ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ಕಾಮಗಾರಿಗೆ ಜನಪ್ರತಿನಿಧಿಗಳ, ರೈತರ ಆಗ್ರಹ

ಹುತ್ತೂರು ಕೆರೆ ಏತ ಯೋಜನೆ: ಪೈಪ್‌ಲೈನ್‌ ಮೂಲಕವೇ ನೀರು ಹರಿಯಬೇಕು
Last Updated 24 ಜೂನ್ 2019, 14:26 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಹುತ್ತೂರು ಕೆರೆಯಿಂದ ಗುಂಡ್ಲುಪೇಟೆಯ 9 ಮತ್ತು ಚಾಮರಾಜನಗರ ತಾಲ್ಲೂಕಿನ ಎರಡು ಕೆರೆಗಳಿಗೆ ನೀರು ಹರಿಸುವ ಏತ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ತಾಲ್ಲೂಕಿನ ಅರಕಲವಾಡಿ ಭಾಗದ ಜನಪ್ರತಿನಿಧಿಗಳು ಹಾಗೂ ರೈತರು ಆಗ್ರಹಿಸಿದ್ದಾರೆ.

‘ಯೋಜನೆಯ ನೀಲನಕ್ಷೆಯಲ್ಲಿರುವಂತೆಪೈಪ್‌ಲೈನ್‌ ನಿರ್ಮಿಸಿ, ಎಲ್ಲ ಕೆರೆಗಳಿಗೂ ಒಂದೇ ಸಲ ನೀರು ಹರಿಸಬೇಕು’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡ ಹಾಗೂ ರೈತ ಅರಕಲವಾಡಿ ಗುರುಸ್ವಾಮಿ ಮಾತನಾಡಿ, ‘ಕುಡಿಯುವ ನೀರಿನ ಉದ್ದೇಶದಿಂದ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ನಾಲ್ಕನೇ ಹಂತದಲ್ಲಿ ಹುತ್ತೂರು ಏತ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ₹ 53 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಸದ್ಯ ₹ 26 ಕೋಟಿಯ ಕಾಮಗಾರಿ ಮುಗಿದಿದೆ. ವಡ್ಡಗೆರೆ ಕೆರೆಯವರೆಗೆ ಪೈಪ್‌ಲೈನ್‌ ನಿರ್ಮಾಣ ಆಗಿದೆ. 11 ಕೆರೆಗಳಿಗೆ ಒಟ್ಟು 30 ಕಿ.ಮೀ ಪೈಪ್‌ಲೈನ್‌ ನಿರ್ಮಾಣವಾಗಬೇಕಿದೆ. ಈ ಪೈಕಿ ಇನ್ನೂ 27 ಕಿ.ಮೀ ಉದ್ದದ ಪೈಪ್‌ಲೈನ್‌ ಕೆಲಸ ಬಾಕಿ ಇದೆ’ ಎಂದು ಹೇಳಿದರು.

‘ಹುತ್ತೂರು ಕೆರೆಯಿಂದ ಪಂಪ್‌ ಮೂಲಕ ನೀರೆತ್ತಲಾಗುತ್ತದೆ. ಕುರುಬರ ಹುಂಡಿ ಬಳಿ ತೊಟ್ಟಿ ನಿರ್ಮಿಸಲಾಗಿದೆ. ಅ‌ಲ್ಲಿಂದ ಒಂದು ಪೈಪ್‌ ವಡ್ಡಗೆರೆ ಕೆರೆಯತ್ತ ಹೋಗಿದೆ. ಇನ್ನೊಂದು ಚಾಮರಾಜನಗರ ತಾಲ್ಲೂಕಿನ ಕೆರೆಗಳತ್ತ ಬರಬೇಕು. ಎಲ್ಲ ಕೆರೆಗಳಿಗೆ ಸಂಪರ್ಕಿಸುವ ಕಾಮಗಾರಿ ಪೂರ್ಣಗೊಳ್ಳದೆ, ಒಂದು ಕೆರೆಗೆ ಮಾತ್ರ ಹರಿಸಿದರೆ, ತೊಟ್ಟಿಯಿಂದ ನೀರು ಹೊರ ಚೆಲ್ಲಲಿದೆ’ ಎಂದರು.

‘ಮೂರು ಹಂತಗಳ ಯೋಜನೆಗಳಲ್ಲಿ ಜಿಲ್ಲೆಯ 20 ಕೆರೆಗಳನ್ನು ತುಂಬಿಸಲು ಆಲಂಬೂರು ಕೆರೆಯಿಂದ 90 ದಿನಗಳ ಕಾಲ ನೀರು ಹರಿಸಲು ಅನುಮತಿ ನೀಡಲಾಗಿತ್ತು. ನಾಲ್ಕನೇ ಹಂತದಲ್ಲಿ ಯೋಜನೆಗೆ ಸೇರ್ಪಡೆಗೊಂಡ 11 ಕೆರೆಗಳನ್ನು ತುಂಬಿಸಲು ಹೆಚ್ಚುವರಿಯಾಗಿ 30 ದಿನಗಳನ್ನು ನೀಡಲಾಗಿದೆ. ಕಾಲುವೆ ಮೂಲಕ ಹರಿಸಿದರೆ ಎಲ್ಲ ಕೆರೆಗಳಿಗೆ ಒಂದು ತಿಂಗಳಿನಲ್ಲಿ ನೀರು ತುಂಬಿಸಲು ಸಾಧ್ಯವಿಲ್ಲ’ ಎಂದರು.

‘ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲ ಕಾಮಗಾರಿಗಳೂ ಮುಗಿದು ಒಟ್ಟಿಗೆ ನೀರು ಹರಿಸಬೇಕು. ಒಂದು ಕಡೆಗೆ ಮೊದಲೇ ನೀರು ಹರಿದರೆ, ಮತ್ತೊಂದು ಕಡೆಗೆ ಹರಿಯುವ ಸಂದರ್ಭದಲ್ಲಿ ಎಲ್ಲರ ಸಹಕಾರ ಸಿಗುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ನೀರನ್ನು ಎಲ್ಲರೂ ಹಂಚಿಕೊಳ್ಳಬೇಕು’ ಎಂದರು.

ಅರಕಲವಾಡಿ ಸೋಮನಾಯಕ ಮಾತನಾಡಿ, ‘ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಯಾವ ಭಾಗದ ರೈತರಿಗೂ ಅನ್ಯಾಯವಾಗಬಾರದು. ಕಾಮಗಾರಿ ಪೂರ್ಣಗೊಂಡ ನಂತರವೇ ನೀರು ಹರಿಸಬೇಕು. ಈ ನಿಟ್ಟಿನಲ್ಲಿ ತ್ವರಿತವಾಗಿ ಕಾಮಗಾರಿ ಮುಗಿಸಬೇಕು’ ಎಂದು ಹೇಳಿದರು.

ಅಮಚವಾಡಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಮಾತನಾಡಿ, ‘ನೀರಿನ ವಿಚಾರದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಬಾರದು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಾವು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡುತ್ತೇವೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಉದ್ಯಮಿ ರಾಜೇಂದ್ರ ಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT