ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಡಿ.ಸಿ

ಜನರ ಕೆಲಸ ವಿಳಂಬ ಮಾಡುವ ನೌಕರರಿಗೆ ಎಚ್ಚರಿಕೆ; ಕರ್ತವ್ಯ ಲೋಪವಾದರೆ ಕ್ರಮ ಖಚಿತ
Last Updated 18 ಮೇ 2022, 16:04 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸ ವಿಳಂಬವಾಗುತ್ತಿದೆ. ಲಂಚ ನೀಡದೆ ಯಾವ ಕೆಲಸವೂ ಆಗುತ್ತಿಲ್ಲ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅಧಿಕಾರಿಗಳಿಗೆ, ಅದರಲ್ಲೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಿಸಿ ಮುಟ್ಟಿಸುವ ಕೆಲಸ ಆರಂಭಿಸಿದ್ದಾರೆ.

ಎರಡು ವಾರಗಳಹಿಂದೆ ಚಾಮರಾಜನಗರ ನಗರಸಭೆಯ ಕಂದಾಯ ಅಧಿಕಾರಿ ಜಯಶೀಲ ಅವರನ್ನು ಕರ್ತವ್ಯ ಲೋಪ ಆರೋಪದಲ್ಲಿ ಸೇವೆಯಿಂದ ಅಮಾನತು ಮಾಡಿದ್ದ ಡಿಸಿ, ಕಳೆದ ವಾರ ಹನೂರು ತಾಲ್ಲೂಕು ತಹಶೀಲ್ದಾರ್‌ ಜಿ.ಎಚ್‌.ನಾಗರಾಜು ಅವರನ್ನು ಒಂದೂವರೆ ತಿಂಗಳ ಕಾಲ ಕಡ್ಡಾಯ ರಜೆ ಮೇಲೆ ಸೇವೆಯಿಂದ ಬಿಡುಗಡೆ ಮಾಡಿದ್ದಾರೆ. ಜನರ ಕೆಲಸವನ್ನು ವಿಳಂಬ ಮಾಡುತ್ತಿದ್ದ ಆರೋಪದಲ್ಲಿ ಗ್ರೇಡ್‌–2 ತಹಶೀಲ್ದಾರ್‌ ರಾಜಾಕಾಂತ್‌ ಅವರನ್ನು ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ಶಿರಸ್ತೇದಾರ್ ರವಿ ಅವರನ್ನು ಯಳಂದೂರು ತಾಲ್ಲೂಕು ಕಚೇರಿಗೆ ವರ್ಗಾವಣೆ ಮಾಡಿದ್ದಾರೆ.

ಹೆಚ್ಚು ದೂರು ಕೇಳಿ ಬರುತ್ತಿರುವ ಸರ್ಕಾರಿ ಕಚೇರಿಗೆ ಖುದ್ದಾಗಿ ಭೇಟಿ ನೀಡುತ್ತಿದ್ದಾರೆ. ಆರೋಪಗಳ ಬಗ್ಗೆ ಆಂತರಿಕ ತನಿಖೆಯನ್ನೂ ನಡೆಸುತ್ತಿದ್ದು, ನಿಜವೆಂದು ಕಂಡು ಬಂದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಅಧಿಕಾರಿಗಳಿಗೆ ನೀಡಿದ್ದಾರೆ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೂ ಹಲವರು ದೂರು ನೀಡಿದ್ದಾರೆ.ಹನೂರು ತಾಲ್ಲೂಕು ಪಂಚಾಯಿತಿಯಲ್ಲಿ ಜನರ ಕೆಲಸ ವಿಳಂಬವಾಗುತ್ತಿವೆ ಎಂದು ಸ್ಥಳೀಯರು ದೂರು ನೀಡಿದ್ದರು. ಈ ಬಗ್ಗೆ ಪರಿಶೀಲಿಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಅದರಂತೆ ತನಿಖೆಗೆ ಆದೇಶಿಸಿದ್ದ ಚಾರುಲತಾ ಮೂರೇ ದಿನದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

‘ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದ ಮಾತ್ರಕ್ಕೆ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಅದಕ್ಕೆ ಪೂರಕ ದಾಖಲೆ ಬೇಕು. ಹನೂರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣೆ ಬಗ್ಗೆ ಸಾಕಷ್ಟು ದೂರು ಬಂದಿದ್ದವು. ಅದರ ಆಧಾರದಲ್ಲಿ ಜಿಲ್ಲಾಧಿಕಾರಿ ತನಿಖೆಗೆ ತಂಡ ರಚಿಸಿದ್ದರು. ಕೆಲಸ ಸಮರ್ಪಕವಾಗಿ ಆಗದೇ ಇರುವುದು ತನಿಖೆಯಲ್ಲಿ ಗೊತ್ತಾಗಿತ್ತು. ಹಾಗಾಗಿ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳ, ಅದರಲ್ಲೂ ವಿಶೇಷವಾಗಿ ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಕಾರ್ಯನಿರ್ವಹಣೆ ಬಗ್ಗೆ ಹೆಚ್ಚು ದೂರು ಬಂದಿವೆ ಎಂಬುದು ಗೊತ್ತಾಗಿದೆ.

ಈಗಾಗಲೇ, ಚಾಮರಾಜನಗರ ನಗರಸಭೆಗೆ ಸಂಬಂಧಿಸಿದಂತೆ ಆಂತರಿಕ ತನಿಖೆ ಪ್ರಗತಿಯಲ್ಲಿದೆ. ಕೊಳ್ಳೇಗಾಲ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಸಂಬಂಧ ಅಧಿಕಾರಿಗಳ ತಂಡವೊಂದು ತನಿಖೆ ನಡೆಸುತ್ತಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತ ಪಡಿಸಿವೆ.

ಆರೋಪಗಳು ನಿಜವೆಂದು ಕಂಡು ಬಂದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿವೆ.

‘ಕಟ್ಟು‌ನಿಟ್ಟಿನ ಸೂಚನೆಯಿದೆ’

‘ಸರ್ಕಾರಿ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ಜನರಿಗೆ ತಲುಪಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯಿದೆ. ಈಚೆಗೆ ಮುಖ್ಯಮಂತ್ರಿ ಇದನ್ನೇ ತಿಳಿಸಿದ್ದಾರೆ. ಜಿಲ್ಲಾ ಮಟ್ಟದಿಂದ ಹೊರಡಿಸುವ ಆದೇಶವು ತಾಲ್ಲೂಕು ಹಂತದಿಂದ ಸಮರ್ಪಕವಾಗಿ ಕೆಳಹಂತದ ಅಧಿಕಾರಿಗಳಿಗೆ ತಲುಪುತ್ತಿಲ್ಲ. ಹಾಗಾಗಿ ತಳಮಟ್ಟದಲ್ಲಿ ಜನರಿಗೆ ಕೆಲವು ಸೌಲಭ್ಯ ತಲುಪುವುದು ತಡವಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲವನ್ನೂ ಸರಳೀಕರಣಗೊಳಿಸುವ ಕೆಲಸ ನಡೆಯುತ್ತಿದೆ. ಸಾರ್ವಜನಿಕರ ಕೆಲಸಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಅಧಿಕಾರಿಗಳಿಗೆ, ನೌಕರರಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

--

ಜನರ ದೂರನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಹಲವು ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡುತ್ತಿದ್ದೇನೆ. ಅಧಿಕಾರಿಗಳಿಂದ ಕರ್ತವ್ಯ ಲೋಪ ಆಗಿದ್ದರೆ ಕ್ರಮ ಖಚಿತ
ಚಾರುಲತಾ ಸೋಮಲ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT