ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ರಾಜಕೀಯ ‘ಧ್ರುವ’ತಾರೆಗೆ ಭಾವಪೂರ್ಣ ವಿದಾಯ

ಸಾವಿರಾರು ಜನರಿಂದ ಅಂತಿಮ ದರ್ಶನ, ಕಾಂಗ್ರೆಸ್‌ ರಾಜ್ಯ ವರಿಷ್ಠರ ಹಾಜರಿ, ಮುಖಂಡರು, ಅಭಿಮಾನಿಗಳ ಕಣ್ಣೀರು
Last Updated 12 ಮಾರ್ಚ್ 2023, 16:11 IST
ಅಕ್ಷರ ಗಾತ್ರ

ಚಾಮರಾಜನಗರ: ಉರಿ ಬಿಸಿಸಲ್ಲೂ ಲೆಕ್ಕಿಸದೆ ಸಾವಿರಾರು ಜನ ಸಾಗರೋಪಾದಿಯಲ್ಲಿ ಬರುತ್ತಿದ್ದರು. ಹಠಾತ್‌ ಆಗಿ ಕಣ್ಮರೆಯಾದ ನಾಯಕನನ್ನು ಕಡೆಯ ಬಾರಿಗೆ ನೋಡುವ ಅವಕಾಶಕ್ಕಾಗಿ ಅಲ್ಲಿಗೆ ಬಂದಿದ್ದರು. ಯಾರ ಮುಖದಲ್ಲೂ ಕಳೆ ಇರಲಿಲ್ಲ. ಅನಿರೀಕ್ಷಿತವಾಗಿ ಅಪ್ಪಳಿಸಿದ ಆಘಾತ ಅವರನ್ನು ಕಳೆಗುಂದಿಸಿತ್ತು. ಅಲ್ಲಿ ಸೇರಿದ್ದವರ ಗುರುತು ಪರಿಚಯ ಇದ್ದರೂ ಮಾತುಕತೆ ಇರಲಿಲ್ಲ. ಗಾಜಿನ ಪೆಟ್ಟಿಗೆಯಲ್ಲಿ ನಿಶ್ಚಲವಾಗಿ ಮಲಗಿದ್ದ ಪ್ರಭಾವಿ ನಾಯಕನನ್ನು ಕಂಡು ಕಣ್ಣೀರದಾರು. ರೋದಿಸಿದರು.

ರಾಜಕೀಯ ಮುಖಂಡರು, ವೃದ್ಧರು, ಮಹಿಳೆಯರು, ಜನ ಸಾಮಾನ್ಯರು ಎಲ್ಲರೂ ಅತ್ತವರೇ. ಸಂತೈಸುವುದಕ್ಕೆ ಅಲ್ಲಿ ನೆರೆದಿದ್ದವರಲ್ಲಿ ಪದಗಳಿರಲಿಲ್ಲ.

ಶನಿವಾರ ಹಠಾತ್‌ ಆಗಿ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ, ಚಾಮರಾಜನಗರದ ಮಾಜಿ ಸಂಸದ ಆರ್‌.ಧ್ರುವನಾರಾಯಣ ಅವರ ಹುಟ್ಟೂರು ತಾಲ್ಲೂಕಿನ ಹೆಗ್ಗವಾಡಿಯಲ್ಲಿ ಭಾನುವಾರ ಕಂಡು ಬಂದ ಚಿತ್ರಣ ಇದು.

ಯಾವುದೇ ಸೂಚನೆ ನೀಡದೆ ಇಹಲೋಕ ತ್ಯಜಿಸಿದ ಧ್ರುವನಾರಾಯಣ ಹೆಗ್ಗವಾಡಿಯಲ್ಲಿರುವ ತಮ್ಮ ಜಮೀನಿನಲ್ಲಿ, ತಂದೆ ತಾಯಿಯ ಸಮಾಧಿಯ ಪಕ್ಕದಲ್ಲೇ ಭಾನುವಾರ ಮಧ್ಯಾಹ್ನ ಮಣ್ಣಾದರು.

‌ಪತ್ನಿ ವೀಣಾ, ಮಕ್ಕಳಾದ ದರ್ಶನ್‌, ಧಿರೇನ್‌, ಸಹೋದರಿಯರು, ಕುಟುಂಬಸ್ಥರು, ಗ್ರಾಮಸ್ಥರು, ಕಾಂಗ್ರೆಸ್‌ನ ರಾಜ್ಯ ನಾಯಕರು, ಸಾವಿರಾರು ಅಭಿಮಾನಿಗಳು ಅಶ್ರುತರ್ಪಣದ ಮೂಲಕ ಅಗಲಿದ ಚೇತನಕ್ಕೆ ವಿದಾಯ ಹೇಳಿದರು.

ಉಮ್ಮಳಿಸಿ ಬಂದ ದುಃಖ: ಶನಿವಾರ ತಡ ರಾತ್ರಿ ಧ್ರುವನಾರಾಯಣ ಅವರ ಪಾರ್ಥಿವ ಶರೀರ ಹುಟ್ಟೂರು ಹೆಗ್ಗವಾಡಿಗೆ ತಲುಪಿತು. ಗ್ರಾಮಸ್ಥರು, ಕುಟುಂಬದರು ಆಗಲೇ ಅವರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಮನೆಯ ಹಿಂಭಾಗದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಭಾನುವಾರ ಮುಂಜಾನೆ ಐದು ಗಂಟೆಯಿಂದಲೇ ಜನರು ಬಂದು ಅಂತಿಮ ನಮನ ಸಲ್ಲಿಸಲು ಆರಂಭಿಸಿದರು. ಹೊತ್ತೇರುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು, ನಂಜನಗೂಡು ತಾಲ್ಲೂಕಿನ ವಿವಿಧ ಊರುಗಳಿಂದ ಕಾಂಗ್ರೆಸ್‌ ಕಾರ್ಯಕರ್ತರು ಸೇರಿದಂತೆ ಹೆಗ್ಗವಾಡಿಯತ್ತ ಸಾವಿರಾರು ಜನರು ಬರಲು ಆರಂಭಿಸಿದರು.

ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಂಡು ‘ಧ್ರುವ ಬಾಸ್‌ಗೆ ಜೈ’ ‘ಧ್ರುವನಾರಾಯಣಗೆ ಜೈ’ ಎಂಬ ಘೋಷಣೆಗಳನ್ನು ಕೂಗುತ್ತಾ ನಮನ ಸಲ್ಲಿಸಿದರು. ಮೃತದೇಹದ ಪಕ್ಕದಲ್ಲಿ ನಿಂತಿದ್ದ ಹಿರಿಯ ಮಗ ದರ್ಶನ್‌ ಎಲ್ಲರಿಗೂ ಕೈಮುಗಿದು ಧನ್ಯವಾದ ತಿಳಿಸುತ್ತಿದ್ದರು. ಪಾರ್ಥಿವ ಶರೀರ ಇರಿಸಲಾಗಿದ್ದ ವೇದಿಕೆಗೆ ಹೊಂದಿಕೊಂಡು ಕುಳಿತಿದ್ದ ಅವರ ಪತ್ನಿ ವೀಣಾ, ಕಿರಿಯ ಮಗ ಧಿರೇನ್‌ ಹಾಗೂ ಸಂಬಂಧಿಕರಲ್ಲಿ ದುಃಖ ಮಡುಗಟ್ಟಿತ್ತು.

12.30ರವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಕಣ್ಣೀರು ಹಾಕಿದ ಮುಖಂಡರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ, ಸಲೀಂ ಅಹಮದ್‌, ಶಾಸಕರಾದ ಡಾ.ಜಿ.ಪರಮೇಶ್ವರ, ದಿನೇಶ್‌ ಗುಂಡೂರಾವ್‌ ಮುಖಂಡರಾದ ಕೆ.ಎಚ್‌.ಮುನಿಯಪ್ಪ, ಎಐಸಿಸಿ ಕಾರ್ಯದರ್ಶಿ, ಮೈಸೂರು ವಿಭಾಗದ ಕಾಂಗ್ರೆಸ್‌ ಉಸ್ತುವಾರಿ ರೋಜಿ ಜಾನ್‌ ಸೇರಿದಂತೆ ಕಾಂಗ್ರೆಸ್‌ನ ಹಲವು ಶಾಸಕರು, ಮುಖಂಡರು ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಅಂತಿಮ ದರ್ಶನ ಪಡೆದರು. ಕೆಲವರು ಬಿಕ್ಕಿ ಬಿಕ್ಕಿ ಅತ್ತರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಶವದ ಮೇಲೆ ಕಾಂಗ್ರೆಸ್‌ ಬಾವುಟ ಹೊದೆಸಿ ದುಃಖ ತಡೆಯಲಾರದೆ ಬಿಕ್ಕಳಿಸಿ ಅತ್ತರು. ಜಿ.ಪರಮೇಶ್ವರ ಅವರಿಗೂ ಕಣ್ಣೀರು ತಡೆಯಲಾಗಲಿಲ್ಲ. ಮುಖಂಡರು ಅಳುವುದನ್ನು ಕಂಡು ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಧ್ರುವನಾರಾಯಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೂ ಕಣ್ಣೀರು ಹಾಕಿದರು. ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಚಿಕ್ಕಮಾದು ಅವರು ನಿರಂತರವಾಗಿ ಅಳುತ್ತಲೇ ಇದ್ದರು.

ಬಿಎಸ್‌ಪಿ ಮುಖಂಡರು, ರೈತ ಸಂಘದ ಮುಖಂಡರು, ವಿವಿಧ ಸಮುದಾಯದ ಮುಖಂಡರು ಪ್ರತಿನಿಧಿಗಳು ಸೇರಿದಂತೆ ಜಾತಿ ಭೇದ ಮರೆತು ಎಲ್ಲರೂ ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.

ಮುಖಂಡರು ಹಾಗೂ ಇತರ ಗಣ್ಯರು ಪುತ್ರ ದರ್ಶನ್, ಪತ್ನಿ ವೀಣಾ ಹಾಗೂ ಕುಟುಂಬಸ್ಥರನ್ನು ಸಂತೈಸಿದರು.

ಸರ್ಕಾರಿ ಗೌರವ: ಮಧ್ಯಾಹ್ನ 1 ಗಂಟೆಯ ಬಳಿಕ ಧ್ರುವನಾರಾಯಣ ಅವರ ಅಡಿಕೆ ತೋಟದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಯಿತು. ತೆರೆದ ವಾಹನದ ಮೂಲಕ ಮೃತಶರೀರವನ್ನು ಅವರ ತೋಟಕ್ಕೆ ತರಲಾಯಿತು. ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಜಿ.ಪರಮೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಮುಖಂಡರು ಮತ್ತೆ ಪುಷ್ಪಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು.

ಬಳಿಕ ಧ್ರುವನಾರಾಯಣ ಅವರ ತಂದೆ, ತಾಯಿ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರಕ್ಕೆ ನಿಗದಿಪಡಿಸಿದ್ದ ಸ್ಥಳಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಯಿತು. ಸಮಾಧಿಯಾಗುವ ಸ್ಥಳಕ್ಕೆ ಮೂರು ಸುತ್ತು ಬರಲಾಯಿತು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಅವರ ತಮ್ಮ ಡಿ.ಕೆ.ಸುರೇಶ್‌ ಶವದ ಪೆಟ್ಟಿಗೆಗೆ ಹೆಗಲು ನೀಡಿದರು.

ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಬೌದ್ಧ ಭಿಕ್ಕುಗಳು ಈ ಸಂದರ್ಭದಲ್ಲಿದ್ದು, ವಿಧಿ ವಿಧಾನಗಳ ಬಗ್ಗೆ ಮಾರ್ಗದರ್ಶನ ಮಾಡಿದರು.

ಕುಟುಂಬಸ್ಥರು ಮೃತದೇಹಕ್ಕೆ ಪೂಜೆ ಸಲ್ಲಿಸಿದ ಬಳಿಕ, ಶರೀರವನ್ನು ಗುಂಡಿಯಲ್ಲಿ ಇರಿಸಿ, ಬಿಳಿ ಬಟ್ಟೆಯನ್ನು ಹೊದೆಸಿ ಮಣ್ಣು ಮಾಡಲಾಯಿತು. ಸಿದ್ದರಾಮಯ್ಯ, ಜಿ.ಪರಮೇಶ್ವರ, ಶಿವಕುಮಾರ್‌ ಕೊನೆಯವರೆಗೂ ಇದ್ದರು.

ಪಕ್ಷ ಭೇದ ಮರೆತು ಭಾಗವಹಿಸಿದ ಮುಖಂಡರು

ಕಾಂಗ್ರೆಸ್‌ ಮುಖಂಡರಲ್ಲದೆ ಬಿಜೆಪಿ, ಜೆಡಿಎಸ್‌ ಮುಖಂಡರು, ಶಾಸಕರು ಕೂಡ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

ಶಾಸಕರದ ಜಿ.ಟಿ.ದೇವೇಗೌಡ, ಹರ್ಷವರ್ಧನ, ಯತೀಂದ್ರ ಸಿದ್ದರಾಮಯ್ಯ, ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ, ಹುಣಸೂರಿನ ಮಂಜುನಾಥ್‌, ವಿಧಾನಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಅಡಗೂರು ಎಚ್‌.ವಿಶ್ವನಾಥ್‌, ರಾಜ್ಯ ಕಾಂಪೋಸ್ಟ್‌ ನಿಗಮದ ಅಧ್ಯಕ್ಷ ಎಸ್‌.ಮಹದೇವಯ್ಯ, ಮುಖಂಡರಾದ ಎಚ್‌.ಆಂಜನೇಯ, ಗಣೇಶ್‌ ಪ್ರಸಾದ್‌, ಎ.ಆರ್‌.ಕೃಷ್ಣಮೂರ್ತಿ, ಎಸ್‌.ಜಯಣ್ಣ, ಎಸ್‌.ಬಾಲರಾಜು, ಎ.ಸಿದ್ದರಾಜು, ಕಾಗಲವಾಡಿ ಶಿವಣ್ಣ, ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು, ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಬಿಗಿ ಪೊಲೀಸ್‌ ಬಂದೋಬಸ್ತ್‌

ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರೇ ಖುದ್ದು ಬಂದೋಬಸ್ತ್‌ ನೇತೃತ್ವ ವಹಿಸಿದ್ದರು. ಹಿಂದೆ ಜಿಲ್ಲೆಯ ಎಎಸ್‌ಪಿಯಾಗಿದ್ದ, ಸದ್ಯ ಕೊಡಗಿನ ಎಎಸ್‌ಪಿಯಾಗಿರುವ ಕೆ.ಎಸ್‌.ಸುಂದರ್‌ರಾಜ್‌ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಮಲ್ಲೇಶ್‌ ಸೇರಿದಂತೆ ಪೊಲೀಸ್‌, ಗೃಹ ರಕ್ಷಕ ದಳದ ಸಿಬ್ಬಂದಿ ಕರ್ತವ್ಯದಲ್ಲಿದ್ದರು.

ಜಿಲ್ಲಾಡಳಿತದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಇದ್ದರು. ತಹಶೀಲ್ದಾರ್‌ ಐ.ಈ.ಬಸವರಾಜ ಇದ್ದರು.

ಊಟದ ವ್ಯವಸ್ಥೆ: ಅಂತಿಮ ದರ್ಶನಕ್ಕೆ ಬಂದ ಸಾರ್ವಜನಿಕರಿಗೆ ಊಟ, ನೀರು ಮತ್ತು ಮಜ್ಜಿಗೆ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT