ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಡಯಾಲಿಸಿಸ್‌ ಸ್ಥಗಿತ: ರೋಗಿಗಳಿಂದ ಪ್ರತಿಭಟನೆ

ಪ್ರತಿಭಟನೆ ನಡೆಸಲು ಬೆಂಗಳೂರಿಗೆ ಹೋಗಿರುವ ಜಿಲ್ಲಾಸ್ಪತ್ರೆಯಲ್ಲಿರುವ ಕೇಂದ್ರದ ಸಿಬ್ಬಂದಿ
Last Updated 23 ಜೂನ್ 2022, 16:26 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್‌ ವಿಭಾಗ ಮುಚ್ಚಿರುವುದರಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ತೊಂದರೆಯಾಗಿದೆ’ ಎಂದು ಆರೋಪಿಸಿ ರೋಗಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಸೇರಿದ ಪ್ರತಿಭಟನಕಾರರು, ಸರ್ಕಾರ, ಆರೋಗ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಬೆಂಗಳೂರಿಗೆ ಹೋಗಿರುವುದರಿಂದ ಕೇಂದ್ರ ಮುಚ್ಚಿದೆ. ಇದರಿಂದಾಗಿ ರೋಗಿಗಳಿಗೆ ಡಯಾಲಿಸ್‌ ಮಾಡಲು ಆಗುತ್ತಿಲ್ಲ. ಡಯಾಲಿಸಿಸ್‌ ಮಾಡದೇ ಇದ್ದರೆ ನಮ್ಮ ಜೀವಕ್ಕೆ ಅಪಾಯವಾಗಲಿದೆ’ ಎಂದು ಅಳಲು ತೋಡಿಕೊಂಡರು.

‘55 ಮಂದಿ ಡಯಾಲಿಸಿಸ್‌ ಮಾಡಿಕೊಳ್ಳುತ್ತಿದ್ದಾರೆ. ಹಿಂದಿನ ಬಿಆರ್‌ಎಸ್‌ ಸಂಸ್ಥೆಯವರು ಚೆನ್ನಾಗಿ ನೋಡುಕೊಳ್ಳುತ್ತಿದ್ದರು. ಈಗಿನ ಸಂಜೀವಿನಿ ಸಂಸ್ಥೆಯವರು ಹಣ ಮಾಡುವುದರಲ್ಲಿ ತೊಡಗಿದ್ದಾರೆ. ಡಯಾಲೈಸರ್‌ಗಳನ್ನು 10 ರಿಂದ 12 ಬಾರಿ ಉಪಯೋಗಿಸುತ್ತಿದ್ದಾರೆ. ಇದರಿಂದ ರೋಗಿಗಳಿಗೆ ಸರಿಯಾದ ರೀತಿಯಾಗಿ ಡಯಾಲಿಸಸ್ ಆಗದೆ ತೊಂದರೆ ಆಗುತ್ತಿದೆ’ ಎಂದು ದೂರಿದರು.

‘ಹಾಸಿಗೆ ಬೆಡ್, ಹೊದಿಕೆಗಳನ್ನು ದಿನಕ್ಕೊಮ್ಮೆ ಬದಲಿಸುವುದು, ಸರ್ಕಾರದ ವತಿಯಿಂದ ರಕ್ತ ಹೆಚ್ಚುವ ಚುಚ್ಚುಮದ್ದುಗಳನ್ನು ನೀಡುವುದು, ಉತ್ತಮ ಗುಣಮಟ್ಟದ ಡಯಾಲೈಸರ್ ಮತ್ತು ಎಫರಿನ್ ಚುಚ್ಚುಮದ್ದನ್ನು ಉತ್ತಮವಾದ ಕಂಪನಿಗಳಿಂದ ನೀಡಬೇಕು. ರೋಗಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಡಯಾಲಿಸಸ್ ಯಂತ್ರಗಳನ್ನು ಹೆಚ್ಚು ಮಾಡಬೇಕು. ಆಮ್ಲಜನಕ ವೆಂಟಿಲೇಟರ್‌ಗಳನ್ನು ಅಳವಡಿಸಬೇಕು. ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಊಟ, ಉಪಾಹಾರ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಅವರು ರೋಗಿಗಳ ಅಹವಾಲು ಆಲಿಸಿದರು.

‘ಡಯಾಲಿಸಿಸ್‌ ಕೇಂದ್ರವನ್ನು ರಾಜ್ಯ ಮಟ್ಟದಲ್ಲಿ ಹಂಚಿಕೆಯಾದ ಖಾಸಗಿ ಕಂಪನಿ ನಿರ್ವಹಿಸುತ್ತಿದ್ದು, ಅದರ ಸಿಬ್ಬಂದಿ ನಮ್ಮ ನಿಯಂತ್ರಣಕ್ಕೆ ಬರುವುದಿಲ್ಲ. ಹಾಗಿದ್ದರೂ ನಿಮ್ಮ ಡಯಾಲಿಸಿಸ್‌ಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು. ಆ ಬಳಿಕ ರೋಗಿಗಳು ಪ್ರತಿಭಟನೆ ವಾಪಸ್‌ ತೆಗೆದುಕೊಂಡರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ರಾರ್‌ ಅಹಮದ್‌, ಉಪಾಧ್ಯಕ್ಷ ಸೈಯದ್‌ ಆರೀಫ್‌, ಅಬ್ದುಲ್ ಲತೀಫ್, ಮೊಹಮ್ಮದ್ ಕಿಜರ್, ರಾಜಶೇಖರ್, ಮಹೇಂದ್ರ, ಸಫೀಉಲ್ಲಾ, ರಾಜೇಂದ್ರ, ಬೀರೇಗೌಡ, ಶಿವನಾಗಪ್ಪ, ನಿಂಗರಾಜಶೆಟ್ಟಿ, ಮಹದೇವಸ್ವಾಮಿ, ಸಿದ್ದಯ್ಯನಪುರ ನಾಗರಾಜು, ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಪರ್ವತ್ ರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT