ಮಂಗಳವಾರ, ಜೂನ್ 28, 2022
23 °C
ಸಕಾಲ ಸೇವೆ ಅನುಷ್ಠಾನ: ಅಧಿಕಾರಿಗಳೊಂದಿಗೆ ಚಾರುಲತಾ ಸೋಮಲ್‌ ಸಭೆ

ಅರ್ಜಿ ವಿಲೇವಾರಿ ವಿಳಂಬ ಸಲ್ಲ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸಕಾಲ ಸೇವೆ ಹಾಗೂ ಏಕೀಕೃತ ಸಾರ್ವಜನಿಕ ದೂರು ನಿವಾರಣಾ ತಂತ್ರಾಂಶ ನಿರ್ವಹಣಾ ವ್ಯವಸ್ಥೆಯಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಶುಕ್ರವಾರ ಸೂಚನೆ ನೀಡಿದರು.

ಸಕಾಲ ಸೇವೆ ಹಾಗೂ ಏಕೀಕೃತ ಸಾರ್ವಜನಿಕ ದೂರು ನಿವಾರಣಾ ವ್ಯವಸ್ಥೆಯ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ‌ಲ್ಲಿ ಮಾತನಾಡಿದ ಅವರು, ‘ಸಕಾಲ ಸೇವೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಸ್ವೀಕರಿಸಲಾಗುವ ಅರ್ಜಿಗಳನ್ನು ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಅರ್ಜಿ ಸ್ವೀಕೃತಿ ಬಗ್ಗೆ ಆಯಾ ದಿನವೇ ಅಧಿಕಾರಿಗಳು ಗಮನಹರಿಸಬೇಕು’ ಎಂದರು.

‘ಅರ್ಜಿಗಳನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸಬಾರದು. ಸೇವೆಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಂದ ದಾಖಲೆಗಳನ್ನು ಪಡೆದುಕೊಳ್ಳಬೇಕು. ದಾಖಲೆಗಳು ಲಭ್ಯವಾಗದಿದ್ದಲ್ಲಿ ಅಧಿಕಾರಿಗಳೇ ಅರ್ಜಿದಾರರ ಬಳಿ ತೆರಳಿ ಸೂಕ್ತ ಮಾಹಿತಿ ನೀಡಿ ದಾಖಲೆಗಳನ್ನು ಪಡೆದುಕೊಳ್ಳಬೇಕು. ಅನಗತ್ಯ ನೆಪದಿಂದ ಅರ್ಜಿಗಳಿಗೆ ಪರಿಹಾರ ನೀಡದೇ ಹೋದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಪ್ರತಿ ಇಲಾಖೆಗಳು ಆಯಾ ಹಂತದಲ್ಲಿಯೇ ಸಂಬಂಧಪಟ್ಟ ಪರಿಹಾರ ಕ್ರಮಗಳಿಗೆ ಮುಂದಾಗಬೇಕು. ತಾಂತ್ರಿಕ ಅಥವಾ ಬೇರೆ ಯಾವುದೇ ಸಮಸ್ಯೆಗಳು ಕಂಡು ಬಂದರೆ ಕೂಡಲೇ ಸರಿಪಡಿಸಿಕೊಳ್ಳಬೇಕು. ಅವಧಿ ಮೀರಿದ ನಂತರ ಅರ್ಜಿಗಳ ವಿಲೇವಾರಿ ಮಾಡುವುದನ್ನು ಸಹಿಸುವುದಿಲ್ಲ’ ಚಾರುಲತಾ ಹೇಳಿದರು.

ಏಕೀಕೃತ ಸಾರ್ವಜನಿಕ ದೂರು ನಿವಾರಣಾ ತಂತ್ರಾಂಶ ವ್ಯವಸ್ಥೆಯ ಪೋರ್ಟಲ್‌ನಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನೂ ಸೂಚಿತ ಅವಧಿಯೊಳಗೆ ವಿಲೇವಾರಿಯಾಗಬೇಕು ಎಂದು ಸೂಚಿಸಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ನಗರಾಭಿವೃದ್ದಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಂದಾ ಹಣಬರಟ್ಟಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ ರಾಜೇಂದ್ರಪ್ರಸಾದ್, ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕಿ ವಿದ್ಯಾಯಿನಿ, ಜಿಲ್ಲಾ ಸಕಾಲ ಸಮಾಲೋಚಕಿ ಪವಿತ್ರ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು