ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿರಂಗನಬೆಟ್ಟ: ಸಾರಿಗೆ ಅವ್ಯವಸ್ಥೆಯಿಂದ ಭಕ್ತರ ಪರದಾಟ, ಆಕ್ರೋಶ

ಬಿಳಿಗಿರಿರಂಗನಬೆಟ್ಟ; ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ವೈಫಲ್ಯ, ಕಿ.ಮೀ ಗಟ್ಟಲೆ ನಡೆದ ಭಕ್ತರು
Last Updated 16 ಏಪ್ರಿಲ್ 2022, 15:19 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಳಿಗಿರಿರಂಗನಬೆಟ್ಟದಲ್ಲಿ ಶನಿವಾರ ನಡೆದರಥೋತ್ಸವಕ್ಕಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ರೂಪಿಸಿದ್ದ ಸಾರಿಗೆ ವ್ಯವಸ್ಥೆ ವಿಫಲವಾಗಿದ್ದರಿಂದ ಭಕ್ತರು ಪರದಾಡಿದರು.

ಬಸ್‌ಗಳಿಗೆ ಗಂಟೆಗಟ್ಟಲೆ ಕಾದು, ಕಿ.ಮೀ ಗಟ್ಟಲೆ ನಡೆದು ಸುಸ್ತಾದ ಭಕ್ತರುಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಆರ್‌ಟಿ ಅರಣ್ಯದಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಚೆಕ್ ಪೋಸ್ಟ್ ಹಾಗೂ ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳು ಚೆಕ್ ಪೋಸ್ಟ್‌ಗಳಿಂದ ಖಾಸಗಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಖಾಸಗಿ ವಾಹನಗಳಲ್ಲಿ ಬಂದವರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಗುಂಬಳ್ಳಿ ಚೆಕ್‌ಪೋಸ್ಟ್‌ನಿಂದ 15 ಹಾಗೂ ಹೊಂಡರಬಾಳು ಚೆಕ್‌ಪೋಸ್ಟ್‌ನಿಂದ ಐದು ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ಭಕ್ತರ ಸಂಖ್ಯೆ ಹೆಚ್ಚು ಇದ್ದುದರಿಂದ ಹಾಗೂ ಅದಕ್ಕೆ ಅನುಗುಣವಾಗಿ ಬಸ್‌ಗಳು ಇಲ್ಲದಿದ್ದುದರಿಂದ ಬೆಳಿಗ್ಗೆ ಗುಂಬಳ್ಳಿ ಚೆಕ್ ಪೋಸ್ಟ್‌ನಲ್ಲಿ ಜನರು ಹಾಗೂ ವಾಹನ ದಟ್ಟಣೆ ಉಂಟಾಯಿತು. ‌ಇದರಿಂದಾಗಿ ಹಲವು ಭಕ್ತರಿಗೆ ರಥೋತ್ಸವದ ಸಮಯಕ್ಕೆ ಬೆಟ್ಟ ತಲುಪಲು ಸಾಧ್ಯವಾಗಲಿಲ್ಲ.

ಬಸ್‌ಗೆ ಕಾದು ಸುಸ್ತಾದ ಭಕ್ತರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಕೆಲವರು ಚೆಕ್‌ಪೋಸ್ಟ್‌ನಿಂದ 15 ಕಿ.ಮೀ ದೂರದಲ್ಲಿರುವ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಹೊರಟರು.

ಭಕ್ತರ ಆಕ್ರೋಶ ಹೆಚ್ಚಾದಾಗ ಪೊಲೀಸರು ಖಾಸಗಿ ವಾಹನಗಳಲ್ಲಿ ಬಂದವರಿಗೂ ಬೆಟ್ಟಕ್ಕೆ ಹೋಗಲು ಅವಕಾಶ ನೀಡಿದರು.

ಬೆಟ್ಟದಲ್ಲೂ ಸಂಚಾರ ದಟ್ಟಣೆ: ಆರು ವರ್ಷಗಳ ನಂತರ ರಥೋತ್ಸವ‌ ನಡೆದ ಕಾರಣದಿಂದ ಭಾರಿ ಸಂಖ್ಯೆಯಲ್ಲಿ ಬಂದಿದ್ದರು.ಇದರ ನಡುವೆ ಬೆಟ್ಟದಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ‌ ಬಸ್‌ಗಳು, ಖಾಸಗಿ ವಾಹನಗಳು ಸಂಚರಿಸಿದ್ದರಿಂದ ಬೆಟ್ಟದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಯಿತು. ರಸ್ತೆ ಕಿರಿದಾಗಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ಬಿಳಿರಂಗನಬೆಟ್ಟದ ರಸ್ತೆಯಲ್ಲಿ ಕಿ.ಮೀಗಟ್ಟಲೆ ದೂರಕ್ಕೆ ಬಸ್‌ಗಳು, ವಾಹನಗಳು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಯಿತು. ಭಕ್ತರು ಹಾಗೂ ಸಾರ್ವಜನಿಕರು ಮೂರು ಕಿ.ಮೀಗೂ ಹೆಚ್ಚು ದೂರ ಬಸ್‌ಗಾಗಿ ನಡೆಯಬೇಕಾಯಿತು. ವಾಹನ ಸಂಚಾರ ಸುಗಮಗೊಳಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ನಡೆದು ಸುಸ್ತಾದ ಭಕ್ತರು ಬಸ್‌ ಚಾಲಕರು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವ್ಯವಸ್ಥೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಭಕ್ತರು, ‘ಖಾಸಗಿ ವಾಹನಗಳಿಗೆ ಅವಕಾಶ ಕೊಡದೇ ಇದ್ದುದರಿಂದ ಈ ರೀತಿ ಆಗಿದೆ. ಬೆಳಿಗ್ಗೆಯಿಂದ ಕಾದರೂ ಬಸ್ ಸಿಗಲಿಲ್ಲ. ಹಲವರು ರಂಗಪ್ಪನ ತೇರು ನೋಡಲಾಗದೆ ವಾಪಾಸ್ ಹೋಗಬೇಕಾಯಿತು' ಎಂದು ಹೇಳಿದರು.

‘ಜಿಲ್ಲಾಡಳಿತ, ಪೊಲೀಸರು ಸರಿಯಾದ ವ್ಯವಸ್ಥೆ ಮಾಡಿಲ್ಲ. ಮಾಹಿತಿಯನ್ನೂ ಕೊಟ್ಟಿಲ್ಲ. ಇದುವರೆಗೆ ಜಾತ್ರೆ ಸಮಯದಲ್ಲಿ ಏನೂ ಸಮಸ್ಯೆಯಾಗಿರಲಿಲ್ಲ. ಈ ಬಾರಿ ಖಾಸಗಿ ವಾಹನಗಳಿಗೆ ಅವಕಾಶ ಕೊಡದೇ ಇದ್ದುದರಿಂದ ಈ ಸಮಸ್ಯೆಯಾಗಿದೆ’ ಕೊಳ್ಳೇಗಾಲದ ಭಕ್ತ ವಡಿವೇಲು ಹೇಳಿದರು.

‘ಬಸ್ ವ್ಯವಸ್ಥೆ ಇದೆ ಅಂತ ಹೇಳಿ ಹೆಚ್ಚು ಬಸ್‌ಗಳನ್ನೂ ಬಿಡಲಿಲ್ಲ. ಇತ್ತ ನಮ್ಮ ವಾಹನಗಳಿಗೂ ಅವಕಾಶ ಕೊಡಲಿಲ್ಲ. ದೇವಾಲಯಕ್ಕೆ ಬರಲು ಹಲವು ಗಂಟೆ ಕಾಯಬೇಕಾಯಿತು’ ಎಂದು ಬೆಂಗಳೂರಿನಿಂದ ಬಂದಿದ್ದ ಶೀಲಾ ಅವರು ಹೇಳಿದರು.

ಜಿಲ್ಲಾಡಳಿತ ವೈಫಲ್ಯ: ಆರು ವರ್ಷಗಳ ನಂತರ ಜಾತ್ರೆ ನಡೆಯುತ್ತಿರುವುದರಿಂದ ಅದ್ದೂರಿಯಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆದಿತ್ತು. ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲೂ ಮೂರು ಸಭೆಗಳು ನಡೆದಿದ್ದವು. ಹಾಗಿದ್ದರೂ, ಏನೂ ಪ್ರಯೋಜನವಾಗಿಲ್ಲ. ಭಕ್ತರು, ಸಾರ್ವಜನಿಕರು ಶನಿವಾರ ತೀವ್ರ ತೊಂದರೆ ಅನುಭವಿಸಿದರು. ಬಸ್‌ಗಾಗಿ ನಡೆದುಕೊಂಡು ಹೋಗುವಾಗ ಜಿಲ್ಲಾಡಳಿತದ ಅಧಿಕಾರಿಗಳಿಗೆ ಬೈಯುತ್ತಾ ಸಾಗಿದರು.

ಅತ್ಯಂತ ಕೆಟ್ಟ ವ್ಯವಸ್ಥೆ

‘ಬೆಳಿಗ್ಗೆ ಗುಂಬಳ್ಳಿ ಚೆಕ್‌ಪೋಸ್ಟ್‌ನಲ್ಲಿ ಅವ್ಯವಸ್ಥೆ ಉಂಟಾದರೆ ಸಂಜೆ ಹೊತ್ತು ಬೆಟ್ಟದಲ್ಲಿ ಭಾರಿ ಸಮಸ್ಯೆಯಾಯಿತು. ಭಕ್ತರು ಮೂರು ಕಿ.ಮೀಗೂ ಹೆಚ್ಚು ದೂರ ನಡೆಯಬೇಕಾಯಿತು. ಸಮರ್ಪಕ ಬಸ್‌ ವ್ಯವಸ್ಥೆಯೂ ಇರಲಿಲ್ಲ. ಜಿಲ್ಲಾಡಳಿತ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಈ ಮಟ್ಟಿಗಿನ ಕೆಟ್ಟ ವ್ಯವಸ್ಥೆ ನಾನುಇದುವರೆಗೆ ನೋಡಿರಲಿಲ್ಲ’ ಎಂದು ಬಿಳಿಗಿರಿರಂಗನಬೆಟ್ಟದ ನಿವಾಸಿ ಹಾಗೂ ವಿವೇಕಾನಂದ ಟ್ರಸ್ಟ್‌ ಅಧ್ಯಕ್ಷ ಜಿ.ಮಲ್ಲೇಶಪ್ಪ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

––

ದೇವಾಲಯಕ್ಕೆ ನಿರೀಕ್ಷೆಗಿಂತ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಕೆಎಸ್‌ಆರ್‌ಟಿಸಿಯು ಸಾಕಷ್ಟು ಬಸ್‌ ವ್ಯವಸ್ಥೆ ಮಾಡದಿರುವುದರಿಂದ ಸಮಸ್ಯೆಯಾಗಿದೆ
ಟಿ.ಪಿ.ಶಿವಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

––

ನಮ್ಮ ಯೋಜನೆಯಂತೆ ವ್ಯವಸ್ಥೆ ಕಾರ್ಯರೂಪಕ್ಕೆ ಬಂದಿಲ್ಲ. ಜನರಿಗೆ ತೊಂದರೆಯಾಗಿರುವುದು ನಿಜ. ನಾನೇ 3 ಕಿ.ಮೀ ನಡೆದಿದ್ದೇನೆ
ಎಸ್‌.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ

––

ಜಾತ್ರೆಯ ಉದ್ದೇಶಕ್ಕೆ 80 ಹೆಚ್ಚುವರಿ ಬಸ್‌ ಹಾಕಲಾಗಿದೆ. ಉಚಿತ ಸೇವೆಗೆ 20 ಬಸ್‌ಗಳನ್ನು ಹಾಕಿದ್ದೆವು. ಭಕ್ತರ ಸಂಖ್ಯೆ ಜಾಸ್ತಿ ಇದ್ದುದರಿಂದ ಸಮಸ್ಯೆಯಾಗಿದೆ
ಶ್ರೀನಿವಾಸ ಬಿ. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT