ಸೋಮವಾರ, ಅಕ್ಟೋಬರ್ 14, 2019
22 °C
ಜಿಲ್ಲಾ ದಸರಾ ಕೊನೆಯ ದಿನ: ಹೆಸರಾಂತ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದ ಕಾಲೇಜು ವಿದ್ಯಾರ್ಥಿಗಳು

ರಸದೌತಣ ಉಣಬಡಿಸಿದ‌ ಸಾಂಸ್ಕೃತಿಕ ಕಾರ್ಯಕ್ರಮ

Published:
Updated:
Prajavani

ಚಾಮರಾಜನಗರ: ಜಿಲ್ಲಾ ದಸರಾದ ಕೊನೆಯ ದಿನ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ರಸದೌತಣವನ್ನು ಬಡಿಸಿದವು.

ಯಳಂದೂರಿನ ಜೆಎಸ್ಎಸ್ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಕನ್ನಡ ಚಲನಚಿತ್ರದ ಹೆಸರಾಂತ ಹಾಡುಗಳಿಗೆ ಹೆಜ್ಜೆ ಹಾಕಿದರು.

ಚಾಮರಾಜನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು, ‘ಬಂದ ಬಂದ ಮೇಘ ರಾಜ...’ ಹಾಡಿಗೆ ನೃತ್ಯ ಮಾಡುತ್ತಾ ಪರಿಸರ, ಜಲ ಸಂರಕ್ಷಣೆಯ ಅಗತ್ಯದ ಸಂದೇಶ ರವಾನಿಸಿದರು. ಹಣಕ್ಕಿಂತ ಪರಿಸರ ಮುಖ್ಯ ಎಂದು ಸಾರಿ ಹೇಳಿ, ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.

ಅಮಚವಾಡಿ ಸಂಯುಕ್ತ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡಕ್ಕೆ ಸಂಬಂಧಿಸಿದ ಕನ್ನಡ ಚಿತ್ರಗೀತೆಗಳಿಗೆ ನೃತ್ಯ ಮಾಡಿದರು.

ಆಕರ್ಷಕ ಬಾಣ ಬಿರುಸು
ದಸರಾ ಅಂಗವಾಗಿ ನಗರದ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಬಾಣ ಬಿರುಸು ಪ್ರದರ್ಶನ ಏರ್ಪಡಿಸಲಾಗಿತ್ತು.

20 ನಿಮಿಷಗಳ ಕಾಲ ನಡೆದ ಪ್ರದೇಶದಲ್ಲಿ ಸಿಡಿಮದ್ದುಗಳು ನೀಲಿ ಆಗಸದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದವು. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್‌ ಹಾಗೂ ಇತರರು ಈ ಕ್ಷಣಕ್ಕೆ ಸಾಕ್ಷಿಯಾದರು.

ಚಾಮರಾಜನಗರದ ಸಿದ್ಧಾರ್ಥ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ‘ಜೈ ಹೋ’ ಹಾಡಿಗೆ ನೃತ್ಯ ಮಾಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಅವತಾರ್ ಡಾನ್ಸ್ ಅಕಾಡೆಮಿಯ ಕಲಾವಿದರು ನಡೆಸಿಕೊಟ್ಟ ನೃತ್ಯರೂಪಕ ಪ್ರೇಕ್ಷಕರಲ್ಲಿ ರೋಮಾಂಚನ ಉಂಟು ಮಾಡಿತು.

ಹಿರಿಯ ಚಿತ್ರ ನಟಿ ಶಾಂತಲಾ ನೇತೃತ್ವದ ಶಿವಲೀಲಾ ನಾಟ್ಯ ಅಕಾಡೆಮಿಯವರು ರಾಜ್ಯದ ಹಾಗೂ ದೇಶದ ವಿವಿಧ ಕಲಾ ಪ್ರಕಾರಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು.

ಕೇರಳದ ಕಳರಿಪಯಟ್ಟು, ಕರಾವಳಿಯ ಯಕ್ಷಗಾನ, ಭರತನಾಟ್ಯ, ಕಥಕ್ಕಳಿ, ಕಂಸಾಳೆ, ಡೊಳ್ಳುಕುಣಿತ, ಪಾಶ್ಚಿಮಾತ್ಯ ನೃತ್ಯ ಪ್ರದರ್ಶಿಸಿ ಕಿಕ್ಕಿರಿದು ಸೇರಿದ್ದ ಜನಸ್ತೋಮವನ್ನು ರಂಜಿಸಿದರು.

ಕಾಡಿದ ಮಳೆ
ಮೂರು‌ ದಿನಗಳಿಂದ ಬಾರದ ಮಳೆ, ಕೊನೆಯ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಸಂಜೆ ಸುರಿದು ಕಾಡಿತು.

ಸಂಜೆ 6.15ಕ್ಕೆ ಕೆಲ ಕಾಲ ಸುರಿದು ನಿಂತಿತು. ಮತ್ತೆ 6.40ಕ್ಕೆ ಆರಂಭವಾಗಿ ಎಡಬಿಡದೆ ಸುರಿಯಿತು.

ಬಯಲಿನಲ್ಲಿ ನಿಂತಿದ್ದವರು ಕುರ್ಚಿಯನ್ನೇ ಮೇಲಕ್ಕೆ ಎತ್ತಿ ಹಿಡಿದು ಮಳೆಯಿಂದ ರಕ್ಷಣೆ ಪಡೆದರು.

Post Comments (+)