ಸೋಮವಾರ, ಅಕ್ಟೋಬರ್ 18, 2021
25 °C
ಜಿಲ್ಲೆಯಲ್ಲಿ ಕುಟುಂಬಗಳ ಸಮೀಕ್ಷೆಗೆ ಸಿದ್ಧತೆ: ಕಾಮಗಾರಿಗಳ ಬೇಡಿಕೆ ಆ್ಯಪ್‌ನಲ್ಲಿ ದಾಖಲು

ಚಾಮರಾಜನಗರ ಜಿಲ್ಲೆಯಲ್ಲಿ ನರೇಗಾಕ್ಕೆ ಡಿಜಿಟಲ್‌ ಸ್ಪರ್ಶದ ಬಲ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎಂನರೇಗಾ) ಯೋಜನೆಯನ್ನು ಜಿಲ್ಲೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಜಿಲ್ಲಾ ಪಂಚಾಯಿತಿಯು ಯೋಜನೆಗೆ ಡಿಜಿಟಲ್‌ ಸ್ಪರ್ಶ ನೀಡಲು ಹೆಜ್ಜೆಯಿಟ್ಟಿದೆ. 

ಜಿಲ್ಲೆಯ ಗ್ರಾಮೀಣ ಭಾಗದ ಎಲ್ಲ ಕುಟುಂಬಗಳ ಸಮೀಕ್ಷೆ ನಡೆಸಿ, ಎಂನರೇಗಾ ಯೋಜನೆಯ ವೈಯಕ್ತಿಕ ಫಲಾನುಭವಿಗಳಿಗೆ ಅಗತ್ಯವಿರುವ ಕಾಮಗಾರಿಗಳ ಬೇಡಿಕೆ ಪಟ್ಟಿಯನ್ನು ಸಂಗ್ರಹಿಸುವುದು, ಮೊಬೈಲ್‌ ಆ್ಯಪ್‌ ಮೂಲಕ ಆ ವಿವರಗಳನ್ನು ದಾಖಲಿಸಿ, ಯೋಜನೆ ಅನುಷ್ಠಾನದ ಮೇಲ್ವಿಚಾರಣೆಯನ್ನು ಕೇಂದ್ರೀಕೃತವಾಗಿ ನಡೆಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

ರಾಮನಗರ ಜಿಲ್ಲಾ ಪಂಚಾಯಿತಿಯಲ್ಲಿ ಈಗಾಗಲೇ ಇದು ಅನುಷ್ಠಾನಕ್ಕೆ ಬಂದಿದ್ದು, ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ಜಾರಿಗೆ ತರಲು ಜಿಲ್ಲಾ ಪಂಚಾಯಿತಿ ಯೋಚಿಸಿದೆ.

ಈಗಾಗಲೇ ಮನೆ ಮನೆ ಸಮೀಕ್ಷೆ ಮಾಡಲು ಸಿದ್ಧತೆ ನಡೆಸಿದೆ. ಅ.2ರಿಂದ ಸಮೀಕ್ಷೆ ಆರಂಭವಾಗಲಿದ್ದು, 20 ದಿನಗಳ ಒಳಗಾಗಿ ಸಮೀಕ್ಷೆ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್‌ಆರ್‌ಎಲ್‌ಎನ್‌) ಅಡಿಯಲ್ಲಿ ಬರುವ ಮುಖ್ಯ ಪುಸ್ತಕ ಬರಹಗಾರರು (ಎಂಬಿಕೆ) ಹಾಗೂ ಜೀವನೋಪಾಯ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳು ಸಮೀಕ್ಷೆ ನಡೆಸಲಿದ್ದು, ಜಿಲ್ಲಾ ಪಂಚಾಯಿತಿಯು ಈಗಾಗಲೇ ಅವರಿಗೆ ತರಬೇತಿ ನೀಡಿದೆ. ಸಮೀಕ್ಷೆಯ ಅರ್ಜಿ ನಮೂನೆಯೂ ಸಿದ್ಧವಾಗಿದ್ದು, ಎಲ್ಲ ತಾಲ್ಲೂಕು ಪಂಚಾಯಿತಿಗಳಿಗೆ ಹಂಚಲಾಗುತ್ತಿದೆ. 

ಕಾರ್ಯನಿರ್ವಹಣೆ ಹೇಗೆ?: ಜಿಲ್ಲೆಯ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2.57 ಲಕ್ಷ ಕುಟುಂಬಗಳಿವೆ. ಜಿಲ್ಲಾ ಪಂಚಾಯಿತಿಯು ಈವರೆಗೆ 2.15 ಲಕ್ಷ ಮಂದಿಗೆ ಉದ್ಯೋಗ ಚೀಟಿ ನೀಡಿದೆ. ಎಂನರೇಗಾ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಹೆಚ್ಚು ಹೆಚ್ಚು ಕೈಗೊಳ್ಳಬೇಕು ಎಂಬ ಸೂಚನೆಯನ್ನು ಸರ್ಕಾರ ನೀಡಿದೆ. 

‘ಇದುವರೆಗೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸದಸ್ಯರು ಮನೆಗಳನ್ನು ಸಂಪರ್ಕಿಸಿ ಎಂನರೇಗಾ ಅಡಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಬೇಡಿಕೆಯನ್ನು ಪಟ್ಟಿ ಮಾಡುತ್ತಿದ್ದರು. ನಂತರ ಕಾಮಗಾರಿಗಳಿಗೆ ಅನುಸಾರವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿತ್ತು. ಆದರೆ, ಇದರಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ತಮಗೆ ಬೇಕಾದ ಕೆಲಸವನ್ನು ಮಾಡಿಸುತ್ತಿದ್ದರು. ಫಲಾನುಭವಿಗಳಿಗೆ ಪೂರ್ಣವಾಗಿ ಲಾಭ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದವು. ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವುದೂ ಕಷ್ಟವಾಗುತ್ತಿತ್ತು’ ಎಂದು ಹೇಳುತ್ತಾರೆ ನರೇಗಾ ಯೋಜನೆ ಅನುಷ್ಠಾನದ ಅಧಿಕಾರಿಗಳು.

‘ಸಮೀಕ್ಷೆಯಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಕುಟುಂಬದ ಸಂಪೂರ್ಣ ವಿವರ ಸಂಗ್ರಹಿಸಲಾಗುತ್ತದೆ. ಉದ್ಯೋಗ ಚೀಟಿ ಇಲ್ಲದಿದ್ದರೆ, ಅವರು ಪಡೆಯಲು ಬಯಸಿದರೆ ಉದ್ಯೋಗ ಚೀಟಿ ನೀಡಲು ಕ್ರಮ ವಹಿಸಲಾಗುತ್ತದೆ. ಎಂನರೇಗಾ ಅಡಿಯಲ್ಲಿ ಏನೇನು ಕಾಮಗಾರಿ ಆಗಬೇಕು ಎಂಬುದನ್ನು ಪಟ್ಟಿ ಮಾಡಲಾಗುತ್ತದೆ. ಬಳಿಕ ಈ ಮಾಹಿತಿಯನ್ನು ಮೊಬೈಲ್‌ ಆ್ಯಪ್‌ನಲ್ಲಿ ದಾಖಲಿಸಿ, ಪ್ರತಿ ಗ್ರಾಮ ಪಂಚಾಯಿತಿಯ ಪ್ರತಿ ಕುಟುಂಬದ ವೈಯಕ್ತಿಕ ಕಾಮಗಾರಿಗಳ ಬೇಡಿಕೆ ತಿಳಿಯಲಾಗುತ್ತದೆ. ಪ್ರತಿ ಕುಟುಂಬಕ್ಕೂ ಕ್ಯುಆರ್‌–ಕೋಡ್‌ ನೀಡಿ ದುರ್ಬಲ ವರ್ಗದ ಕುಟುಂಬಗಳನ್ನು ಗುರುತಿಸಿ, ಆದ್ಯತೆ ಮೇರೆಗೆ ವೈಯಕ್ತಿಕ ಸೌಲಭ್ಯ ನೀಡಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್‌ ಭೊಯರ್‌ ನಾರಾಯಣರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಮಗಾರಿ ಬೇಡಿಕೆ ಪರಿಶೀಲಿಸಿ, ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರತಿ ಗ್ರಾಮ ಪಂಚಾಯಿತಿಗೂ ಗುರಿ ನಿಗದಿ ಪಡಿಸಲಾಗುತ್ತದೆ. ಮೊಬೈಲ್‌ ಆ್ಯಪ್‌ ಮೂಲಕ ‌ಎಲ್ಲ ವಿವರಗಳನ್ನು ದಾಖಲು ಮಾಡುವುದರಿಂದ ಸುಲಭವಾಗಿ ನಿಗಾ ವಹಿಸಬಹುದು’ ಎಂದು ಅವರು ಹೇಳಿದರು.

ಅಭಿವೃದ್ಧಿ ಹಂತದಲ್ಲಿ ಆ್ಯಪ್‌

ಈ ಯೋಜನೆಗಾಗಿ ಮೊಬೈಲ್‌ ಆ್ಯಪ್‌ ಅಭಿವೃದ್ಧಿಯ ಹಂತದಲ್ಲಿದೆ. ರಾಮನಗರ ಜಿಲ್ಲೆಯಲ್ಲಿ ಶಿಕ್ಷಣ ಫೌಂಡೇಷನ್‌ ಸಂಸ್ಥೆ ಆ್ಯಪ್‌ ಅಭಿವೃದ್ಧಿ ಪಡಿಸಿದ್ದು, ಜಿಲ್ಲೆಗೂ ಅದೇ ಸಂಸ್ಥೆ ಅಭಿವೃದ್ಧಿ ಪಡಿಸಲಿದೆ. 

‘ಆ್ಯಪ್‌ನಲ್ಲಿ ಕಾಮಗಾರಿಗಳ ವಿವರಗಳನ್ನು ದಾಖಲು ಮಾಡಿಕೊಳ್ಳುವುದಕ್ಕೂ ಮೊದಲು ಸಮೀಕ್ಷೆ ನಡೆಯಬೇಕಾಗಿದೆ. ಹಾಗಾಗಿ, ಸಮೀಕ್ಷೆ ಆರಂಭಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು. 

‘ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೂ ಕ್ಯುಆರ್‌ ಕೋಡ್‌ ನೀಡುವುದು ಯೋಜನೆಯ ಭಾಗವಾಗಿದೆ. ಇದರಿಂದಾಗಿ ಸುಲಭವಾಗಿ ಕುಟುಂಬದ ಬಗ್ಗೆ, ಅಲ್ಲಿ ನಡೆದಿರುವ ಕಾಮಗಾರಿಗಳನ್ನು ತಿಳಿದುಕೊಳ್ಳಬಹುದು’ ಎಂದು ಹೇಳಿದರು.

––

ನರೇಗಾ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಕಾರ್ಯಕ್ರಮ ರೂಪಿಸಲಾಗಿದೆ. ಸಮೀಕ್ಷೆ ಕಾರ್ಯ ಶೀಘ್ರ ಆರಂಭವಾಗಲಿದೆ. ಆ್ಯಪ್‌ ಮೂಲಕ ಕೇಂದ್ರೀಕೃತ ಮೇಲ್ವಿಚಾರಣೆ ಸಾಧ್ಯವಾಗಲಿದೆ
ಹರ್ಷಲ್‌ ಭೊಯರ್‌ ನಾರಾಯಣರಾವ್‌, ಜಿ.ಪಂ. ಸಿಇಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು