ಬುಧವಾರ, ಸೆಪ್ಟೆಂಬರ್ 18, 2019
28 °C
ಬಾಲ ಕೃಷ್ಣರ ತುಂಟಾಟ ನೋಡಲು ತಾಯಂದಿರ ಉತ್ಸಾಹ

ಶ್ರೀಕೃಷ್ಣ ಜನ್ಮಾಷ್ಟಮಿ: ನಂದಗೋಕುಲನ ವಸ್ತ್ರ, ಆಭರಣಗಳಿಗೆ ಹೆಚ್ಚಿದ ಬೇಡಿಕೆ

Published:
Updated:
Deccan Herald

ಚಾಮರಾಜನಗರ: ಚಿಕ್ಕ ಮಕ್ಕಳು ಆಡುವ ತುಂಟಾಟ ಎಲ್ಲರ ಮನಸ್ಸನ್ನು ಮುದಗೊಳಿಸುತ್ತದೆ. ಅದರಲ್ಲೂ, ಚಿಣ್ಣರು ತುಂಟ ಕೃಷ್ಣನ ವೇಷದಲ್ಲಿ ಕಂಗೊಳಿಸಿದರೆ ತಾಯಂದಿಯರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಶ್ರೀಕೃಷ್ಣ ಜನ್ಮಾಷ್ಟಮಿ (ಸೆಪ್ಟೆಂಬರ್‌ 2) ಸಂಭ್ರಮಾಚರಣೆಗೆ ಸಿದ್ಧತೆ ನಡೆದಿರುವಂತೆಯೇ, ಪೋಷಕರು ತಮ್ಮ ಕಂದಮ್ಮಗಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಲು ಸಜ್ಜುಗೊಂಡಿದ್ದಾರೆ. 

ಕೃಷ್ಣನ ಹುಟ್ಟುಹಬ್ಬದ ನೆಪದಲ್ಲಿ ಜಿಲ್ಲಾಡಳಿತ, ಖಾಸಗಿ ಶಾಲೆಗಳು, ಇತರ ಸಂಘ ಸಂಸ್ಥೆಗಳು ಶ್ರೀಕೃಷ್ಣ ವೇಷಧಾರಿ ಸ್ಪರ್ಧೆಯನ್ನು ಆಯೋಜಿಸಿವೆ. ವಾರದಿಂದಲೇ ಪೋಷಕರು, ಅದರಲ್ಲೂ ವಿಶೇಷವಾಗಿ ತಾಯಂದಿರುವ ಇದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. 

ಸ್ಪರ್ಧೆಯಲ್ಲಿ ಬಹುಮಾನ ಬರದಿದ್ದರೂ ಚಿಂತೆ ಇಲ್ಲ, ಮಗ/ಮಗಳನ್ನು ಬಾಲ ಕೃಷ್ಣನ ವೇಷದಲ್ಲಿ ಕಣ್ತುಂಬಿಕೊಳ್ಳಲೇಬೇಕು ಎಂಬ ಹಂಬಲದಿಂದ ವಸ್ತ್ರ, ಆಭರಣಗಳನ್ನು ಬಾಡಿಗೆಗೆ ನೀಡುವ ಅಂಗಡಿಗಳಿಗೆ ಎಡತಾಕುತ್ತಿದ್ದಾರೆ. ಇನ್ನೂ ಕೆಲವು ಪೋಷಕರು, ವಸ್ತ್ರ ಹಾಗೂ ಆಭರಣಗಳನ್ನು ಖರೀದಿಸುತ್ತಿದ್ದಾರೆ.

ಕೃಷ್ಣ ಜನ್ಮಾಷ್ಟಮಿಗೆ 15 ದಿನ ಮುಂಚಿತವಾಗಿ ಪೋಷಕರು ವಸ್ತ್ರಗಳನ್ನು ಸಿದ್ಧಪಡಿಸುವಂತೆ ಬೇಡಿಕೆ ಇಡುತ್ತಾರೆ ಎಂದು ಭ್ರಮರಾಂಬ ಎಕ್ಸ್‌ಟೆನ್ಶನ್‌ನ ಭೈರವೇಶ್ವರ ವಸ್ತ್ರಾಲಂಕಾರ ಮಳಿಗೆಯ ಗೌರಿ ರಾಮಕೃಷ್ಣ ಹೇಳಿದರು.

ವಾರದಿಂದೀಚೆಗೆ ಅವರ ಮಳಿಗೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಕೃಷ್ಣ ಹಾಗೂ ಇನ್ನಿತರ ಎಲ್ಲ ಬಗೆಯ ವಸ್ತ್ರಾಲಂಕಾರ ಆಭರಣಗಳು ಬಾಡಿಗೆಗೆ ದೊರೆಯುತ್ತವೆ.

ಎಲ್‌ಕೆಜಿ ಮಕ್ಕಳಿಂದ ಹಿಡಿದು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳವರೆಗೆ ಅಳತೆಗೆ ತಕ್ಕಂತಹ ವಸ್ತ್ರಗಳು ಸಿಗುತ್ತವೆ. ಚಿಕ್ಕ ಮಕ್ಕಳ ಉಡುಪುಗಳೇ ಹೆಚ್ಚು. ಕೃಷ್ಣ ವೇಷ ಸೇರಿದಂತೆ ಶಿವ, ಗೊರವರ ಕುಣಿತ, ಕಾಡು ಜನರ ಬಟ್ಟೆ, ಪ್ರಾಣಿಗಳ ಮುಖ, ಅಲಂಕಾರಿಕ ಆಭರಣಗಳೂ ಇವೆ. ಪೋಷಕರು ಮುಂಗಡವಾಗಿ ಬಂದು ತಮ್ಮ ಮಗುವಿನ ಅಳತೆಗೆ ತಕ್ಕಂತಹ ವಸ್ತ್ರವನ್ನು ಬಾಡಿಗೆಗೆ ಪಡೆಯುತ್ತಾರೆ ಎಂದು ಗೌರಿ ತಿಳಿಸಿದರು.

ಕೃಷ್ಣ ವೇಷಧಾರಿ ಸೆಟ್‌ಗೆ ದಿನಕ್ಕೆ ₹200 ಬಾಡಿಗೆ ನಿಗದಿ ಪಡಿಸಿದ್ದಾರೆ. ಉಳಿದ ಎಲ್ಲ ವಸ್ತ್ರಾಲಂಕಾರಕ್ಕೆ ₹100ರಿಂದ ₹400ರವರೆಗೆ ಬಾಡಿಗೆ ಇದೆ. 

‘ನನ್ನ ಮಗ ಚಿಕ್ಕವನಿದ್ದ ಸಂದರ್ಭದಲ್ಲಿ ಶಿವ ವೇಷಧಾರಿಯಾಗಿ ನೋಡಬೇಕು ಎನ್ನುವ ಆಸೆಯಾಯಿತು. ಆದರೆ, ಎಲ್ಲಿಯೂ ವಸ್ತ್ರಾಲಂಕಾರಿಕೆಗಳು ಸಿಗಲಿಲ್ಲ. ಬಳಿಕ ಮೈಸೂರಿನಿಂದ ಬಟ್ಟೆ ತರಿಸಿದೆ. ನನ್ನಂತೆ ಪೋಷಕರಿಗೂ ತೊಂದರೆ ಆಗಬಾರದು ಎಂದು ಆರು ವರ್ಷಗಳ ಹಿಂದೆ ವಸ್ತ್ರ ಹಾಗೂ ಆಭರಣಗಳನ್ನು ಬಾಡಿಗೆಗೆ ನೀಡಲು ಆರಂಭಿಸಿದೆ. ಅಂದಿನಿಂದ ಇಂದಿನವರೆಗೂ ಈ ಕಾರ್ಯ ಸಾಗುತ್ತಿದೆ’ ಎಂದು ಗೌರಿ ಹೇಳಿದರು.

‘ಕೃಷ್ಣ ಜನ್ಮಾಷ್ಟಮಿಯ ಹಿಂದಿನ ದಿನದಂದು ಆಭರಣಗಳಿಗೆ ಬೇಡಿಕೆ ಇರುತ್ತದೆ. ₹150ರಿಂದ ₹200 ರವರೆಗೂ ದಿನ ಬಾಡಿಗೆ ಪಡೆದು ಆಭರಣ ನೀಡುತ್ತೇವೆ. ಉಳಿದಂತೆ, ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ಮಾತ್ರ ಬಾಡಿಗೆ ಆಭರಣಗಳಿಗೆ ಬೇಡಿಕೆ ಇರುತ್ತದೆ’ ಎಂದು ಸಿದ್ದರಾಜು ಬ್ಯಾಂಗಲ್ಸ್‌ ಮಾಲೀಕ ಸಿದ್ದರಾಜು ಹೇಳಿದರು.

ಮಕ್ಕಳೇ ಹಠ ಮಾಡುತ್ತಾರೆ!

ಒಂದರಿಂದ ಎರಡು ವರ್ಷದ ಮಕ್ಕಳಿಗೆ ಪೋಷಕರೇ ಕೃಷ್ಣನ ವೇಷ ಹಾಕಿ ಸಂಭ್ರಮಿಸುತ್ತಾರೆ. ಆದರೆ, ಮಕ್ಕಳಿಗೆ ತಿಳಿವಳಿಕೆ ಬಂದ ನಂತರ ಅದರಲ್ಲೂ ಶಾಲೆಗೆ ಹೋಗಲು ಆರಂಭಿಸಿದ ಬಳಿಕ ತಮಗೆ ಕೃಷ್ಣನ ವೇಷ ಹಾಕಿಸುವಂತೆ ಅವರೇ ಪೋಷಕರಿಗೆ ದುಂಬಾಲು ಬೀಳುತ್ತಾರೆ. ಅತ್ತು ಕರೆದು ಅಪ್ಪ ಅಮ್ಮಂದಿರಿಂದ ಒಪ್ಪಿಗೆ ಪಡೆಯುತ್ತಾರೆ.

‘ಕಳೆದ ವರ್ಷ ವೇಷ ಹಾಕಿರುವುದರಿಂದ ಈ ವರ್ಷ ಬೇಡ ಎಂದೆ. ಆದರೆ, ನಾಲ್ಕು ವರ್ಷದ ಮಗಳು ಒಪ್ಪುತ್ತಿಲ್ಲ. ಹಠ ಮಾಡುತ್ತಿದ್ದಾಳೆ. ಹಾಗಾಗಿ, ವಸ್ತ್ರ ಹಾಗೂ ಆಭರಣಗಳನ್ನು ಬಾಡಿಗೆಗೆ ಕಾಯ್ದಿರಿಸಿದ್ದೇನೆ’ ಎಂದು ಸಿದ್ದಲಿಂಗಸ್ವಾಮಿ ತಿಳಿಸಿದರು.

ಭಾನುವಾರ ಶ್ರೀಕೃಷ್ಣ ವೇಷಧಾರಿ ಸ್ಪರ್ಧೆ

ಚಾಮರಾಜನಗರ ಜಿಲ್ಲಾಡಳಿತದಿಂದ ಸೆಪ್ಟೆಂಬರ್‌ 2ರಂದು ಶ್ರೀಕೃಷ್ಣ ಜಯಂತಿ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ 10 ವರ್ಷದೊಳಗಿನ ಶಾಲಾ ಮಕ್ಕಳಿಗೆ ಶ್ರೀಕೃಷ್ಣ ವೇಷಧಾರಿ ಸ್ಪರ್ಧೆ ಏರ್ಪಡಿಸಲಾಗಿದೆ.

ಆಸಕ್ತ ಶಾಲಾ ಮಕ್ಕಳು ಪೋಷಕರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)