ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ರಾಜ್ಯದಾದ್ಯಂತ ಮತ್ತೊಂದು ಅಭಿಯಾನ

ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಚಾಲನೆ, ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವ
Last Updated 26 ಆಗಸ್ಟ್ 2021, 12:54 IST
ಅಕ್ಷರ ಗಾತ್ರ

ಮಹದೇಶ್ವರಬೆಟ್ಟ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ಮತ್ತೊಂದು ಸುತ್ತಿನ ಹೋರಾಟ ಆರಂಭಿಸಿದ್ದಾರೆ.‌

ಗೌಡ ಲಿಂಗಾಯತ, ಮಲೆಗೌಡ ಲಿಂಗಾಯತ, ದೀಕ್ಷಾ ಲಿಂಗಾಯತರನ್ನು ಒಳಗೊಂಡ ಪಂಚಮಸಾಲಿ ಸಮುದಾಯದವರು ‘ಪ್ರತಿಜ್ಞಾ ಪಂಚಾಯತ್‌’ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿರುವ ಅಭಿಯಾನಕ್ಕೆ ಗುರುವಾರ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಚಾಲನೆ ಸಿಕ್ಕಿದೆ. ಅಕ್ಟೋಬರ್‌ 1ರವರೆಗೆ ರಾಜ್ಯದಾದ್ಯಂತ ಈ ಅಭಿಯಾನ ನಡೆಯಲಿದೆ.

ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಅಭಿಯಾನ ಆರಂಭವಾಗಿದ್ದು, ಮಹದೇಶ್ವರ ಬೆಟ್ಟದಲ್ಲಿ ಸ್ವತಃ ಅವರೇ ಚಾಲನೆ ನೀಡಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಕಾಂಗ್ರೆಸ್‌ ಮುಖಂಡ ಹಾಗೂ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌, ಹರಿಹರದ ಜೆಡಿಎಸ್‌ ಮುಖಂಡ ಶಿವಶಂಕರ್ ಸೇರಿದಂತೆ ಪಂಚಮಸಾಲಿ ಸಮುದಾಯದ ಮುಖಂಡರು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.‌

ಅಭಿಯಾನದ ಅಡಿಯಲ್ಲಿ ಮೈಸೂರು, ಕೊಡಗು, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ಜಾಗೃತಿ ಸಭೆಗಳು ನಡೆಯಲಿದ್ದು, ಅಕ್ಟೋಬರ್ 1 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನಾ ಸಮಾವೇಶದ ಮೂಲಕ ತೆರೆ ಕಾಣಲಿದೆ.

‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಆರು ತಿಂಗಳ ಕಾಲಾವಕಾಶ ಕೇಳಿದ್ದರು. ಸೆಪ್ಟೆಂಬರ್ 15ಕ್ಕೆ ಅದು ಮುಕ್ತಾಯಗೊಳ್ಳಲಿದೆ. ಹಾಗಾಗಿ, ಸರ್ಕಾರಕ್ಕೆ ಎಚ್ಚರಿಸಲು ರಾಜ್ಯದಾದ್ಯಂತ ಅಭಿಯಾನ ನಡೆಸಲಾಗುತ್ತಿದೆ’ ಎಂದು ಜಯ ಮೃತ್ಯಂಜಯ ಸ್ವಾಮೀಜಿ ಅವರು ತಿಳಿಸಿದರು.

‘ಪಂಚಮಸಾಲಿ, ಗೌಡ, ಮಲೆಗೌಡ ಹಾಗು ದೀಕ್ಷಾ ಲಿಂಗಾಯತ ಒಳಗೊಂಡ ಪಂಚಮಸಾಲಿ ಸಮಾಜದಲ್ಲಿ 80 ಲಕ್ಷಕ್ಕೂ ಹೆಚ್ಚು ಜನ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇವರಿಗೆ ಮೀಸಲಾತಿ ಕಲ್ಪಿಸಿ ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮೇಲಕ್ಕೆತ್ತುವುದು ನಮ್ಮ ಗುರಿ. ಈಗಾಗಲೇ ಕೂಡಲ ಸಂಗಮದಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಿ ಬೆಂಗಳೂರಲ್ಲಿ ಬೃಹತ್ ಹೋರಾಟ ಮಾಡಿದ್ದೇವೆ. ಇದಕ್ಕೆ ಮತ್ತೊಮ್ಮೆ ಅವಕಾಶವಾಗದಂತೆ ಸರ್ಕಾರ‌ ನಡೆದುಕೊಳ್ಳುವ ವಿಶ್ವಾಸ ಇದೆ’ ಎಂದು ಅವರು ಹೇಳಿದರು.

‘ಬಿಎಸ್‌ವೈ ದಿಕ್ಕು ತಪ್ಪಿಸಿದ್ದು ವಿಜಯೇಂದ್ರ’

‘ಯಡಿಯೂರಪ್ಪ ಅವರಿಗೆ ಮೀಸಲಾತಿ ಕೊಡುವ ಮನಸ್ಸಿತ್ತು. ಆದರೆ, ಅವರ ಮಗ ಬಿ.ವೈ.ವಿಜಯೇಂದ್ರ ಅವರು ನಮ್ಮ ಹೋರಾಟವನ್ನು ತಪ್ಪಾಗಿ ತಿಳಿದುಕೊಂಡು ಯಡಿಯೂರಪ್ಪನವರಿಗೆ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನ ಮಾಡಿದರು’ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಅವರು ದೂರಿದರು.

‘ಚುನಾವಣೆ ಹತ್ತಿರ ಬಂದಾಗ ಮೀಸಲಾತಿ ಕೊಟ್ಟರೆ ಆಯಿತು ಎಂಬ ಮನಃಸ್ಥಿತಿ ಹೊಂದಿದ್ದ ವಿಜಯೇಂದ್ರ, ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯ ಮೂಡಿಸುವ ಯತ್ನ ಮಾಡಿದರು. ಈಗ ಅದು ಮುಗಿದ ಅಧ್ಯಾಯ. ಬಿಜೆಪಿ ಸರ್ಕಾರ ಬರಲು ಲಿಂಗಾಯತರೇ ಕಾರಣ. ಈ ಸರ್ಕಾರದ ಮೇಲೆ ಲಿಂಗಾಯತರ ಋಣಭಾರ‌ ಬಹಳ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಸಂಪೂರ್ಣ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT