ಶನಿವಾರ, ಜನವರಿ 18, 2020
20 °C
ಮುಖ್ಯಮಂತ್ರಿಗೆ ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಸಮಿತಿ ಪತ್ರ

ಚಾಮುಲ್‌ ಆಡಳಿತ ಮಂಡಳಿ ವಜಾಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿ ಬಂದಿರುವುದರಿಂದ ಜಿಲ್ಲಾ ಹಾಲು ಒಕ್ಕೂಟದ (ಚಾಮುಲ್‌) ಆಡಳಿತ ಮಂಡಳಿಯನ್ನು ವಜಾ ಮಾಡಿ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ಒಳಪ‍ಡಿಸಬೇಕು ಎಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಸಮಿತಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ. 

ಈ ಸಂಬಂಧ ಪತ್ರ ಬರೆದಿರುವ ಸಮಿತಿಯು, ‘ನಡೆದಿರುವ ಅವ್ಯವಹಾರಗಳನ್ನು ಬೆಳಕಿಗೆ ತಂದು ಜಿಲ್ಲೆಯ ಹಾಲು ಉತ್ಪಾದಕರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದೆ.

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳು ನಡೆಸುತ್ತಿರುವ ಭ್ರಷ್ಟಾಚಾರಗಳ ವಿರುದ್ಧ ಅನೇಕ ಬಾರಿ ದೂರುಗಳನ್ನು ನೀಡುತ್ತಾ ಬಂದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. 

ಚಾಮುಲ್‌ ಹಾಗೂ ಹಾಲು ಉತ್ಪಾದಕರ ಸಂಘಗಳ ವಿರುದ್ಧ ಸಂಘವು 23 ಆರೋಪಗಳನ್ನು ಮಾಡಿದ್ದು, ಪತ್ರದಲ್ಲಿ ಅವುಗಳನ್ನು ಪಟ್ಟಿ ಮಾಡಲಾಗಿದೆ. 

ಪ್ರಮುಖ ಆರೋಪಗಳು: ಚಾಮುಲ್‌ ಮೈಸೂರು ಹಾಲು ಒಕ್ಕೂಟದಿಂದ ಬೇರ್ಪಟ್ಟಾಗ 100 ಸಿಬ್ಬಂದಿ ಚಾಮುಲ್‌ಗೆ ವರ್ಗವಾಗಿದ್ದರು. ಇದರ ಜೊತೆಯಲ್ಲಿ ಹೊಸದಾಗಿ ನೇಮಕಾತಿ ಮಾಡಲಾಗಿದೆ. ಇದಲ್ಲದೆ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಲಂಚ ಪಡೆದು ಹೆಚ್ಚುವರಿಯಾಗಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿದ್ದಾರೆ. 

ಒಕ್ಕೂಟದ ವಾಹನಗಳನ್ನು ಆಡಳಿತ ಮಂಡಳಿಯ ಸದಸ್ಯರು ಸ್ವಂತ ವ್ಯವಹಾರಗಳಿಗೆ ಬಳಸುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಸಾಥ್‌ ನೀಡುತ್ತಿದ್ದಾರೆ. ಇದರಿಂದ ಒಕ್ಕೂಟದ ಖರ್ಚು ವಿಪರೀತವಾಗಿ ಏರಿಕೆಯಾಗಿದೆ. 

2000ರಲ್ಲಿ ಉತ್ಪಾದಕರಿಂದ ಖರೀದಿಸುತ್ತಿದ್ದ ಹಾಲಿನ ಬೆಲೆಗೂ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ಬೆಲೆ ವ್ಯತ್ಯಾಸ ಪ್ರತಿ ಲೀಟರ್‌ಗೆ ₹ 2ರಿಂದ ₹ 4ರ ವರೆಗೆ ಮಾತ್ರ ಇತ್ತು. ಈಗ ಒಕ್ಕೂಟವು ಪ್ರತಿ ಲೀಟರ್‌ಗೆ ₹ 12ರಿಂದ ₹ 16ರ ವರೆಗೆ ವ್ಯತ್ಯಾಸವಿದೆ. ಈ ಲಾಭಾಂಶದಿಂದ ಒಕ್ಕೂಟದಲ್ಲಿ ಹೆಚ್ಚಾಗಿರುವ ಖರ್ಚುವೆಚ್ಚಗಳನ್ನು ಭರಿಸಲಾಗುತ್ತಿದೆ. 

ಹೊಸದಾಗಿ ರಚಿಸಲಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ಕೆಎಂಎಫ್‌ನಿಂದ ಬರುವಂತಹ ಎಲ್ಲ ಸೌಲಭ್ಯಗಳನ್ನು ಆಡಳಿತ ಮಂಡಳಿ ಉದ್ಘಾಟನೆಯಾಗುವ ಮುನ್ನವೇ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. 

ಸರ್ಕಾರ ಮತ್ತು ಒಕ್ಕೂಟದಿಂದ ಪಶುಗಳಿಗೆ ಉಚಿತ ವಿಮೆ ಸೌಲಭ್ಯ ನೀಡಲು ಅವಕಾಶ ಇದ್ದರೂ ಅನೇಕ ಕಡೆ ₹ 200–₹ 300 ವಸೂಲಿ ಮಾಡುತ್ತಾರೆ. ಇದಕ್ಕೆ ರಸೀದಿಯೂ ನೀಡುವುದಿಲ್ಲ.

ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಇರುವ ಸಂಘಗಳು ಹಾಗೂ ಬೆಂಬಲಿತ ಸಂಘಗಳಲ್ಲಿ ಹಾಲಿಗೆ ಹೆಚ್ಚು ನೀರು ಬೆರೆಸಲಾಗುತ್ತದೆ. ಅದರ ಎನ್‌ಎನ್‌ಎಫ್‌ ಪ್ರಮಾಣ ಸರಿದೂಗಿಸಲು ಸಕ್ಕರೆ, ಯೂರಿಯಾ, ಗ್ಲುಕೋಸ್‌ಗಳಂತಹ ಪದಾರ್ಥಗಳನ್ನು ಬಳಸಲಾಗುತ್ತದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು