ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿ ಮುಂದೆ ಸಮಸ್ಯೆ ಬಿಚ್ಚಿಟ್ಟ ಗ್ರಾಮಸ್ಥರು

ಬಾಗಳಿಯಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ, ಎತ್ತಿನ ಬಂಡಿ ಮೆರವಣಿಯ ಮೂಲಕ ಅದ್ಧೂರಿ ಸ್ವಾಗತ
Last Updated 16 ಅಕ್ಟೋಬರ್ 2021, 15:17 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಗ್ರಾಮದಲ್ಲಿ ಚಿರತೆ, ಹಂದಿ ಕಾಟ ವಿಪರೀತವಾಗಿದೆ. ಬಸ್‌ ವ್ಯವಸ್ಥೆ ಇಲ್ಲ, ರಾತ್ರಿ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇರುವುದಿಲ್ಲ, ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಶಾಲಾ ಕಟ್ಟಡವನ್ನು ದುರಸ್ತಿಗೊಳಿಸಿ, ನಿವೇಶನ ಮತ್ತು ಜಮೀನಿನ ಖಾತೆ ಮಾಡಿಸಿ ಕೊಡಿ...

– ಬಾಗಳಿ ಗ್ರಾಮಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇಂತಹ ಹತ್ತಾರು ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಮುಂದೆ ಇಟ್ಟರು. ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಇದಕ್ಕೆ ವೇದಿಕೆ ಕಲ್ಪಿಸಿತು.

ಹೋಬಳಿಯ ಬಾಗಳಿಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ವಾಸ್ತವ್ಯ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರೊಂದಿಗೆ ವಿವಿಧ ಇಲಾಖೆಗಳ ಮುಖ್ಯಸ್ಥರೂ ಭಾಗಿಯಾಗಿದ್ದರು.

ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿ ಅವರನ್ನು ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು. ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಹವಾಲು ಸ್ವೀಕಾರ:ಬಾಗಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸರತಿ ಸಾಲಿನಲ್ಲಿ ನಿಂತು ಜಿಲ್ಲಾಧಿಕಾರಿ ಅವರಿಗೆ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಿದರು. ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಅವರು, ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರ ಕೆಲಸಗಳನ್ನು ನಿರ್ವಹಿಸುವಂತೆ ಸೂಚಿಸಿದರು.

‘ಬಾಗಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ, ಹಂದಿಗಳ ಕಾಟ ಹೆಚ್ಚಾಗಿದೆ. ಜಮೀನಿಗೆ ತೆರಳಲು ತೊಂದರೆಯಾಗುತ್ತಿದೆ. ಅರಣ್ಯ ಅಧಿಕಾರಿಗಳಿಗೆ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ಚಂದ್ರು ದೂರಿದರು.

ಡಾ.ಎಂ.ಆರ್.ರವಿ ಅವರು ಪ್ರತಿಕ್ರಿಯಿಸಿ ‘ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇದು ಜಿಲ್ಲಾ ಕಾರ್ಯಕ್ರಮವಾಗಿದ್ದರೂ ಎಸಿಎಫ್‌ ಹಾಗೂ ಡಿಸಿಎಫ್‌ ಅಧಿಕಾರಿಗಳು ಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಬಂದು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗೆ ತಾಕೀತು ಮಾಡಿದರು.

ಗ್ರಾಮಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಅವರು ಮಾತನಾಡಿ, ‘ಜನ್ನೂರು ಗ್ರಾಮದಿಂದ ಬಾಗಳಿ ಹಾಗೂ ಮೂಗೂರುವರೆಗೆ ಬಸ್ ವ್ಯವಸ್ಥೆ ಇಲ್ಲದಂತಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸುತ್ತಮುತ್ತ ಬೆಟ್ಟಗುಡ್ಡ ಪ್ರದೇಶವಾಗಿರುವುದರಿಂದ ನಡೆದು ಹೋಗಲು ಪ್ರಾಣಿಗಳ ಭಯವಿದೆ. ಈ ಗ್ರಾಮಗಳ ಸನಿಹದಲ್ಲಿ ಉಮ್ಮತ್ತೂರು ಹಾಗೂ ಹಳ್ಳಿಕೆರೆಹುಂಡಿ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ರಾತ್ರಿ ಸಮಯದಲ್ಲಿ ವೈದ್ಯಾಧಿಕಾರಿಗಳು ವಾಸ್ತವ್ಯ ಇರುವಂತೆ ಅವಕಾಶ ಮಾಡಿಕೊಡಬೇಕು. ಜನ್ನೂರು ಕೆರೆಗೆ ನದಿ ಮೂಲದಿಂದ ನೀರು ತುಂಬಿಸಲಾಗುತ್ತಿರುವುದರಿಂದ ಕೆರೆಯಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆಯವರು ಕಟಾವು ಮಾಡಿಸಬೇಕು’ ಎಂದು ಒತ್ತಾಯಿಸಿದರು.

‘ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಹಾಗೂ ದುಃಸ್ಥಿತಿಗೊಂಡಿರುವ ಶಾಲಾ ಕಟ್ಟಡಗಳನ್ನು ದುರಸ್ತಿಗೊಳಿಸಬೇಕು. ಖಾಲಿ ನಿವೇಶನ ಹಾಗೂ ಜಮೀನುಗಳನ್ನು ಖಾತೆ ಮಾಡಿಸಿಕೊಡಬೇಕು. ಜಮೀನಿಗೆ ತೆರಳುವ ಮಾರ್ಗದಲ್ಲಿ ಒತ್ತುವರಿ ಜಾಗ ಬಿಡಿಸಿಕೊಡಬೇಕು. ಗ್ರಾಮಗಳಲ್ಲಿ ಚರಂಡಿ ಹಾಗೂ ರಸ್ತೆ ಸಮಸ್ಯೆಗಳನ್ನು ಬಗೆ ಹರಿಸಬೇಕು’ ಎಂದು ಸಾರ್ವಜನಿಕರು ಅಹವಾಲು ಸಲ್ಲಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ‘ಕಾರ್ಯಕ್ರಮದಲ್ಲಿ ಭಾಗವಹಿಸಿದೇ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ರಾತ್ರಿ ಸಮಯದಲ್ಲಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಇರುವಂತೆ ಸೂಚನೆ ನೀಡಬೇಕು’ ಎಂದು ಸ್ಥಳದಲ್ಲಿದ್ದ ಜಿಲ್ಲಾ ಆರೋಗ್ಯ ಮುತ್ತು ಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಿದರು.

‘ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ರಸ್ತೆಗಳನ್ನು ಸರಿಪಡಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು. ವಾರದೊಳಗೆ ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಜತೆಗೆ ದುರಸ್ತಿಗೊಂಡಿರುವ ಶಾಲಾ ಕೊಠಡಿಗಳ ಪಟ್ಟಿ ಮಾಡಿ ತಿಳಿಸಬೇಕು’ ಎಂದು ಸ್ಥಳದಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದರು.

ಜಮೀನಿಗೆ ತೆರಳಲು ರೈತರಿಗೆ ರಸ್ತೆ ಅವಕಾಶ ಮಾಡಿಕೊಡಬೇಕು. ನಂತರ ಅವರ ದಾಖಲೆ ಪಡೆದು ಖಾತೆ ಮಾಡಿಸಿಕೊಡಬೇಕು ಎಂದು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಜೆ ಶಾಸಕ ಎನ್‌.ಮಹೇಶ್‌ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ್. ಎಂ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಉಪ ವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬದೋಲೆ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಆರೋಗ್ಯ ಮುತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜೆ.ಎಂ.ವಿಶ್ವೇಶ್ವರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಅದ್ಧೂರಿ ಸ್ವಾಗತ, ಎತ್ತಿನ ಬಂಡಿ ಮೆರವಣಿಗೆ

ಗ್ರಾಮದಲ್ಲಿ ವಾಸ್ತವ್ಯ ಹೂಡಲು ಬಂದ ಜಿಲ್ಲಾಧಿಕಾರಿ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತವನ್ನೇ ನೀಡಿದರು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಡಾ.ಎಂ.ಆರ್.ರವಿ ಅವರು ಬಾಗಳಿ ಗ್ರಾಮಕ್ಕೆ ತಲುಪಿದರು. ಗ್ರಾಮದ‍ಪ್ರವೇಶ ದ್ವಾರದಿಂದ ವಾಸ್ತವ್ಯ ನಡೆಯಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣದವರೆಗೆ ಅವರನ್ನು ಅಲಂಕೃತ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ಮಂಗಳವಾದ, ಸೂರಾಪಾನಿಯೊಂದಿಗೆ ಮೆರವಣಿಗೆ ನಡೆಯಿತು. ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

ಉಪವಿಭಾಗಾಧಿಕಾರಿ ಗಿರೀಶ್‌ ದಿಲೀಪ್‌ ಬದೋಲೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿಶ್ವೇಶ್ವರಯ್ಯ ಅವರು ಎತ್ತಿನ ಗಾಡಿಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಜೊತೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT