ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಸೇವಾ ದರ ಪರಿಷ್ಕರಣೆಗೆ ಭಕ್ತರ ಅಸಮಾಧಾನ

ಕೆಎಸ್‌ಆರ್‌ಟಿಸಿ ಬಸ್‌ಗಳಿಗೂ ಪ್ರವೇಶ ಶುಲ್ಕ, ಪ್ರಯಾಣಿಕರಿಗೆ ಮೇಲೆ ಹೆಚ್ಚಲಿದೆ ಹೊರೆ
Last Updated 26 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧಯಾತ್ರಾ ಸ್ಥಳ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಚಿನ್ನದ ತೇರಿನ ಉತ್ಸವ ಹಾಗೂ ಇತರ ಉತ್ಸವಗಳ ದರವನ್ನು ಪರಿಷ್ಕರಿಸಿರುವ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ನಡೆಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಹನಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸಿರುವುದಕ್ಕೆ ಚಾಲಕರು ಹಾಗೂ ವಾಹನಗಳ ಮಾಲೀಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರವೇಶಕ್ಕೂ ₹50 ಶುಲ್ಕ ನಿಗದಿ ಪಡಿಸಲಾಗಿದ್ದು, ಕೆಎಸ್‌ಆರ್‌ಟಿಸಿಯು ತನ್ನ ಮೇಲಿನ ಹೊರೆಯನ್ನು ಪ್ರಯಾಣಿಕರಿಗೆ ವರ್ಗಾಯಿಸಲು ಸಿದ್ಧತೆ ನಡೆಸಿದೆ.

ಅತಿ ಹೆಚ್ಚು ಆದಾಯ ತರುವ, ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಪೈಕಿ ಮಲೆ ಮಹದೇಶ್ವರಸ್ವಾಮಿ ದೇವಾಲಯ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ದೇವಾಲಯದ ಆದಾಯದಲ್ಲಿ ಹೆಚ್ಚಳವಾಗುತ್ತಿದೆ. ಹಾಗಿದ್ದರೂ, ಸೇವೆಗಳ ಶುಲ್ಕ ಹೆಚ್ಚಿಸಿರುವುದು ಸರಿಯಲ್ಲ ಎಂದು ಶನಿವಾರ ಕ್ಷೇತ್ರಕ್ಕೆ ಭೇಟಿ ನೀಡಿದ ಕೆಲವು ಭಕ್ತರು ಅಭಿಪ್ರಾಯಪಟ್ಟರು.

‘ಇದುವರೆಗೂ ಚಿನ್ನದ ತೇರಿನ ಉತ್ಸವಕ್ಕೆ ₹2,501 ದರ ಇತ್ತು. ಬಡವರಿಗೆ ಅಷ್ಟು ಮೊತ್ತವನ್ನೇ ಹೊಂದಿಸುವುದು ಕಷ್ಟವಾಗುತ್ತಿತ್ತು. ಈಗ ಶುಲ್ಕವನ್ನು ಇನ್ನೂ ₹500 ಹೆಚ್ಚಿಸಿರುವುದರಿಂದ, ಈ ಉತ್ಸವ ಶ್ರೀಮಂತರ ಸೇವೆಯಾಗಿ ಬದಲಾಗಲಿದೆ’ ಎಂದು ಅವರು ದೂರಿದರು.

ವಾಹನ ಶುಲ್ಕ ಹೆಚ್ಚಳ: ಕೊಳ್ಳೇಗಾಲ ಹಾಗೂ ಪಾಲಾರ್‌ ಗೇಟ್‌ಗಳ ಮೂಲಕ ಬೆಟ್ಟವನ್ನು ಪ್ರವೇಶಿಸುವ ವಾಹನಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದೆ. ಕಾರುಗಳಿಗೆ ಇದುವರೆಗೆ ₹20 ಇತ್ತು. ಶುಕ್ರವಾರದಿಂದ ₹30 ಆಗಿದೆ. ಖಾಸಗಿ ಬಸ್‌ಗಳಿಗೆ ₹60 ಇತ್ತು. ಅದನ್ನು ₹100ಕ್ಕೆ ಹೆಚ್ಚಿಸಲಾಗಿದೆ.

‘ನಾವು ವಾಹನಗಳನ್ನು ಖರೀದಿಸುವಾಗಲೇ ರಸ್ತೆ ತೆರಿಗೆ ಪಾವತಿಸುತ್ತೇವೆ. ರಾಜ್ಯ ಹೆದ್ದಾರಿಗಳಲ್ಲಿ ಈ ರೀತಿಯಾಗಿ ಶುಲ್ಕ ವಸೂಲಿ ಮಾಡುವುದು ಕಾನೂನು ರೀತಿ ತಪ್ಪಾಗುತ್ತದೆ. ಈ ಹಿಂದೆ ₹20 ಕೊಡುತ್ತಿದ್ದೆವು. ಈಗ ₹10 ಹೆಚ್ಚಾಗಿದೆ. ಕೋವಿಡ್‌ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಭಕ್ತರ ಮೇಲೆ ಇನ್ನಷ್ಟು ಹೊರೆ ಹಾಕುವುದು ಎಷ್ಟು ಸರಿ’ ಎಂದುಮೈಸೂರಿನಿಂದ ದೇವಾಲಯಕ್ಕೆ ಬಂದಿದ್ದ ರಾಜೇಶ್ ಮತ್ತು ನಂಜುಂಡಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು ದೇವರ ಧರ್ಶನದವರೆಗೆ ಎಲ್ಲ ಶುಲ್ಕವನ್ನು ಹೆಚ್ಚಿಸಿರುವ ಪ್ರಾಧಿಕಾರ, ಬಡವರ ಬಗ್ಗೆ ಸ್ವಲ್ಪ ಯೋಚಿಸಬೇಕಿತ್ತು. ಮಹದೇಶ್ವರನ ಧರ್ಶನ ಮಾಡಬೇಕಾದರೆ ₹500ರಿಂದ ₹1,000 ಖರ್ಚು ಮಾಡಬೇಕು. ಇಷ್ಟಿದ್ದರೂ ಬೆಟ್ಟದಲ್ಲಿ ಹೇಳಿಕೊಳ್ಳುವಂತಹ ಮೂಲಸೌಕರ್ಯಗಳು ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಯಾಣಿಕರಿಗೆ ಹೊರೆ: ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರವೇಶಕ್ಕೂ ಶುಕ್ರವಾರದಿಂದ ₹50 ಶುಲ್ಕ ವಿಧಿಸಲಾಗುತ್ತಿದೆ.

ಪ್ರತಿ ದಿನ ಬೆಟ್ಟಕ್ಕೆ 72 ಕೆಎಸ್‌ಆರ್‌ಟಿಸಿ ಬಸ್‌ಗಳು ಬರುತ್ತವೆ. ಜಾತ್ರೆ ಸಮಯದಲ್ಲಿ 500ರಿಂದ 600 ಬಸ್‌ಗಳು ಓಡಾಡುತ್ತವೆ. ಪ್ರತಿ ಬಸ್‌ನ ಪ್ರವೇಶಕ್ಕೆ ₹50 ಶುಲ್ಕ ನಿಗದಿಪಡಿಸಲಾಗಿದೆ. ಇದರಿಂದ ಕೆಎಸ್‌ಆರ್‌ಟಿಸಿ ಪ್ರತಿ ದಿನ ₹3,500ರಿಂದ ₹4,000ರಷ್ಟು ಹಣವನ್ನು ಶುಲ್ಕವಾಗಿ ನೀಡಬೇಕಾಗುತ್ತದೆ. ಜಾತ್ರೆ ಸಮಯದಲ್ಲಿ ಇದು ಇನ್ನೂ ಹೆಚ್ಚುತ್ತದೆ ಎಂದು ಹೇಳುತ್ತಾರೆ ಸ್ಥಳೀಯ ಸಿಬ್ಬಂದಿ.‌

ಸಾಮಾನ್ಯವಾಗಿ ಸಾರಿಗೆ ಸಂಸ್ಥೆಯು ತನಗೆ ಬಂದ ಹೆಚ್ಚುವರಿ ಹೊರೆಯನ್ನು ಪ್ರಯಾಣಿಕರಿಗೆ ವರ್ಗಾಯಿಸುತ್ತದೆ. ಪ್ರವೇಶ ಶುಲ್ಕ ವಿಧಿಸಿದ ಬಳಿಕ ಟಿಕೆಟ್‌ ದರವನ್ನು ಹೆಚ್ಚಿಸಲು ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗ ಸಿದ್ಧತೆ ನಡೆಸಿದೆ. ಮೇಲಾಧಿಕಾರಿಗಳು ಅನುಮತಿ ನೀಡಿದರೆ, ಟಿಕೆಟ್‌ ದರ ₹1ರಿಂದ ₹2ವರೆಗೆ ಹೆಚ್ಚಾಗಲಿದೆ. ಸದ್ಯ ಚಾಮರಾಜನಗರದಿಂದ ಬೆಟ್ಟಕ್ಕೆ ಸಾಮಾನ್ಯ ಬಸ್‌ಗೆ ₹136 ಹಾಗೂ ಕೊಳ್ಳೇಗಾಲದಿಂದ ₹90 ಟಿಕೆಟ್‌ ದರವಿದೆ.

ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ಬಿ. ಅವರು ‘ಶುಕ್ರವಾರದಿಂದ ಪ್ರವೇಶ ಶುಲ್ಕ ನೀಡುತ್ತಿದ್ದೇವೆ. ಮೊದಲ ದಿನ ಸ್ವಲ್ಪ ಗೊಂದಲ ಉಂಟಾಗಿತ್ತು. ಪ್ರಾಧಿಕಾರದ ಕಾರ್ಯದರ್ಶಿ ಅವರೊಂದಿಗೆ ಮಾತನಾಡಿದೆ. ಅವರ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ. ಶುಲ್ಕ ಪಾವತಿಸಬೇಕಾಗಿರುವುದರಿಂದ ಪ್ರಯಾಣ ದರವನ್ನು ಹೆಚ್ಚಿಸಬೇಕಾಗುತ್ತದೆ. ಈ ಸಂಬಂಧ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದ್ದು, ಸೋಮವಾರ ಮೇಲಾಧಿಕಾರಿಗಳಿಗೆ ಕಳುಹಿಸುತ್ತೇನೆ’ ಎಂದರು.

ಅನಿವಾರ್ಯ: ‘ನಾವು ತಮಿಳುನಾಡು ಸಾರಿಗೆ ಸಂಸ್ಥೆ ಬಸ್‌ಗಳಿಗೆ 13 ವರ್ಷಗಳಿಂದ ಶುಲ್ಕ ವಿಧಿಸುತ್ತಿದ್ದೇವೆ. ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಇದುವರೆಗೆ ಶುಲ್ಕ ಇರಲಿಲ್ಲ. ಬಸ್‌ ನಿಲ್ದಾಣಕ್ಕೆ ಪ್ರಾಧಿಕಾರ ಜಾಗ ಕೊಟ್ಟಿದೆ. ಮೂಲಸೌಕರ್ಯಗಳನ್ನು ಒದಗಿಸುತ್ತಿದೆ. ಸಿಬ್ಬಂದಿಗೆ ತಂಗುವ ವ್ಯವಸ್ಥೆಯೂ ಮಾಡಿದೆ. ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದ ನಿರ್ವಹಣೆಯನ್ನೂ ಮಾಡಬೇಕಿದೆ. ಖರ್ಚು ಜಾಸ್ತಿಯಾಗಿರುವುದರಿಂದ ಶುಲ್ಕ ವಿಧಿಸಬೇಕಾಗಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದರು.

ಯಾವ್ಯಾವ ಸೇವೆ? ಎಷ್ಟು ಹೆಚ್ಚಳ?

ಮಹಾರುದ್ರಾಭಿಷೇಕ ದರ ಈ ಹಿಂದೆ ₹10 ಸಾವಿರ ಇತ್ತು. ಹೊಸ ದರ ₹15 ಸಾವಿರ ಮಾಡಲಾಗಿದೆ. ಸಾಮ್ರಾಜ್ಯೋತ್ಸವದ ದರ ₹15 ಸಾವಿರದಿಂದ ₹20 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪಂಚ ಕಳಸ ಸಮೇತ ನವರತ್ನ ಕಿರೀಟಧಾರಣೆ ಸೇವಾ ಶುಲ್ಕ ₹600ರಿಂದ ₹900ಕ್ಕೆ ಏರಿಕೆಯಾಗಿದೆ. ಏಕದಶವಾರ ರುದ್ರಾಭಿಷೇಕ ಸಮೇತ ನವರತ್ನ ಕಿರೀಟಧಾರಣೆ (2ನೇ ಪೂಜೆಗೆ ಮಾತ್ರ) ದರ ₹750ರಿಂದ ₹1,000ಕ್ಕೆ ಏರಿಸಲಾಗಿದೆ. ರುದ್ರಾಭಿಷೇಕ ಸೇರಿದಂತೆ ಇತರ ಸೇವಾ ಶುಲ್ಕಗಳನ್ನು ₹50ರಿಂದ ₹100ಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT