ಶನಿವಾರ, ಸೆಪ್ಟೆಂಬರ್ 26, 2020
27 °C
ಬಡ ಮಕ್ಕಳಿಗೆ ಮೊಬೈಲ್‌‌ ಮೂಲಕ ಪಾಠ: ದೀನಬಂಧು ಟ್ರಸ್ಟ್‌ ಮನವಿ

ಚಾಮರಾಜನಗರ | ಹಳೆಯ ಸ್ಮಾರ್ಟ್‌ಫೋನ್‌ ದಾನ ನೀಡಲು ದೀನಬಂಧು ಟ್ರಸ್ಟ್‌ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಹಾವಳಿಯಿಂದಾಗಿ ತರಗತಿಗಳು ಇನ್ನೂ ಆರಂಭವಾಗದೇ ಇರುವುದರಿಂದ, ಶಾಲೆಗಳು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಆರಂಭಿಸಿವೆ. 

ವಾಟ್ಸ್‌ಆ್ಯಪ್‌, ಝೂಮ್‌, ಗೂಗಲ್‌ ಮೀಟ್‌ ಸೇರಿದಂತೆ ಆಧುನಿಕ ತಂತ್ರಾಂಶಗಳನ್ನು ಬಳಸಿ ಮಕ್ಕಳಿಗೆ ಪಾಠ ಮಾಡುತ್ತಿವೆ. ಆದರೆ, ಸ್ಮಾರ್ಟ್‌ಫೋನ್‌, ಕಂ‍ಪ್ಯೂಟರ್‌, ಇಂಟರ್‌ನೆಟ್‌ ಸಂಪರ್ಕ ಹೊಂದಿಲ್ಲದ ಮಕ್ಕಳಿಗೆ ಹೊಸ ವ್ಯವಸ್ಥೆಯಲ್ಲಿ ಪಾಠ ಕೇಳುವುದಕ್ಕೆ ತೊಂದರೆಯಾಗುತ್ತಿದೆ. 

ನಗರದ ದೀನಬಂಧು ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದರ ಪರಿಹಾರಕ್ಕಾಗಿ ದೀನಬಂಧು ಟ್ರಸ್ಟ್‌ ದಾನಿಗಳ ಮೊರೆ ಹೋಗಿದೆ. ಬಳಸದೇ ಇರುವ ಸ್ಮಾರ್ಟ್‌ಫೋನ್‌ಗಳಿದ್ದರೆ‌, ಅದನ್ನು ಸಂಸ್ಥೆಗೆ ನೀಡುವಂತೆ ಟ್ರಸ್ಟ್‌ ಮನವಿ ಮಾಡಿದೆ.

ದುರ್ಬಲ ವರ್ಗಗಳು ಹಾಗೂ ಬಡವರ ಮಕ್ಕಳೇ ಹೆಚ್ಚಾಗಿರುವ ಈ ಶಾಲೆಯಲ್ಲಿ ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗೆ 440 ಮಕ್ಕಳು ಓದುತ್ತಿದ್ದಾರೆ. 

ಶಾಲೆಯು ಎರಡು ತಿಂಗಳಿಂದೀಚೆಗೆ ವಾಟ್ಸ್‌ಆ್ಯಪ್‌ ಗ್ರೂಪುಗಳ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿದೆ. ಆದರೆ, ಹಲವು ಮಕ್ಕಳ ಬಳಿ ಸ್ಮಾರ್ಟ್‌ಫೋನ್‌ಗಳಿಲ್ಲ. ಶಾಲೆಯ ಕೆಲವು ಬೋಧಕರಲ್ಲೂ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳಿಲ್ಲ. ಇದರಿಂದಾಗಿ ಮಾಡುತ್ತಿರುವ ಪಾಠವು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತಲುಪುತ್ತಿಲ್ಲ. 

‘ಜುಲೈ ತಿಂಗಳಿಂದ ನಾವು ವಾಟ್ಸ್‌ಆ್ಯಪ್ ಮೂಲಕ ಪಾಠ ಮಾಡುತ್ತಿದ್ದೇವೆ. ಆಗಸ್ಟ್‌ನಿಂದ ವರ್ಕ್‌ಶೀಟ್‌ ಕೂಡ ನೀಡಲು ಆರಂಭಿಸಿದ್ದೇವೆ. ವಾಟ್ಸ್‌ ಆ್ಯಪ್‌ ಗ್ರೂಪುಗಳ ಮೂಲಕ ಪಠ್ಯಕ್ಕೆ ಸಂಬಂಧಿಸಿದ ವಿಡಿಯೊ, ಫೋಟೊ, ಮನೆ ಕೆಲಸಗಳನ್ನು  ಕಳುಹಿಸುತ್ತೇವೆ. ವಿದ್ಯಾರ್ಥಿಗಳು ಅದನ್ನು ನೋಡಿ ಅಭ್ಯಾಸ ಮಾಡುತ್ತಾರೆ. ಮನೆಕೆಲಸಗಳನ್ನು ಮಾಡಿದ ನಂತರ ಅದರ ಚಿತ್ರ ತೆಗೆದು ಅದೇ ಗ್ರೂಪಿನಲ್ಲಿ ಕಳುಹಿಸುತ್ತಾರೆ’ ಎಂದು ಟ್ರಸ್ಟ್‌ನ ಆಡಳಿತಾಧಿಕಾರಿ ಪ್ರಜ್ಞಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.  

‘ಸ್ಮಾರ್ಟ್‌ಫೋನ್‌ ಇಲ್ಲದ ವಿದ್ಯಾರ್ಥಿಗಳು, ಅವರ ನೆರೆಹೊರೆಯಲ್ಲಿರುವ ವಿದ್ಯಾರ್ಥಿಗಳ ಸ್ಮಾರ್ಟ್‌ಫೋನ್‌ಗಳ ಮೂಲಕ ವಿಷಯ ತಿಳಿದುಕೊಳ್ಳುತ್ತಿದ್ದಾರೆ. ಆದರೆ, ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಕೆಲವು ಶಿಕ್ಷಕರಲ್ಲಿ ಹೊಸ ಸ್ಮಾರ್ಟ್‌ಫೋನ್ ‌ಗಳಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಪಾಠಗಳಿಗಾಗಿ ಹತ್ತಿರದ ವಿದ್ಯಾರ್ಥಿಯ ಮನೆಗೆ ಹೋಗುವುದಕ್ಕೂ ಆಗುತ್ತಿಲ್ಲ’ ಎಂದು ಅವರು ಹೇಳಿದರು. 

‘ಜನರ ಬಳಿ ಬಳಕೆ ಮಾಡದೇ ಇದ್ದ ಸ್ಮಾರ್ಟ್‌ಫೋನ್‌ಗಳನ್ನು ಕೊಡುಗೆಯಾಗಿ ನೀಡಿದರೆ, ನಮ್ಮ ಮಕ್ಕಳಿಗೆ ಪಾಠ ಕೇಳಲು ಅನುಕೂಲವಾಗಲಿದೆ. ಆ ಕಾರಣದಿಂದ ಮನವಿ ಮಾಡಿದ್ದೇವೆ’ ಎಂದು ಪ್ರಜ್ಞಾ ಅವರು ತಿಳಿಸಿದರು. 

ಫೋನ್‌ ನೀಡಲು ಇಚ್ಛಿಸುವವರು ಇಮೇಲ್‌: deenabandhutrust@gmail.com ಮೂಲಕ ಸಂಪರ್ಕಿಸಬಹುದು.

ಮಕ್ಕಳಿಗೆ ಅನುಕೂಲ

‘ನಮ್ಮಲ್ಲಿರುವ ಹಲವು ಬಡ ಮಕ್ಕಳ ಕುಟುಂಬಗಳಿಗೆ ಸ್ಮಾರ್ಟ್‌ಫೋನ್‌ ಖರೀದಿಸುವಷ್ಟು ಶಕ್ತಿ ಇಲ್ಲ. ದಾನಿಗಳು ಸ್ಮಾರ್ಟ್‌ಫೋನ್‌ಗಳನ್ನು ಕೊಟ್ಟರೆ ಅದನ್ನು ಮಕ್ಕಳಿಗೆ ನೀಡಿ, ನಾವೇ ರೀಚಾರ್ಜ್‌ ಮಾಡಲು ಯೋಚಿಸುತ್ತಿದ್ದೇವೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಕೋವಿಡ್‌ ಹಾವಳಿಯ ನಡುವೆಯೂ ನಮ್ಮ ಬೋಧಕರು, ಇರುವ ಸಂಪನ್ಮೂಲಗಳನ್ನು ಬಳಸಿ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ತರಗತಿಗಳು ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಪಾಠ ನಿಲ್ಲಬಾರದು, ಮಕ್ಕಳು ಕಲಿಯುತ್ತಿರಬೇಕು ಎಂಬುದು ನಮ್ಮ ಉದ್ದೇಶ’ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು