ಮಂಗಳವಾರ, ಜೂನ್ 28, 2022
20 °C

ಆಮ್ಲಜನಕ ದುರಂತ: ₹ 20 ಲಕ್ಷ ಪರಿಹಾರಕ್ಕೆ ಧ್ರುವ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ದುರಂತದಲ್ಲಿ 36 ಜನರು ಮೃತಪಟ್ಟಿರುವುದಕ್ಕೆ ಸರ್ಕಾರವೇ ನೇರ ಹೊಣೆ. ಪ್ರತಿ ಕುಟುಂಬಕ್ಕೆ ತಲಾ ₹ 20 ಲಕ್ಷ ಪರಿಹಾರ‌ ನೀಡಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರು ಶುಕ್ರವಾರ ಒತ್ತಾಯಿಸಿದರು.

ಎಚ್.ಮೂಕಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಸರ್ಕಾರ ಸಕಾಲದಲ್ಲಿ ಆಮ್ಲಜನಕ ಪೂರೈಕೆ ಮಾಡದೇ ಇರುವುದರಿಂದ ಈ ದುರಂತ ಸಂಭವಿಸಿದೆ' ಎಂದು ಆರೋಪಿಸಿದರು.

‘ಹೈಕೋರ್ಟ್ ಈಗಾಗಲೇ ಪ್ರಕರಣದ ನ್ಯಾಯಾಂಗ ತನಿಖೆ‌ ನಡೆಸಿ ವಿಚಾರಣೆ ನಡೆಸುತ್ತಿದೆ. ಈಗ ತಾತ್ಕಾಲಿಕವಾಗಿ ತಲಾ ₹ 2 ಲಕ್ಷ ಪರಿಹಾರವನ್ನು ಮೃತಪಟ್ಟ 24 ಕುಟುಂಬಗಳಿಗೆ ನೀಡಲಾಗಿದೆ. 36 ಕುಟುಂಬಗಳಿಗೂ ತಲಾ ₹ 20 ಲಕ್ಷ ಕೊಡಬೇಕು ಎಂಬುದು ನಮ್ಮ‌ ಒತ್ತಾಯ. ನಾವೂ ಕೈಲಾದಷ್ಟು ಸಹಾಯ ಮಾಡುತ್ತೇವೆ' ಎಂದರು.

ರೈತನ ಮಗಳಿಗೆ ಸಾಂತ್ವನ: ಇದಕ್ಕೂ ಮೊದಲು ಅವರು, ಪತ್ನಿ, ಇಬ್ಬರು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಾದೇವಪ್ಪ ಅವರ ಮಗಳು ಹಾಗೂ ಅಳಿಯನನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ವೈಯಕ್ತಿಕ ಧನ‌ಸಹಾಯವನ್ನೂ ಮಾಡಿದರು.

'ಈ ಘಟನೆ ನಡೆಯಬಾರದಿತ್ತು. ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ.‌ ಎಷ್ಟೇ ಕಷ್ಟ ಬಂದರೂ ಇಂತಹ ನಿರ್ಧಾರ ತೆಗೆದುಕೊಳ್ಳಬಾರದು. ಇದು ಅತ್ಯಂತ ಕಷ್ಟದ ಸಮಯ. ಕೋವಿಡ್ನಿಂದಾಗಿ ನೂರಾರು‌ ಜನರು ಮೃತಪಟ್ಟಿದ್ದಾರೆ. ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಸತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಈ ಘಟನೆ ನಡೆದಿದೆ' ಎಂದರು.

‘ಮಹಾದೇವಪ್ಪ ಅವರದ್ದು ಬಡ ಕುಟುಂಬ. ಆದರೆ ಸ್ವಾಭಿಮಾನಿಗಳು. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಮಗಳಿಗೆ ಸರ್ಕಾರಿ ಉದ್ಯೋಗ ಕೊಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅದು ಕಷ್ಟ. ಆದರೆ, ಇಲ್ಲಿನ‌ ಪ್ರೌಢ ಶಾಲೆಯಲ್ಲಿ ಡಿ-ಗ್ರೂಪ್ ಹುದ್ದೆ ಖಾಲಿ ಇದೆ. ಅದನ್ನು ತಾತ್ಕಾಲಿಕವಾಗಿ ನೀಡಬೇಕು ಎಂದು ಶಿಕ್ಷಣ‌ ಇಲಾಖೆ ಉಪನಿರ್ದೇಶಕರಿಗೆ ಮನವಿ ಮಾಡಿದ್ದೇವೆ. ಅವರು ಕೂಡ ಒಪ್ಪಿದ್ದಾರೆ' ಎಂದು ಹೇಳಿದರು.

ಕಾಂಗ್ರೆಸ್ ‌ಮುಖಂಡರಾದ ಎ.ಆರ್.ಕೃಷ್ಣಮೂರ್ತಿ, ಬಾಲರಾಜ್, ಎಸ್.ಜಯಣ್ಣ, ಯೋಗೇಶ್, ಸಿ.ಮಹದೇವ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ, ಅಬ್ದುಲ್ ಅಜೀಜ್, ಮಾಧ್ಯಮ‌ ಕಾರ್ಯದರ್ಶಿ ಅರುಣ್ ಕುಮಾರ್, ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು