ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳಿಗೆ ನೀರು: 2 ಹಂತದಲ್ಲಿ ಅನುಷ್ಠಾನಕ್ಕೆ ಸೂಚನೆ -ಸಚಿವ ಸೋಮಣ್ಣ

Last Updated 5 ನವೆಂಬರ್ 2022, 7:43 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನ ವಿಧಾನಸೌಧದ ಸಭಾಂಗಣದಲ್ಲಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಂಬಂಧ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆತಲ್ಲಿ ಮಾತನಾಡಿದ ಅವರು, ‘ಕೆರೆಗಳಿಗೆ ನೀರು ತುಂಬಿಸುವ ಏಳು ಯೋಜನೆಗಳ ಪೈಕಿ 3 ಯೋಜನೆಗಳಿಗೆ ₹745 ಕೋಟಿ ಬೇಕು. ಯೋಜನೆಗೆ ಈಗಾಗಲೇ ಅಂದಾಜು ಪರಿಶೀಲನಾ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಉಳಿದ ನಾಲ್ಕು ಯೋಜನೆಗಳಿಗೆ ಹೊಸದಾಗಿ ₹749 ಕೋಟಿ ವೆಚ್ಚದ ಅಂದಾಜು ಮೊತ್ತದ ಪ್ರಾಥಮಿಕ ಡಿಪಿಆರ್ ಆಗಿದೆ. ಇದಕ್ಕೆ ವಿಸೃತ ಯೋಜನೆ ವರದಿಯನ್ನು ಅಂತಿಮಗೊಳಿಸಬೇಕು’ ಎಂದರು.

‘ಜಿಲ್ಲೆಯ ಸರ್ವಾಂಗೀಣ ಪ್ರಗತಿ ದೃಷ್ಟಿಯಿಂದ ಯೋಜನೆಯ ಜಾರಿ ತುರ್ತಾಗಿ ಆಗಬೇಕಿದೆ. ಆರ್ಥಿಕ ಇಲಾಖೆ ಅನುಮೋದನೆ, ಟೆಂಡರ್ ಪ್ರಕ್ರಿಯೆ ಇನ್ನಿತರ ಕ್ರಮಗಳಿಗೆ ಅಧಿಕಾರಿಗಳು ಮುತುವರ್ಜಿ ವಹಿಸಿಕೊಂಡು ಶೀಘ್ರವೇ ಯೋಜನೆ ಚಾಲನೆಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಸೋಮಣ್ಣ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

‘ಯೋಜನೆ ಅನುಷ್ಠಾನ ತರುವ ನಿಟ್ಟಿನಲ್ಲಿ ಬಾಕಿಯಿರುವ ಎಲ್ಲ ರೂಪುರೇಷೆಗಳನ್ನು ಅಂತಿಮಗೊಳಿಸಿ ಅನುಮೋದನೆ ಪಡೆದುಕೊಳ್ಳಬೇಕು. ವಿಳಂಬ ಮಾಡದೆ ಯೋಜನೆ ಜಾರಿಗೆ ಮುಂದಾಗಲು ಹಿರಿಯ ಅಧಿಕಾರಿಗಳೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

ಇದೇ ವೇಳೆ ಆನೆ ಮಡುವಿನ ಕೆರೆಗೆ ನೀರು ತುಂಬಿಸುವ ಸಂಬಂಧ ಹಿರಿಯ ಅಧಿಕಾರಿಗಳ ಜೊತೆ ವಿವರವಾಗಿ ಚರ್ಚಿಸಿದ ಸಚಿವರು, ಯಾವುದೇ ತೊಂದರೆಯಿಲ್ಲದೇ ಆನೆಮಡುವಿನ ಕೆರೆಗೆ ನೀರು ತುಂಬಿಸಲು ಅಗತ್ಯವಿರುವ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್. ನಿರಂಜನ್ ಕುಮಾರ್, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‍ ಸಿಂಗ್, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗಳಾದ ಮೃತ್ಯುಂಜಯಸ್ವಾಮಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ, ನಿಗಮದ ಮೈಸೂರು ವಿಭಾಗದ ಮುಖ್ಯ ಎಂಜಿನಿಯರ್ ವೆಂಕಟೇಶ್, ಸೂಪರಿಂಟೆಂಡೆಂಟ್‌ ಎಂಜಿನಿಯರ್ ಶಿವಮಾದಯ್ಯ, ಕಾರ್ಯಪಾಲಕ ಎಂಜಿನಿಯರ್ ಎಂ.ಬಿ.ಪಾಟೀಲ, ವೆಂಕಟೇಶ್ ಪ್ರಭು, ಕಿಶೋರ್, ಈಶ್ವರ್, ಮಂಜುನಾಥ್ ಇತರರು ಇದ್ದರು.

'ಸುತ್ತೂರು ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ’

‘ಸುತ್ತೂರು ಏತ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲು ಅಗತ್ಯ ಕ್ರಮ ವಹಿಸಬೇಕು. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ರಾಮನಗುಡ್ಡ, ಹುಬ್ಬೆಹುಣಸೆ ಯೋಜನೆ ಕಾಮಗಾರಿಗಳನ್ನು ಕೈಗೊಂಡು ಕೆರೆಗಳನ್ನು ತುಂಬಿಸುವ ಯೋಜನೆಯ ಪ್ರಗತಿಗೂ ಮುಂದಾಗಬೇಕು. ಜಿಲ್ಲೆಯಲ್ಲಿ ಬಾಕಿ ಇರುವ ಕೆರೆ ತುಂಬಿಸುವ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಸೋಮಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT