ಶುಕ್ರವಾರ, ಡಿಸೆಂಬರ್ 2, 2022
21 °C
ಆಯುಧಪೂಜೆ ವೇಳೆ ಧಾರಣೆ ಗಣನೀಯ ಹೆಚ್ಚಳ ಸಂಭವ

ಚಾಮರಾಜನಗರ | ನವರಾತ್ರಿ; ಹೂವಿಗೆ ಹೆಚ್ಚುತ್ತಿದೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನವರಾತ್ರಿ ಆರಂಭವಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ವಹಿವಾಟು ಬಿರುಸುಗೊಂಡಿದ್ದು, ಹೂವು, ತರಕಾರಿ ಹಣ್ಣುಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. 

ವರ ಮಹಾಲಕ್ಷ್ಮಿ ಹಬ್ಬದ ನಂತರ ಕುಸಿದಿದ್ದ ಹೂವುಗಳ ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ. ತರಕಾರಿಗಳ ಪೈಕಿ ಕೆಲವುದರ ಬೆಲೆ ಹೆಚ್ಚಾಗಿದೆ. ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ, ಧಾರಣೆ ಸ್ಥಿರವಾಗಿದೆ. 

ಹೂವುಗಳಿಗೆ ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ಆಯುಧ ಪೂಜೆ ವೇಳೆ ಪುಷ್ಪಗಳ ಬೆಲೆ ಜನಸಾಮಾನ್ಯರ ಕೈಗೆ ಎಟುಕದಷ್ಟು ಎತ್ತರಕ್ಕೆ ಹೋಗುತ್ತದೆ. ಕಳೆದ ವಾರದವರೆಗೂ ಹೂವುಗಳಿಗೆ ಬೇಡಿಕೆ ಕುಸಿದಿತ್ತು. ನವರಾತ್ರಿ ಶುರುವಾಗುತ್ತಿದ್ದಂತೆಯೇ ಧಾರ್ಮಿಕ ಕಾರ್ಯಕ್ರಮಗಳಿಗೆ ಹೂಗಳನ್ನು ಖರೀದಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆಯಲ್ಲಿ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಆಯುಧಪೂಜೆಯ ವೇಳೆಗೆ ಧಾರಣೆ ಇನ್ನಷ್ಟು ಹೆಚ್ಚಲಿದೆ ಎಂದು ಹೂವಿನ ವ್ಯಾಪಾರಿಗಳ ಮಾತು. 

ನಗರಕ್ಕೆ ಸಮೀಪದ ಚೆನ್ನಿಪುರಮೋಳೆಯ ಬಿಡಿಹೂವಿನ ಮಾರುಕಟ್ಟೆಯಲ್ಲಿ ಕೆಜಿ ಕನಕಾಂಬರದ ಬೆಲೆ ₹600ಕ್ಕೆ ಏರಿದೆ. ಕಳೆದವಾರ ₹400 ಇತ್ತು. ಕೆಜಿಗೆ ₹80 ಇದ್ದ ಕಾಕಡದ ಬೆಲೆ ದುಪ್ಪಟ್ಟಾಗಿ ₹160 ಆಗಿದೆ. ₹40ರಿಂದ ₹50ರವರೆಗೆ ಇದ್ದ ಸೇವಂತಿಗೆ ಬೆಲೆ ₹120 ಇದೆ. ಬಟನ್‌ ಗುಲಾಬಿ ಬೆಲೆ ಮೂರು ಪಟ್ಟು ಹೆಚ್ಚಳವಾಗಿ ₹160ಕ್ಕೆ ತಲುಪಿದೆ. 

‘ಕಳೆದ ವಾರಕ್ಕೆ ಹೋಲಿಸಿದರೆ ಹೂವಿನ ಬೆಲೆ ಹೆಚ್ಚಾಗಿದೆ. ಆದರೆ, ಹಬ್ಬದ ಬೆಲೆ ಇದಲ್ಲ. ಬೇಡಿಕೆ ಈಗ ಹೆಚ್ಚುತ್ತಿದೆ. ಗುರುವಾರದ ನಂತರ ಧಾರಣೆ ಗಣನೀಯವಾಗಿ ಹೆಚ್ಚಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಹೇಳಿದರು. 

ಬೀನ್ಸ್‌ ಶತಕ: ತರಕಾರಿಗಳ ಪೈಕಿ ಬೀನ್ಸ್‌, ಗೆಡ್ಡೆಕೋಸು, ಮೂಲಂಗಿ ಬೆಲೆ ಹೆಚ್ಚಾಗಿದೆ. ಬೀನ್‌ ಧಾರಣೆ ಶತಕ ತಲುಪಿದೆ. 

ನಗರದ ಹಾಪ್‌ಕಾಮ್ಸ್‌ನಲ್ಲಿ ಕಳೆದ ವಾರ ಕೆಜಿ ಬೀನ್ಸ್‌ಗೆ ₹80 ಇತ್ತು. ಈ ವಾರ ಅದು ₹100ಕ್ಕೆ ತಲುಪಿದೆ. 

ಗೆಡ್ಡೆಕೋಸಿಗೂ ಬೇಡಿಕೆ ಹೆಚ್ಚಾಗಿದ್ದು, ಬೆಲೆ ₹20 ಹೆಚ್ಚಾಗಿದೆ. ಕಳೆದ ವಾರದವರೆಗೂ ಕೆಜಿಗೆ ₹60 ಇತ್ತು. ಈಗ ₹80 ಆಗಿದೆ. ₹30ಕ್ಕೆ ಸಿಗುತ್ತಿದ್ದ ಮೂಲಂಗಿಯ ಬೆಲೆ ₹40 ಆಗಿದೆ. 

ಟೊಮೆಟೊದ ಬೆಲೆಯಲ್ಲಿ ₹10 ಇಳಿಕೆಯಾಗಿದೆ. ಕಳೆದ ವಾರ ಕೆಜಿಗೆ ₹40 ಇತ್ತು. ಉಳಿದ ತರಕಾರಿಗಳ ಧಾರಣೆಯಲ್ಲಿ ಬದವಲಾವಣೆಯಾಗಿಲ್ಲ. 

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಕೆಜಿಗೆ ₹160ರಿಂದ ₹190ರವರೆಗೂ ಇದೆ. ಮಟನ್‌ ಬೆಲೆ ಸ್ಥಿರವಾಗಿದೆ. 

ಏಲಕ್ಕಿ ಬಾಳೆ ಕೊಂಚ ಅಗ್ಗ

ಹಣ್ಣುಗಳ ಪೈಕಿ ಏಲಕ್ಕಿ ಬಾಳೆಹಣ್ಣಿನ ಬೆಲೆ ₹10 ಕಡಿಮೆಯಾಗಿದೆ. ಹೋದ ವಾರದವರೆಗೂ ಏಲಕ್ಕಿ ಹಣ್ಣಿಗೆ ಕೆಜಿಗೆ ₹80 ಕೊಡಬೇಕಿತ್ತು. ಅದೀಗ ₹70ಕ್ಕೆ ಇಳಿದಿದೆ. ಏಲಕ್ಕಿ ಬಾಳೆಕಾಯಿಯ ಬೆಲೆಯಲ್ಲಿ ಇಳಿಕೆಯಾಗಿರುವುದು ಇದಕ್ಕೆ ಕಾರಣ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿದರು. 

ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಮೂಸಂಬಿ, ಕಿತ್ತಳೆ ಹಾಗೂ ಸೇಬು ಹೆಚ್ಚು ಆವಕವಾಗುತ್ತಿದ್ದು, ಗ್ರಾಹಕರಿಂದ ಬೇಡಿಕೆಯನ್ನೂ ಸೃಷ್ಟಿಸಿಕೊಂಡಿವೆ. ಅವುಗಳ ಬೆಲೆ ಸ್ಥಿರವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು