ಭಾನುವಾರ, ಜುಲೈ 25, 2021
22 °C

ಎಸ್ಸೆಸ್ಸೆಲ್ಸಿ ಪರೀಕ್ಷೆ– ಅಕ್ರಮಗಳ ಮೇಲೆ ಹದ್ದಿನ ಕಣ್ಣು: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸೋಮವಾರ (ಜುಲೈ 19) ಹಾಗೂ 22 (ಗುರುವಾರ) ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದ್ದು, ಇಲ್ಲ ಸಲ್ಲದ ವದಂತಿಗಳನ್ನು ಹರಡುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.  

ಪರೀಕ್ಷಾ ಸಿದ್ಧತೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘85 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ತಾಲ್ಲೂಕುಗಳಲ್ಲಿ ತಲಾ ಎರಡು ಕೇಂದ್ರಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. 6,440 ಗಂಡು ಮಕ್ಕಳು, 5,749 ಹೆಣ್ಣುಮಕ್ಕಳು ಸೇರಿ 12,189 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೋವಿಡ್‌ ಕಾರಣಕ್ಕೆ ಪರೀಕ್ಷೆ ಸ್ವರೂಪ ಬದಲಾಗಿದೆ. ಸೋಮವಾರ ಕೋರ್‌ ವಿಷಯಗಳು ಹಾಗೂ ಗುರುವಾರ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದ್ದು, ತಲಾ 120 ಅಂಕಗಳಿಗೆ ಪರೀಕ್ಷೆಗಳು ನಡೆಯಲಿವೆ. ಬಹು ಆಯ್ಕೆ ಮಾದರಿ ಪ್ರಶ್ನೆಗಳಿದ್ದು, ಉತ್ತರಿಸಲು ಒಎಂಆರ್‌ ಹಾಳೆಗಳನ್ನು ನೀಡಲಾಗುತ್ತದೆ’ ಎಂದರು. 

‘ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ವಿತರಣೆ, ಪಲ್ಸ್‌ ಆಕ್ಸಿಮೀಟರ್‌ನಲ್ಲಿ ಆಮ್ಲಜನಕದ ಮಟ್ಟ ತಪಾಸಣೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸುರಕ್ಷಿತ ಅಂತರ ಕಾಪಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ದೃಢಪಟ್ಟ ವಿದ್ಯಾರ್ಥಿ ಇಚ್ಛೆಪಟ್ಟಲ್ಲಿ ಪೋಷಕರ ಒಪ್ಪಿಗೆ ಹಾಗೂ ವೈದ್ಯಕೀಯ ಸಲಹೆ ಮೇರೆಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಕೋವಿಡ್ ಪಾಸಿಟಿವ್ ಕಾರಣದಿಂದ ಪರೀಕ್ಷೆಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಮುಂದಿನ ಪರೀಕ್ಷೆಯ ಹಾಜರಾತಿಯನ್ನು ಪ್ರಥಮ ಪ್ರಯತ್ನವೆಂದೇ ಪರಿಗಣಿಸಲಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ, ಗೊಂದಲಕ್ಕೆ ಒಳಗಾಗಬಾರದು’ ಎಂದರು.

‘ಪರೀಕ್ಷಾ ಕಾರ್ಯಕ್ಕೆ 2,176 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಟೋಟರಿ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮಾಸ್ಕ್‌ ವಿತರಿಸಿವೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 18 ವರ್ಷ ಮೇಲ್ಪಟ್ಟ ಹಾಗೂ ಲಸಿಕೆ ಪಡೆದಿರುವ 171 ಸ್ವಯಂ ಸೇವಕರನ್ನು ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾಗಿದೆ’ ಎಂದು ಡಾ.ಎಂ.ಆರ್‌.ರವಿ ಅವರು ಹೇಳಿದರು. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ, ಯೋಜನಾ ಸಮನ್ವಯಾಧಿಕಾರಿ ಮಂಜುನಾಥ್ ಇದ್ದರು. 

ಪ‍್ರವೇಶ ಪತ್ರ ನೀಡದಿದ್ದರೆ ಕ್ರಮ: ಎಚ್ಚರಿಕೆ

ಶುಲ್ಕದ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳು ಪ್ರವೇಶ ಪತ್ರ ನೀಡುತ್ತಿಲ್ಲ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ನಮ್ಮಲ್ಲಿ ಎಲ್ಲ ಶಾಲೆಗಳು ಪ್ರವೇಶ ಪತ್ರ ನೀಡುತ್ತಿವೆ. ಇದರ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಲಾಗಿದೆ. ಪ್ರವೇಶ ಪತ್ರ ನೀಡದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಹೇಳಿದರು. 

---

ಕೋವಿಡ್‌ ಹರಡುವಿಕೆ ತಡೆಗೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕ ಪಡದೇ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಬೇಕು
ಡಾ.ಎಂ.ಆರ್‌.ರವಿ, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.