ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಒತ್ತಡದ ನಡುವೆಯೂ ಬಣ್ಣ ಹಚ್ಚುವ ಪೊಲೀಸ್‌

ಬಾಲ್ಯದ ಆಸಕ್ತಿಯನ್ನು ಮುಂದುವರಿಸಿರುವ ಪ್ರಭುಸ್ವಾಮಿ, ಬಿಡುವಿನ ವೇಳೆಯಲ್ಲಿ ನಾಟಕಗಳಲ್ಲಿ ಪಾತ್ರ
Last Updated 24 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಅತ್ಯಂತ ಒತ್ತಡದ ಪೊಲೀಸ್‌ ವೃತ್ತಿಯ ನಡುವೆಯೂ ಪೌರಾಣಿಕ ನಾಟಕ ಕಲೆಯ ಮೇಲಿದ್ದ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗಿರುವ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಪ್ರಭುಸ್ವಾಮಿ‌ಅವರು ಅಪರೂಪದ ಕಲಾವಿದ.

ಈಗಲೂ ವಿವಿಧ ಪೌರಾಣಿಕ ನಾಟಕಗಳ ಪಾತ್ರಗಳನ್ನು ನಿರ್ವಹಿಸುತ್ತಾ ತಾಲ್ಲೂಕಿನಾದ್ಯಂತ ಸೈ ಎನಿಸಿಕೊಂಡಿದ್ದಾರೆ. ಪ್ರಭುಸ್ವಾಮಿ ಅವರುಪ್ರಸ್ತುತ ಗುಂಡ್ಲುಪೇಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವೃತ್ತಿಯ ಬಿಡುವಿನ ವೇಳೆಯಲ್ಲಿ ಪ್ರಭುಸ್ವಾಮಿ ಅವರು ಹಾಡುಗಾರಿಕೆ, ತಬಲಾ, ಹಾರ್ಮೊನಿಯಂ ನುಡಿಸುತ್ತಾರೆ.

ಬಾಲ್ಯದಿಂದಲೂ ಆಸಕ್ತಿ: ಪ್ರಭುಸ್ವಾಮಿ ಅವರಿಗೆ ಬಾಲ್ಯದಿಂದಲೇ ಕಲೆಯ ಮೇಲೆ ಆಸಕ್ತಿ ಇತ್ತು.ತಮ್ಮ ಗ್ರಾಮದ ಮಠದಲ್ಲಿ ಮಹದೇವಸ್ವಾಮಿ ಎಂಬ ಗುರುಗಳು ಬಿಡುವಿನ ವೇಳೆಯಲ್ಲಿ ಹಾರ್ಮೋನಿಯಂ, ತಬಲಾ ನುಡಿಸುವುದು ಮತ್ತು ಹಾಡುಗಾರಿಕೆಯನ್ನು ಕಲಿಸುತ್ತಿದ್ದರು. ಅವರ ಶಿಷ್ಯರಾಗಿದ್ದ ಪ್ರಭುಸ್ವಾಮಿ ಚಿಕ್ಕವಯಸ್ಸಿನಲ್ಲೇ ಎಲ್ಲ ಕಲೆಯನ್ನೂ ಕಲಿತರು.

‘ಚಿಕ್ಕವ‌ಯಸ್ಸಿನಲ್ಲೇ ಗ್ರಾಮದಲ್ಲಿ ಒಂದು ತಂಡವಾಗಿ ನಾಟಕ ಹಾಗೂ ಇನ್ನಿತರ ಕಲೆಗಳನ್ನು ಕಲಿತು, ಅವಕಾಶ ಸಿಕ್ಕಾಗಲೆಲ್ಲ ಪ್ರದರ್ಶನ ಮಾಡುತ್ತಿದ್ದೆವು. ದೊಡ್ಡವರಾದಂತೆ ತಂಡದ ಸದಸ್ಯರೆಲ್ಲ ಕೆಲಸ ಮತ್ತು ವಿವಿಧ ಕಾರಣದಿಂದ ಕಲೆಯಿಂದ ದೂರವಾದರು. ಆದರೆ, ನನಗೆ ಇದರಲ್ಲಿ ಹೆಚ್ಚಿನ ಆಸಕ್ತಿ ಇದ್ದುದ್ದರಿಂದ ಈಗಲೂ ಅವಕಾಶ ಸಿಕ್ಕಾಗ ನಾಟಕ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಅವರು.

‘ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲೇ ಹಾರ್ಮೋನಿಯಂ, ತಬಲಾ ನುಡಿಸುವುದನ್ನು ಕಲಿತೆ. ಹಬ್ಬದ ದಿನಗಳಲ್ಲಿ ಹಾಗೂ ಅವಕಾಶ ಸಿಕ್ಕಾಗಲೆಲ್ಲ ಗ್ರಾಮದಲ್ಲಿ, ತಾಲ್ಲೂಕಿನ ಹೊರಗಡೆ ಪ್ರದರ್ಶನ ನೀಡಿದ್ದೇನೆ’ ಎನ್ನುವ ಖುಷಿ ಅವರಿಗೆ.

ಪೌರಾಣಿಕ ನಾಟಕಗಳಲ್ಲಿಸಿದ್ಧರಾಮೇಶ್ವರ ಪಾತ್ರ, ಕೌಶಿಕ ಮಹಾರಾಜನ ಪಾತ್ರ, ಬಿಜ್ಜಳ ಹಾಗೂ ಪ್ರಚಂಡ ಪಾತ್ರಗಳಿಗೆ ಪ್ರಭುಸ್ವಾಮಿ ಜೀವ ತುಂಬಿದ್ದಾರೆ. ಹಬ್ಬದ ಅಂಗವಾಗಿ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಾರೆ. ಶಿವರಾತ್ರಿ ಹಬ್ಬದ ದಿನಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ.

‘ಕಲೆಯನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ. ಜನರು ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಬಿಂಬಿಸಲು ಮತ್ತು ಮನರಂಜನೆಗಾಗಿ ಹಿರಿಯರು ಕಲೆಗಳನ್ನು ಬಳಸುತ್ತಿದ್ದರು. ಈಗಿನ ಕಾಲಘಟ್ಟದಲ್ಲಿ ವಿವಿಧ ಸಂಸ್ಕೃತಿಗಳ ಜೊತೆಗೆ ನಮ್ಮ ಸಂಸ್ಕೃತಿ– ಪರಂಪರೆಯನ್ನು ಉಳಿಸಬೇಕಿದೆ’ ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT