೂರೈಕೆ‌ ಅವಧಿಯನ್ನು ಮುಂಚಿತವಾಗಿಯೇ ಜನರಿಗೆ ತಿಳಿಸಬೇಕು. ಬೇಸಿಗೆ ವೇಳೆ ಸಾಮಾನ್ಯವಾಗಿ ಎದುರಾಗಬಹುದಾದ ನಿರ್ಜಲೀಕರಣ, ಮಕ್ಕಳಿಗೆ ಕಾಣಿಸಿಕೊಳ್ಳಬಹುದಾದ ಅನಾರೋಗ್ಯದಂತಹ ಸಮಸ್ಯೆಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬ ಬಗ್ಗೆಯೂ ಸೇರಿದಂತೆ ಆರೋಗ್ಯ ಸಂಬಂಧಿ ಸಲಹೆಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ನೀಡುವ ವ್ಯವಸ್ಥೆಯಾಗಬೇಕು. ಅನಗತ್ಯವಾಗಿ ನೀರು ಪೋಲು ಮಾಡದೆ ಮಿತವ್ಯಯಿಯಾಗಿ ಬಳಸುವ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ, ತಹಶೀಲ್ದಾರರಾದ ಕೆ.ಕುನಾಲ್, ಚಿದಾನಂದ ಗುರುಸ್ವಾಮಿ, ನಾಗರಾಜು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‌ಕುಮಾರ್, ಶ್ರೀಕಂಠರಾಜೇ ಅರಸ್, ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಕುಲದೀಪ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್, ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ, ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT