ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ ‌| ದೇವರ ವಿಗ್ರಹ ತಯಾರಿಕೆಯಲ್ಲಿ ಗುರುಪಾದಸ್ವಾಮಿಯದ್ದು ಪಳಗಿದ ಕೈ

30 ವರ್ಷಗಳಿಂದ ಸಿಮೆಂಟ್‌ ಶಿಲ್ಪಕಲೆಯಲ್ಲಿ ಪರಿಣಿತರು
Last Updated 17 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ದೇವರ ವಿಗ್ರಹಗಳನ್ನು ನೋಡಿದಾಕ್ಷಣ ಭಯ ಭಕ್ತಿಯಿಂದ ಕೈ ಮುಗಿಯುತ್ತೇವೆ. ಆದರೆ,ಅವುಗಳನ್ನು ಸುಂದರವಾಗಿ ಕೆತ್ತಿ, ಜೀವ ಕಳೆ ಬರುವಂತೆ ಮಾಡುವ ಶಿಲ್ಪಿಗಳು ನಮ್ಮ ಗಮನಕ್ಕೆ ಬರುವುದಿಲ್ಲ. ಪ್ರತಿಮೆಗಳು ಆಕರ್ಷಕವಾಗಿ ಕಾಣುವುದರ ಹಿಂದೆ ಶಿಲ್ಪಿಗಳ ಶ್ರಮ ದೊಡ್ಡದು.

ಹೋಬಳಿಯ ಕಮರವಾಡಿ ಗ್ರಾಮದ ಗುರುಪಾದಸ್ವಾಮಿ ಅವರು ಸಿಮೆಂಟ್‌ ಹಾಗೂ ಕಾಂಕ್ರೀಟ್‌ನಿಂದ ದೇವರ ವಿಗ್ರಹಗಳನ್ನು ಮಾಡುವುದರಲ್ಲಿ ಪಳಗಿದವರು. ದೇವರ ಮೂರ್ತಿಗಳ ತಯಾರಿಕೆಯಲ್ಲಿ ಮೂರು ದಶಕಗಳ ಅನುಭವವಿರುವ ಅವರು, ಸುತ್ತಮುತ್ತಲಿನ ಗ್ರಾಮ ಹಾಗೂ ತಾಲ್ಲೂಕುಗಳಲ್ಲಿ ಮಾತ್ರವಲ್ಲದೆ, ನೆರೆಯ ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶದಲ್ಲೂ ದೇವಾಲಯಗಳಿಗೆ ವಿಗ್ರಹಗಳನ್ನು ತಯಾರಿಸಿ ಕೊಟ್ಟಿದ್ದಾರೆ.

ದೇವಸ್ಥಾನಗಳಲ್ಲಿ ಶಿವ– ಪಾರ್ವತಿ, ಗಣೇಶ, ಮಹದೇಶ್ವರಸ್ವಾಮಿ, ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ, ಸೀತೆ, ರಾಮ, ಆಂಜನೇಯ, ಶನೇಶ್ವರ, ನವಗ್ರಹಗಳು, ಸಪ್ತಮಾತೃಕೆಯರು, ಬಸವೇಶ್ವರ, ಜೈನ ಬಸದಿಗಳಲ್ಲಿರುವ ತೀರ್ಥಂಕರರ ಪ್ರತಿಮೆಗಳು ಹಾಗೂ ಈ ದೇವರ ವಿವಿಧ ಭಂಗಿಯ ಸಿಮೆಂಟ್‌ ಶಿಲ್ಪಗಳು ಇವರ ಕೈಚಳಕದಲ್ಲಿ ಮೈದಳೆದಿವೆ.

ಬಾಲ್ಯದ ಆಸಕ್ತಿ: ಚಿತ್ರಕಲೆಯಲ್ಲಿ ಗುರುಪಾದಸ್ವಾಮಿ ಅವರಿಗೆ ಬಾಲ್ಯದಿಂದಲೂ ಆಸಕ್ತಿ. ಸ್ವಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮಗಳ ದೇವಸ್ಥಾನಗಳಲ್ಲಿ ಬಣ್ಣಗಳ ಮೂಲಕ ದೇವರ ಮೂರ್ತಿಗಳ ಚಿತ್ರಗಳನ್ನು ಬಿಡಿಸುತ್ತಿದ್ದರು. ಇವರ ಕಲಾಸಕ್ತಿಯನ್ನು ಗಮನಿಸಿದ ತಮಿಳುನಾಡಿನ ಕಾರೈಕುಡಿಯ ಶಿಲ್ಪಿ ಕಾತಯ್ಯ ಶೆಟ್ಟಿ ಅವರು, ಗುರು‍ಪಾದಸ್ವಾಮಿ ಅವರನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿ 10 ವರ್ಷಗಳ ಕಾಲ ದೇವರ ವಿಗ್ರಹಗಳ ತಯಾರಿ ಬಗ್ಗೆ ತರಬೇತಿ ನೀಡಿದರು.

ತರಬೇತಿಯ ನಂತರ ಗ್ರಾಮಕ್ಕೆ ಹಿಂತಿರುಗಿದ ಇವರು ಅಕ್ಕಪಕ್ಕದ ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿದ್ದ ದೇವಸ್ಥಾನಗಳಿಗೆ ಹೋಗಿ ಸಿಮೆಂಟ್ ಹಾಗೂ ಕಾಂಕ್ರೀಟ್‌ ಬಳಸಿ ವಿಗ್ರಹಗಳನ್ನು ತಯಾರಿಸಿದರು. ಕ್ರಮೇಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಸಿದ್ಧಿಗೆ ಬಂದರು.ಸುತ್ತಮುತ್ತಲಿನ ಗ್ರಾಮಗಳ ದೇವಸ್ಥಾನಗಳಲ್ಲಿ ಹೊಸ ದೇವರ ವಿಗ್ರಹ ತಲೆ ಎತ್ತಿದೆ ಎಂದರೆ ಅದರಲ್ಲಿ ಇವರ ಕೈ ಚಳಕ ಇದ್ದೇ ಇರುತ್ತದೆ ಎಂಬಷ್ಟರ ಮಟ್ಟಿಗೆ ಮನೆ ಮಾತಾದರು. ದಕ್ಷಿಣ ಕರ್ನಾಟಕದ ಜಿಲ್ಲೆಗಳ ದೇವಸ್ಥಾನ ವಿಗ್ರಹಗಳ ತಯಾರಿಕೆಯಲ್ಲಿ ಇವರು ಸಿದ್ಧಹಸ್ತರು. ಹೊರ ರಾಜ್ಯದಲ್ಲಿಯೂ ತಮ್ಮ ಕಲೆಯ ಛಾಪು ಮೂಡಿಸಿರುವ ಗರಿಮೆ ಇವರದ್ದು.

ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು, ತುಮಕೂರು ಹಾಗೂ ಇತರೆ ಜಿಲ್ಲೆಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಇವರ ಕಲೆಯನ್ನು ಮೆಚ್ಚಿ ಗೌರವಿಸಿವೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಇವರನ್ನು ಸನ್ಮಾನಿಸಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದಲೂ ಭೇಷ್‌ ಎನಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳೂ ಗುರುಪಾದಸ್ವಾಮಿ ಅವರನ್ನು ಸನ್ಮಾನಿಸಿವೆ.

ಪಾಳುಬಿದ್ದ ದೇವಾಲಯಗಳ ಜೀರ್ಣೋದ್ಧಾರ ಆಗಲಿ’

‘ನಮ್ಮಲ್ಲಿದ್ದಂತಹ ಹಲವು ಪುರಾತನ ದೇವಾಲಯಗಳು ಈಗಾಗಲೇ ನಶಿಸಿ ಹೋಗಿವೆ. ಜೀರ್ಣಾವಸ್ಥೆಯಲ್ಲಿರುವ ದೇವಾಲಯಗಳಲ್ಲಿರುವ ವಿಗ್ರಹಗಳಿಗೆ ಹೊಸ ರೂಪ ನೀಡುವ ಕೆಲಸ ಆಗಬೇಕು’ ಎಂದು ಗುರುಪಾದಸ್ವಾಮಿ ಹೇಳುತ್ತಾರೆ.

‘ಹೊಸ ದೇವಸ್ಥಾನಗಳ ನಿರ್ಮಾಣಕ್ಕಿಂತ ಪಾಳುಬಿದ್ದಿರುವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲು ಗಮನಕೊಡಬೇಕು. ಹಾಗಾದಾಗ, ನಮ್ಮಲ್ಲಿನ ಪ್ರಾಚೀನ ಕಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT