ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: ಆದ್ಯತಾ ಪಟ್ಟಿ ಸಿದ್ಧಪಡಿಸಲು ಡಿ.ಸಿ‌ ಸೂಚನೆ

Last Updated 30 ಅಕ್ಟೋಬರ್ 2020, 13:40 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಬರುವ ದಿನಗಳಲ್ಲಿಲಭ್ಯವಾಗಲಿರುವ ಕೋವಿಡ್-19 ಲಸಿಕೆಯನ್ನು ಮೊದಲ ಹಂತದಲ್ಲಿ ನೀಡಲು ಆದ್ಯತಾ ಪಟ್ಟಿಯನ್ನು ಸಿದ್ಧ ಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ನಡೆದ ಕೋವಿಡ್-19 ಲಸಿಕೆ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 'ಲಸಿಕೆ ಲಭ್ಯವಾದಲ್ಲಿ ಕೋವಿಡ್- 19 ನಿರ್ವಹಣೆಯಲ್ಲಿ ನಿರತರಾಗಿರುವ ಆರೋಗ್ಯ ಸೇವೆಯ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ನೀಡಬೇಕು ಎಂದು ಈಗಾಗಲೇ ಸೂಚನೆ ಬಂದಿದೆ. ಇದಕ್ಕಾಗಿ ಆರೋಗ್ಯ ಸೇವೆಯಲ್ಲಿ ತೊಡಗಿರುವವರ ನಿಖರ ಮಾಹಿತಿಯನ್ನೊಳಗೊಂಡ ಆದ್ಯತಾ ಪಟ್ಟಿಯನ್ನು ಸಲ್ಲಿಸಲು ಅಧಿಕಾರಿಗಳು
ಕಾರ್ಯೋನ್ಮುಖರಾಗಬೇಕು' ಎಂದು ನಿರ್ದೇಶನ ನೀಡಿದರು.

‘ಪ್ರಥಮ ಹಂತದಲ್ಲಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಎಲ್ಲ ಆಸ್ಪತ್ರೆಗಳು, ಸಮುದಾಯ ಆರೋಗ್ಯ
ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುಷ್ ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳು, ಕಾರ್ಪೊರೇಟ್ ಆಸ್ಪತ್ರೆಗಳು, ಖಾಸಗಿ ವೈದ್ಯಕೀಯ ಕಾಲೇಜು, ನರ್ಸಿಂಗ್ ಹೋಂ, ಕ್ಲಿನಿಕ್‍ಗಳಲ್ಲಿ ಇರುವ ಎಲ್ಲಾ ಆರೋಗ್ಯ ಸಂಬಂಧಿ ಸೇವಾ ಕಾರ್ಯಕರ್ತರನ್ನು ಒಳಗೊಂಡ ಪಟ್ಟಿ ತಯಾರಿಸಬೇಕು' ಎಂದರು.

‘ಎ.ಎನ್.ಎಂ, ಎಂಪಿಡಬ್ಲ್ಯು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ನರ್ಸ್‌ಗಳು ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯಕೀಯ ಕಾಲೇಜಿನ ಬೋಧಕರು, ಬೋಧಕೇತರ ಸಿಬ್ಬಂದಿ, ಪ್ಯಾರಾ ಮೆಡಿಕಲ್ ಸಿಬ್ಬಂದಿ, ವೈದ್ಯಕೀಯ ತಂತ್ರಜ್ಞರು, ವಿಜ್ಞಾನಿಗಳು, ಡಾಟಾ ಎಂಟ್ರಿ ಆಪ ರೇಟರ್‌ಗಳು ಸೇರಿದಂತೆ ವೈದ್ಯಕೀಯ ವಲಯಕ್ಕೆ ಸಂಬಂಧಿಸಿದ ವಿವಿಧ ಹಂತದ ಸಿಬ್ಬಂದಿಯನ್ನು ಪಟ್ಟಿಯಲ್ಲಿ ಸೇರಿಸಬೇಕು' ಎಂದರು.

'ಆದ್ಯತಾ ಪಟ್ಟಿ ಸಿದ್ಧಪಡಿಸುವ ಸಲುವಾಗಿಯೇ ಅಧಿಕಾರಿಗಳ ತಂಡ ರಚನೆ ಮಾಡಿ ಸೂಕ್ತ ತರಬೇತಿ ನೀಡಬೇಕಿದೆ. ಲಸಿಕೆ ದಾಸ್ತಾನು ನಿರ್ವಹಣೆ ಸೇರಿದಂತೆ ಒಟ್ಟಾರೆ ಪ್ರಥಮ ಹಂತದಲ್ಲಿ ಲಸಿಕೆ ನೀಡುವ ಉದ್ದೇಶಕ್ಕಾಗಿಯೇ ಎಲ್ಲ ಸಿದ್ಧತೆಗಳನ್ನು ಒಳಗೊಂಡ ನೀಲಿ ನಕಾಶೆ ತಯಾರಿಸಿ ಸಿದ್ಧ ಪಡಿಸಿಕೊಳ್ಳಬೇಕು' ಎಂದರು.

‘ಆರೋಗ್ಯ ಇಲಾಖೆ ಜೊತೆ ಇತರೆ ಇಲಾಖೆಗಳು ಸೇರಿ ಸಮನ್ವಯದಿಂದ ಆದ್ಯತಾ ಪಟ್ಟಿ ತಯಾರಿಸಬೇಕು. ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿಯೇ ಕಂಟ್ರೋಲ್ ರೂಂ ತೆರೆಯಬೇಕು’ ಎಂದು ಡಾ.ಎಂ.ಆರ್.ರವಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ವಿಶ್ವ ಆರೋಗ್ಯ ಸಂಸ್ಥೆಯ ಮೈಸೂರು ಸರ್ವಲೆನ್ಸ್ ಅಧಿಕಾರಿ ಡಾ. ಸುಧೀರ್ ನಾಯಕ್, ಜಿಲ್ಲಾ ಲಸಿಕಾಧಿಕಾರಿ ವಿಶ್ವೇಶ್ವರಯ್ಯ, ಸರ್ವಲೇನ್ಸ್ ಅಧಿಕಾರಿ ಡಾ.ನಾಗರಾಜು, ಡಾ.ಮಹೇಶ್, ಜಿಲ್ಲಾ ಸರ್ಜನ್‌ ಮುರಳೀಕೃಷ್ಣ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT