ಸೋಮವಾರ, ಫೆಬ್ರವರಿ 17, 2020
18 °C
ಕಡತಗಳ ಪರಿಶೀಲಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತರಾಟೆ

ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ದಿಢೀರ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕು ಕಚೇರಿ ನೂತನ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಬುಧವಾರ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕು ಕಚೇರಿಯ ಎಲ್ಲ ಕೊಠಡಿಗಳಿಗೆ ಭೇಟಿ ನೀಡಿದ ರವಿ ಅವರು ಬಾಕಿ ಉಳಿದಿರುವ ಕಡತಗಳನ್ನು ಪರಿಶೀಲಿಸಿದರು. ಬಳಿಕ ಕಚೇರಿ ಅಧಿಕಾರಿಗಳ ಕಾರ್ಯ ವೈಖರಿ ಕಂಡು ಗರಂ ಆದರು. ಕಡತಗಳ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಳಿಗ್ಗೆ 11ಗಂಟೆಗೆ ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಕಚೇರಿ ಮುಂಭಾಗ ನೆರೆದಿದ್ದ ಸಾರ್ವಜನಿಕರತ್ತ ಹೋದರು. ಇದೇ ಸಂದರ್ಭದಲ್ಲಿ ‘ನಾವು ತಹಶೀಲ್ದಾರ್‌ ಅವರಿಗಾಗಿ ಕಾಯುತ್ತಿದ್ದೇವೆ’ ಎಂದು ಹೇಳುತ್ತಾ ಸಾರ್ವಜನಿಕರು ಸಮಸ್ಯೆ ಬಿಚ್ಚಿಟ್ಟರು.

ತಡವಾಗಿ ಬಂದ ತಹಶೀಲ್ದಾರ್: ಪ್ರತಿ ಕೊಠಡಿಗಳಿಗೂ ತೆರಳಿದ ಜಿಲ್ಲಾಧಿಕಾರಿಗಳು ಹಾಜರಾತಿ ಗಮನಿಸಿ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದರು. ‘ಏಕೆ ಇಷ್ಟೊಂದು ಸಾರ್ವಜನಿಕರು ಕಚೇರಿಯತ್ತ ಸುತ್ತಾಡುತ್ತಿದ್ದಾರೆ’ ಎಂದು ತಡವಾಗಿ ಆಗಮಿಸಿದ ತಹಶೀಲ್ದಾರ್‌ ಮಹೇಶ್‌ ಅವರನ್ನು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು.

ವರ್ಷವಾದರೂ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಕಡತಗಳ ಪರಿಶೀಲನೆ ನಡೆಸಿದ ಅವರು,  ‘ಯಾವ ಅಧಿಕಾರಿಯ ಬಳಿ ಕಡತಗಳು ಉಳಿದಿವೆ ಎನ್ನುವುದರ ಬಗ್ಗೆ ಸಂಜೆಯೊಳಗೆ ಸಂಪೂರ್ಣ ಮಾಹಿತಿ ನೀಡಬೇಕು’ ಎಂದು ತಾಕೀತು ಮಾಡಿದರು.

‘ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ವಿಧವಾ ವೇತನ ಇನ್ನಿತರ ಸೌಲಭ್ಯಗಳ ಅಗತ್ಯ ದಾಖಲೆಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದರೆ ಇಲ್ಲಿನ ಕೆಲ ಸಿಬ್ಬಂದಿ, ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಆರು ತಿಂಗಳಿಂದ ಸತಾಯಿಸುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರು ನೀಡಿದರು.

‘ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಸ್ವಚ್ಛತೆ ಕಾಪಾಡಬೇಕು. ಸಿಬ್ಬಂದಿ ಸಮರ್ಪಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಈ ಬಗ್ಗೆ ಸಾರ್ವಜನಿಕರಿಂದ ನನಗೆ ದೂರು ನೀಡಿದರೆ ನಿರ್ದಾಕ್ಷಿಣ್ಯಗವಾಗಿ ಕ್ರಮಕೈಗೊಳ್ಳುತ್ತೇನೆ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು