ಶನಿವಾರ, ಜನವರಿ 23, 2021
19 °C
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ

ಚಾಮರಾಜನಗರ: ಕಾಲಮಿತಿಯೊಳಗೆ ಕಡತ ವಿಲೇವಾರಿಗೆ ಡಿ.ಸಿ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಕಡತಗಳನ್ನು ಬಾಕಿ ಉಳಿಸಿಕೊಳ್ಳದೇ ತ್ವರಿತವಾಗಿ ವಿಲೇವಾರಿ ಮಾಡಿ ಕಾಲಮಿತಿಯೊಳಗೆ ಫಲಾನುಭವಿಗಳಿಗೆ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಾಕೀತು ಮಾಡಿದರು. 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಪ್ರತಿ ಇಲಾಖೆಯಲ್ಲಿ ನಿಗದಿಯಾಗಿರುವ ಅನುದಾನ ನಿರ್ದಿಷ್ಟ ಅವಧಿಯೊಳಗೆ ವಿನಿಯೋಗವಾಗಬೇಕಿದೆ. ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮ ಜಾರಿ ಸಂಬಂಧ ಇರುವ ಯಾವುದೇ ಕಡತವನ್ನು ಅನಾವಶ್ಯಕವಾಗಿ ಇಟ್ಟುಕೊಳ್ಳದೆ ಕೂಡಲೇ ವಿಲೇವಾರಿ ಮಾಡಬೇಕು. ಸಂಬಂಧ ಪಟ್ಟ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಸಿಗಬೇಕು’ ಎಂದು ಹೇಳಿದರು.

‘ಕೆಲವು ಇಲಾಖೆಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈಗಾಗಲೇ ಜನವರಿ ತಿಂಗಳು ಆರಂಭವಾಗಿದೆ. ನಿಗದಿತ ಗುರಿ ಅನುಸಾರ ಆಯಾ ಮಾಸದಲ್ಲಿಯೇ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲೇಬೇಕು. ಕ್ರಿಯಾ ಯೋಜನೆ ಅನುಮೋದನೆ ಪಡೆಯದ ಇಲಾಖೆಗಳು ತಕ್ಷಣವೇ ಅನುಮೋದನೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದರು.

‘ಯೋಜನೆ ಅನುಷ್ಠಾನದಲ್ಲಿ ಯಾವುದೇ ತೊಡಕುಗಳಿದ್ದರೆ ಸಂಬಂಧ ಪಟ್ಟ ಇತರೆ ಇಲಾಖೆ ಅಥವಾ ಉನ್ನತ ಕೇಂದ್ರ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು. ಅನಗತ್ಯ ಸಬೂಬು ನೀಡಿ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸದೇ ಇದ್ದಲ್ಲಿ ಗಂಭೀರ ಕ್ರಮಗಳಿಗೆ ಗುರಿಯಾಗಬೇಕಾಗುತ್ತದೆ. ಸಣ್ಣ ವಿಚಾರವನ್ನೂ ಅಲಕ್ಷ್ಯ ಮಾಡುವಂತಿಲ್ಲ’ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದರು.

‘ಬ್ಯಾಂಕುಗಳಿಂದ ಸಾಲ ಸಹಾಯಧನ ನೀಡುವ ಯೋಜನೆ ಕಾರ್ಯಕ್ರಮಗಳ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಬೇಕು. ಸಹಕಾರ ಸಮನ್ವಯದಿಂದ ಆಯಾ ಭಾಗದ ಬ್ಯಾಂಕುಗಳ ಮೂಲಕ ಫಲಾನುಭವಿಗಳಿಗೆ ಆರ್ಥಿಕ ನೆರವು ಸಿಗುವಂತೆ ನಿಗಾವಹಿಸಬೇಕು. ಕೈಗೊಂಡ ಕ್ರಮದ ಬಗ್ಗೆ ವರದಿ ಮಾಡಬೇಕು’ ಎಂದು ಅವರು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾಗೀರಥಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಇಬ್ರಾಹಿಂ, ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ಸುರೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವರಾಜು, ಕೃಷಿ ಜಂಟಿ ನಿರ್ದೇಶಕ ಚಂದ್ರಕಲಾ, 
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಸಿ. ವೀರಭದ್ರಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜು, ಪ್ರೇಮ್‌ಕುಮಾರ್ ಇತರೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.