ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ದಸರಾ: ವ್ಯವಸ್ಥಿತ ಆಯೋಜನೆಗೆ ಶ್ಲಾಘನೆ

ಜನಮನಸೆಳೆದ ವೈವಿಧ್ಯಮಯ ಕಾರ್ಯಕ್ರಮಗಳು, ಮುಂದಿನ ವರ್ಷ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸೀತೆ ಜಿಲ್ಲಾಡಳಿತ?
Last Updated 5 ಅಕ್ಟೋಬರ್ 2019, 15:24 IST
ಅಕ್ಷರ ಗಾತ್ರ

ಚಾಮರಾಜನಗರ: ಶುಕ್ರವಾರ ರಾತ್ರಿ ವರ್ಣರಂಜಿತವಾಗಿ ಮುಕ್ತಾಯಗೊಂಡ ನಾಲ್ಕು ದಿನಗಳ ಜಿಲ್ಲಾ ದಸರಾ ಉತ್ಸವವನ್ನು ಈ ವರ್ಷ ಜಿಲ್ಲಾಡಳಿತ ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ದಸರಾ ಅಂಗವಾಗಿ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೇರುವ ಜನರು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಈ ಬಾರಿ ಮೊದಲ ದಿನ (ಅ.1) ಹಾಗೂ ಕೊನೆಯ ದಿನ (ಅ.4) ಜನಸಾಗರವೇ ಸೇರಿದ್ದು, ಸ್ಥಳದ ಕೊರತೆ ಎದುರಾಯಿತು. ಹಾಗಾಗಿ, ಮುಂದಿನ ವರ್ಷದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ಜಿಲ್ಲಾಡಳಿತ ಗಮನ ಹರಿಸಬೇಕು ಎಂಬ ಸಲಹೆಯೂ ಕೇಳಿ ಬಂದಿದೆ.

ವೈವಿಧ್ಯಮಯ ಕಾರ್ಯಕ್ರಮಗಳು: ಈ ವರ್ಷದ ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹೆಚ್ಚು ಒತ್ತು ನೀಡಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಇದರ ಜೊತೆಗೆ ಚಂದನ್‌ ಶೆಟ್ಟಿ, ವಿದ್ಯಾಭೂಷಣ, ಪ್ರಾಣೇಶ್‌, ವಿಜಯ ಪ್ರಕಾಶ್‌, ಮಿಮಿಕ್ರಿ ಗೋಪಿ ಅವರಂತಹ ಖ್ಯಾತನಾಮರನ್ನೂ ಆಹ್ವಾನಿಸಲಾಗಿತ್ತು. ಇವರ ಪ್ರದರ್ಶನ ಕೂಡ ಜನಮೆಚ್ಚುಗೆಗೆ ಪಾತ್ರವಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ, ದಸರಾ ಮೆರವಣಿಗೆ, ವಸ್ತುಪ್ರದರ್ಶನ, ಆಹಾರಮೇಳ, ನಾಟಕೋತ್ಸವ, ಚಲನಚಿತ್ರೋತ್ಸವ, ಮಹಿಳಾ ದಸರಾ, ರೈತ ದಸರಾ ಕಾರ್ಯಕ್ರಮಗಳು ಕೂಡ ಅತ್ಯಂತ ಅಚ್ಚುಕಟ್ಟಾಗಿ ನಡೆದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇವುಗಳಲ್ಲೂ ವೈವಿಧ್ಯ ಇತ್ತು.

ಗಮನಸೆಳೆದ ಆಹಾರ ಮೇಳ: ಎರಡು ವರ್ಷಗಳ ಹಿಂದೆ ಆಯೋಜಿಸಿದ್ದ ಆಹಾರಮೇಳ ಸಂಪೂರ್ಣವಾಗಿ ವಿಫಲವಾಗಿತ್ತು. ಹಾಗಾಗಿ, ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿತ್ತು. ಪೇಟೆ ಪ್ರೈಮರಿ ಶಾಲೆಯ ಆವರಣದಲ್ಲಿ ಹಾಕಿದ್ದ 15 ಮಳಿಗೆಗಳಲ್ಲಿ ಮೊದಲ ದಿನ ಏಳು ಮಳಿಗೆಗಳು ಮಾತ್ರ ಭರ್ತಿಯಾಗಿದ್ದವು. ಎರಡನೇ ದಿನಕ್ಕೆ ಈ ಸಂಖ್ಯೆ 11ಕ್ಕೆ ಏರಿತ್ತು. ಆಹಾರ ಮೇಳಕ್ಕೆ ಜನರನ್ನು ಆಕರ್ಷಿಸುವುದಕ್ಕಾಗಿ ಅಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಫಲ ನೀಡಿತು. ನಾಟಕೋತ್ಸವದ ಅಂಗವಾಗಿ ನಾಟಕಗಳೂ ಪ್ರದರ್ಶನಗೊಂಡವು.

ಕಳೆಗಟ್ಟಿದ ನಗರ: ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಲ್ಲದೇ, ಬಿ.ರಾಚಯ್ಯ ಜೋಡಿ ರಸ್ತೆಗೆ ತಹಶೀಲ್ದಾರ್‌ ಕಚೇರಿವರೆಗೆ ಸೆಸ್ಕ್‌ ವತಿಯಿಂದ ವಿದ್ಯುತ್‌ ಅಲಂಕಾರ ಮಾಡಿದ್ದು ಈ ವರ್ಷದ ವಿಶೇಷವಾಗಿತ್ತು. ಜಿಲ್ಲಾಡಳಿತ ಭವನವೂ ವಿಶೇಷ ಅಲಂಕಾರದಿಂದ ಕಂಗೊಳಿಸಿತು. ಐದಾರು ದಿನಗಳ ಕಾಲ ನೂರಾರು ಮಂದಿ ರಾತ್ರಿ ಹೊತ್ತು ಜಿಲ್ಲಾಡಳಿತ ಭವನಕ್ಕೆ ಭೇಟಿ ಕೊಟ್ಟು ಸೌಂದರ್ಯವನ್ನು ಸವಿದರು.

ಪ್ರಧಾನ ವೇದಿಕೆಯಲ್ಲಿ ಕಲ್ಪಿಸಿದ್ದ ಧ್ವನಿ ಬೆಳಕಿನ ವ್ಯವಸ್ಥೆಯೂ ಉತ್ತಮವಾಗಿತ್ತು. ವೇದಿಕೆಯಲ್ಲಿ ಪ್ರದರ್ಶನ ನೀಡಿದ ಕಲಾವಿದರು ಕೂಡ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿರಂಜನ್‌ಕುಮಾರ್ ಮೇಲ್ವಿಚಾರಣೆ: ದಸರಾ ಉತ್ಸವಸಮಿತಿಯ ಉಪಾಧ್ಯಕ್ಷ ಹಾಗೂ ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌‌ ಕುಮಾರ್‌ ಅವರು ಹೆಚ್ಚು ಆಸಕ್ತಿ ವಹಿಸಿದ್ದಂತೆ ಕಂಡು ಬಂತು. ದಸರಾ ಪೂರ್ವ ಸಿದ್ಧತೆಗಳನ್ನು ಕೂಲಂಕಷವಾಗಿ ಮೇಲ್ವಿಚಾರಣೆ ಮಾಡಿದ್ದ ಅವರು, ಕಾರ್ಯಕ್ರಮಗಳ ಸಮಯದಲ್ಲೂ ನಗರದಲ್ಲೇ ಇದ್ದು ಮೇಲುಸ್ತುವಾರಿ ನೋಡಿಕೊಂಡರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಕೂಡ ಕಾರ್ಯಕ್ರಮಗಳು ಹಾಗೂ ದಸರಾ ಆಗುಹೋಗುಗಳ ಮೇಲೆ ನಿಗಾ ಇಟ್ಟು ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು. ಮೊದಲ ದಿನದ ಚಂದನ್‌ ಶೆಟ್ಟಿ ಮತ್ತು ತಂಡದ ಪ್ರದರ್ಶನದ ಸಂದರ್ಭದಲ್ಲಿ ಭಾರಿ ಸಂಖ್ಯೆಯ ಪ್ರೇಕ್ಷಕರು ಸೇರಿದ್ದರಿಂದ ಆದ ಅವ್ಯವಸ್ಥೆಯನ್ನು ಗಮನಿಸಿ, ಮರು ದಿನ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಆಸನ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿಸಿದ್ದರು.

ಪುಟ್ಟರಂಗಶೆಟ್ಟಿ ಗೈರು: ಮೊದಲ ದಿನ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಂತರ ಮೂರು ದಿನಗಳಲ್ಲಿ ಯಾವ ಕಾರ್ಯಕ್ರಮದಲ್ಲೂ ಭಾಗವಹಿಸಲಿಲ್ಲ.

ಜಿಲ್ಲಾ ಕ್ರೀಡಾಂಗಣವೇ ಸೂಕ್ತ
ಈ ವರ್ಷ ಎಲ್ಲ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆದರೂ ಬಹುವಾಗಿ ಕಾಡಿದ್ದು, ದೇವಸ್ಥಾನದ ಆವರಣದಲ್ಲಿ ಉಂಟಾದ ಜಾಗದ ಕೊರತೆ.

ಹೆಚ್ಚಿನ ಜನ ಬರುವ ನಿರೀಕ್ಷೆಯಲ್ಲಿದ್ದ ಜಿಲ್ಲಾಡಳಿತ ದೇವಸ್ಥಾನದ ಆವರಣ ಮಾತ್ರವಲ್ಲದೇ, ರಥಬೀದಿಯ ಮುಕ್ಕಾಲು ಭಾಗಕ್ಕೆ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಿತ್ತು. ಹಾಗಿದ್ದರೂ ಮೊದಲ ದಿನ ಚಂದನ್‌ ಶೆಟ್ಟಿ ಹಾಗೂ ತಂಡದ ಪ್ರದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ನಂತರ ಎರಡು ದಿನ ಕಿಕ್ಕಿರಿದು ಎಂದು ಹೇಳುವಷ್ಟು ಪ್ರೇಕ್ಷಕರು ಇರಲಿಲ್ಲ. ಕೊನೆಯ ದಿನ ವಿಜಯ ಪ್ರಕಾಶ್‌ ಅವರ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂತು. ಇವರಲ್ಲಿ ಬಹುತೇಕರಿಗೆ ನೇರವಾಗಿ ವೇದಿಕೆ ಕಾರ್ಯಕ್ರಮ ನೋಡಲು ಸಾಧ್ಯವಾಗಲಿಲ್ಲ. ಅಲ್ಲಲ್ಲಿ ಅಳಡಿಸಿದ್ದ ಬೃಹತ್‌ ಪರದೆಗಳಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಬೇಕಾಯಿತು.

ದೇವಾಲಯದ ಸುತ್ತಮುತ್ತ ನಿಂತುಕೊಳ್ಳುವಷ್ಟೂ ಜಾಗ ಇಲ್ಲದಂತೆ ಆಯಿತು. ಸಂಜೆ ಮುಕ್ಕಾಲು ಗಂಟೆ ಮಳೆ ಬಂದು ಮತ್ತಷ್ಟು ಕಿರಿ ಕಿರಿ ಉಂಟು ಮಾಡಿತು. ಸೇರಿದ್ದ ಜನಸ್ತೋಮ ಅದರಲ್ಲೂ ಪಡ್ಡೆ ಹುಡುಗರನ್ನು ನಿಯಂತ್ರಿಸಲು ಪೊಲೀಸರು ಕೂಡ ಕಷ್ಟಪಟ್ಟರು.

ಸಾಕಷ್ಟು ಜಾಗ ಇಲ್ಲದೆ ಇರುವುದರಿಂದ ಪೊಲೀಸರು ಭುವನೇಶ್ವರಿ ವೃತ್ತದಿಂದ ರಸ್ತೆ ಬಂದ್‌ ಮಾಡಿದ್ದರು. ಹಾಗಾಗಿ ವಾಹನ ನಿಲುಗಡೆ ಸಮಸ್ಯೆಯೂ ಎದುರಾಯಿತು.

‘ಸಾಕಷ್ಟು ವಿಶಾಲವಾಗಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದರೆ, ಇಂತಹ ಯಾವುದೇ ಸಮಸ್ಯೆ ಇಲ್ಲ. ಎಷ್ಟು ಜನರು ಬಂದರೂ ಇಕ್ಕಟ್ಟು ಎಂಬುದು ಉಂಟಾಗುವುದಿಲ್ಲ. ಪ್ರೇಕ್ಷಕರಿಗೂ ಸಾವಕಾಶವಾಗಿ ಕುಳಿತು ಕಾರ್ಯಕ್ರಮಗಳನ್ನು ಸವಿಯಬಹುದು. ವಾಹನ ನಿಲುಗಡೆಗೂ ಅಲ್ಲಿ ತೊಂದರೆಯಾಗದು’ ಎಂದು ಭದ್ರತೆಯ ಭಾಗವಾಗಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT