ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಅಭಿವೃದ್ಧಿ: ಶೇ 100ರಷ್ಟು ಸಾಧನೆಗೆ ಡಿ.ಸಿ ತಾಕೀತು

Last Updated 6 ಮಾರ್ಚ್ 2021, 15:47 IST
ಅಕ್ಷರ ಗಾತ್ರ

ಚಾಮರಾಜನಗರ: ವಿವಿಧ ಇಲಾಖೆಗಳು ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆಯಡಿ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ ಶೇ 100ರಷ್ಟು ಸಾಧನೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಾಕೀತು ಮಾಡಿದರು.

ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆಯಡಿ ಇಲಾಖೆಗಳು ನಿರ್ವಹಿಸಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟರ ಶ್ರೇಯೋಭಿವೃದ್ದಿಗಾಗಿ ಪ್ರತಿ ಇಲಾಖೆಗೂ ನಿಗದಿಯಾಗಿರುವ ಅನುದಾನ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆಯಾಗಬೇಕು. ಈಗಾಗಲೇ ಬಹುತೇಕ ಇಲಾಖೆಗಳು ಪೂರ್ಣ ಪ್ರಮಾಣದತ್ತ ಸಾಧನೆ ಮಾಡುವಲ್ಲಿ ಮುಂದಾಗಿವೆ. ಇನ್ನೂ ಕೆಲ ಇಲಾಖೆಗಳು ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಶೇ 100ರಷ್ಟು ಸಾಧನೆ ಮಾಡಬೇಕು’ ಎಂದರು.

‘ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಸ್ವಯಂ ಉದ್ಯೋಗ ಇನ್ನಿತರ ಉದ್ದೇಶಗಳಿಗಾಗಿ ಫಲಾನುಭವಿಗಳಿಗೆ ನೀಡಲಾಗುವ ಸಾಲ ಸಹಾಯಧನ ಪ್ರಕ್ರಿಯೆಯನ್ನು ಕೂಡಲೇ ಮುಗಿಸಬೇಕು. ಬ್ಯಾಂಕುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಫಲಾನುಭವಿ ಅರ್ಜಿದಾರರಿಗೆ ತಕ್ಷಣವೇ ಆರ್ಥಿಕ ನೆರವು ನೀಡಬೇಕು. ಕೇಂದ್ರ ಕಚೇರಿಗಳಿಂದ ಬಾಕಿ ಉಳಿದಿರುವ ಯೋಜನೆಗಳಿಗೆ ಮಂಜೂರಾತಿ ಪಡೆದು ಸವಲತ್ತು ತಲುಪಿಸಬೇಕು’ ಎಂದು ಅವರು ನಿರ್ದೇಶನ ನೀಡಿದರು.

‘ಸಣ್ಣ ನೀರಾವರಿ ಇಲಾಖೆ ನಿರ್ಮಾಣ ಮಾಡಿರುವ ಚೆಕ್‌ಡ್ಯಾಂ‌ಗಳು, ಇತರೆ ನೀರಿನ ಸೌಲಭ್ಯಗಳಿಗಾಗಿ ಕೈಗೊಂಡಿರುವ ಅಭಿವೃದ್ಧಿ ಕೆಲಸ ಸ್ಥಳದಲ್ಲಿ ಯಾವ ಯೋಜನೆಯಿಂದ ಕಾರ್ಯ ನಿರ್ವಹಿಸಲಾಗಿದೆ ಎಂಬ ಫಲಕಗಳನ್ನು ಪ್ರದರ್ಶಿಸಬೇಕು. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ಕೈಗೆತ್ತಿಕೊಂಡಿರುವ ಬಾಕಿ ಅಭಿವೃದ್ಧಿ ಯೋಜನೆ ಸಕಾಲದಲ್ಲಿ ಪೂರ್ಣವಾಗಬೇಕು’ ಎಂದರು.

‘ಆರ್ಥಿಕ ವರ್ಷ ಅಂತ್ಯಗೊಳ್ಳುತ್ತಿರುವುದರಿಂದ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿಯಲ್ಲಿ ಹಿಂದೆ ಉಳಿಯಬಾರದು. ನಿಗದಿಯಾಗಿರುವ ಅನುದಾನ ಪೂರ್ಣ ಪ್ರಮಾಣದಲ್ಲಿ ಪರಿಶಿಷ್ಟರ ಅಬಿವೃದ್ಧಿ ಕಾರ್ಯಗಳಿಗೆ ಸದ್ಬಳಕೆಯಾಗಬೇಕು. ಅನುದಾನ ವಾಪಸ್ ಹೋಗಬಾರದು’ ಡಾ.ಎಂ.ಆರ್.ರವಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಭಾಗೀರಥಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ,ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್, ರೇಷ್ಮೆ ಇಲಾಖೆ ಉಪನಿರ್ದೇಶಕ ಶಿವಮಲ್ಲು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವಿಜಯ್ ಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಚೌರಾಸಿಯಾ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT