ಗುರುವಾರ , ಜುಲೈ 7, 2022
20 °C
ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ನೇತೃತ್ವದಲ್ಲಿ ಸಭೆ, ರಥೋತ್ಸವಕ್ಕೆ ಸಿದ್ದತೆಗೆ ಸೂಚನೆ

ಬಿಳಿಗಿರಿರಂಗನ ಬೆಟ್ಟ: ಈ ಬಾರಿ ಅದ್ದೂರಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ, ಜಾತ್ರಾ ಮಹೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಯಲಿದೆ. 

ಏಪ್ರಿಲ್‌ 16ರಂದು ರಥೋತ್ಸವ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅಧಿಕಾರಿಗಳಿಗೆ ಬುಧವಾರ ಸೂಚಿಸಿದರು. 

ಬೆಂಗಳೂರಿನ ವಿಧಾನಸೌಧದಲ್ಲಿ ರಥೋತ್ಸವ ಜಾತ್ರಾ ಕಾರ್ಯಕ್ರಮಗಳ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಬಿಳಿಗಿರಿ ರಂಗನಾಥಸ್ವಾಮಿಯ ರಥವು ಶತಮಾನ ಗಳಷ್ಟು ಹಳೆಯದಾಗಿದ್ದರಿಂದ ಶಿಥಿಲಗೊಂಡು 2016ರಿಂದ ರಥೋತ್ಸವ ನಡೆದಿಲ್ಲ. ನೂತನ ರಥವನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ, ಏಪ್ರಿಲ್ 16ರಂದು ನಡೆಯಲಿರುವ ಬ್ರಹ್ಮರಥೋತ್ಸವದಲ್ಲಿ ಎಲ್ಲಾ ಭಕ್ತಾದಿಗಳು ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದರು.   

‘ಜಾತ್ರೆ ಹಾಗೂ ಬ್ರಹ್ಮ ರಥೋತ್ಸವಕ್ಕೆ ಬರುವ ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಕಲ್ಪಿಸಬೇಕು. ರಸ್ತೆಗಳನ್ನು ಸರಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ರಥ ಚಲಿಸುವ ರಥದ ಬೀದಿಯಲ್ಲೂ ರಥದ ಚಲನೆ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು. ರಥೋತ್ಸವಕ್ಕೂ ಮೊದಲು ಕೈಗೊಳ್ಳಬೇಕಿರುವ ರಥದ ಮೊದಲ ಚಲನೆ ಪ್ರಕ್ರಿಯೆಗೆ ಸಾಂಪ್ರಾದಾಯದಂತೆ ಪ್ರಕ್ರಿಯೆ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಬೇಕು. ಭಕ್ತಾದಿಗಳಿಗೆ ಕೊರತೆ ಆಗಬಾರದು. ಈ ಸೌಲಭ್ಯಗಳಿಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಸೋಮಣ್ಣ ಸೂಚಿಸಿದರು. 

ಶಾಸಕ ಎನ್.ಮಹೇಶ್ ಅವರು ಮಾತನಾಡಿ,  ‘ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ರಾಜ್ಯ ಪುರಾತತ್ವ ಇಲಾಖೆ ದೇವಾಲಯದ ಆವರಣದಲ್ಲಿ ಕೈಗೊಂಡಿರುವ ನೆಲಹಾಸು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ರಥೋತ್ಸವಕ್ಕೂ ಮೊದಲು ಸಂಪ್ರಾದಾಯದಂತೆ ನಡೆಸಬೇಕಿರುವ ರಥದ ಮೊದಲ ಚಲನೆಯ ಮಟತೇರು ಕಾರ್ಯವನ್ನು ನೆರವೇರಿಸಲು ಸಿದ್ಧತೆ ಕೈಗೊಳ್ಳಬೇಕು’ ಎಂದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧೂ ರೂಪೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್, ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ, ಬಿಆರ್‌ಟಿ ಡಿಸಿಎಫ್‌ ಡಾ.ಜಿ.ಸಂತೋಷ್‌ಕುಮಾರ್‌, ತಹಶೀಲ್ದಾರ್ ಆನಂದಪ್ಪನಾಯಕ, ದೇವಾಲಯದ ಪ್ರಧಾನ ಅರ್ಚಕ ರವಿಕುಮಾರ್, ಅರ್ಚಕರಾದ ನಾಗೇಂದ್ರಭಟ್, ಆಗಮಿಕರಾದ ನಾಗರಾಜ ಭಟ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಇತರರು ಇದ್ದರು. 

18ರಂದು ಬೆಟ್ಟಕ್ಕೆ ಭೇಟಿ
ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ’ಕಾಂಪೌಂಡ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಹೊಸ ಮೆಟ್ಟಿಲುಗಳ ನಿರ್ಮಾಣವನ್ನು ಬೇಗನೇ ಆರಂಭಿಸಬೇಕು. ಬಾಕಿ ಉಳಿದಿರುವ ಕೆಲಸಗಳನ್ನೂ ತುರ್ತಾಗಿ ಕೈಗೊಳ್ಳಬೇಕು‘ ಎಂದು ಸೂಚನೆ ನೀಡಿದರು.

‘ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ, ಅರಣ್ಯ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಶೀಘ್ರ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ ಜಾತ್ರೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು. ಇದೇ 18 ರಂದು ನಾನು ಶಾಸಕ ಎನ್.ಮಹೇಶ್ ಅವರೊಂದಿಗೆ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ ರಥೋತ್ಸವ, ಜಾತ್ರಾ ಮಹೋತ್ಸವ ಪೂರ್ವ ಸಿದ್ಧತೆಗಳನ್ನು ವೀಕ್ಷಿಸುತ್ತೇನೆ’ ಎಂದು ಸೋಮಣ್ಣ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು