ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಮೂಡ್ಲು: ಪ್ರೌಢಶಾಲೆ ಆರಂಭಿಸುವ ಭರವಸೆ

ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ ಸುರೇಶ್‌ಕುಮಾರ್‌
Last Updated 25 ಸೆಪ್ಟೆಂಬರ್ 2019, 15:47 IST
ಅಕ್ಷರ ಗಾತ್ರ

ಚಾಮರಾಜನಗರ: ‘ತಾಲ್ಲೂಕಿನ ಬ್ಯಾಡಮೂಡ್ಲು ಗ್ರಾಮದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆ ಆರಂಭಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಬುಧವಾರ ಭೇಟಿ ನೀಡಿದ ಅವರು, ಬ್ಯಾಡಮೂಡ್ಲು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟರು. ನಂತರ ಮಕ್ಕಳು, ಪೋಷಕರು, ಶಿಕ್ಷಕರು ಹಾಗೂ ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿ, ಕುಂದುಕೊರತೆಗಳನ್ನು ಆಲಿಸಿದರು.

‘ಇಲ್ಲಿ ಪ್ರೌಢಶಾಲೆಯ ಅಗತ್ಯವಿದೆ ಎಂಬುದು ನನಗೆ ಮನವರಿಕೆಯಾಗಿದೆ. ಹೊಸ ಶಾಲೆ ಆರಂಭವಾದರೆ ಗ್ರಾಮದ ಮಕ್ಕಳಿಗೆ ಅನುಕೂಲವಾಗುತ್ತದೆ. ಅದರಲ್ಲೂ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಬಹುದು’ ಎಂದರು.

ಇದಕ್ಕೂ ಮೊದಲು ಗ್ರಾಮಸ್ಥರು ಪ್ರೌಢಶಾಲೆ ಮಂಜೂರು ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.

ಸ್ವಾಗತ: ಶಾಲೆಗೆ ಬಂದ ಸಚಿವರನ್ನು, ಮಕ್ಕಳು ಬ್ಯಾಂಡ್‌ ವಾದನದ ಮೂಲಕ ಸ್ವಾಗತಿಸಿದರು.ತರಗತಿಗಳಿಗೆ ಭೇಟಿ ನೀಡಿದ ಸಚಿವರು ಶಾಲಾ ಮಕ್ಕಳೊಂದಿಗೆ ಪರೀಕ್ಷೆ, ಪಾಠದ ಬಗ್ಗೆ ಸಮಾಲೋಚನೆ ನಡೆಸಿದರು.

ಪರೀಕ್ಷೆ ಬಗ್ಗೆ ಅನಗತ್ಯ ಭಯಪಡಬಾರದು, ಪೂರ್ವ ಸಿದ್ಧತೆಯೊಂದಿಗೆ ಅಧ್ಯಯನ ಮಾಡಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಸಲಹೆ ಮಾಡಿದರು.

ಶಾಲೆ ಆವರಣದಲ್ಲಿ ಇದ್ದ ಕೈತೋಟವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ ಸಚಿವರು, ಹಣ್ಣು- ತರಕಾರಿಯಂತಹ ಗಿಡಗಳನ್ನು ಬೆಳೆಯಲು ಸಲಹೆ ನೀಡಿದರು.

ಹೆಚ್ಚುವರಿ ಕೊಠಡಿ ಬೇಕು: ಶಾಲೆಗೆ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಶೌಚಾಲಯಗಳೂ ಬೇಕು ಎಂದು ಶಿಕ್ಷಕರು ಮನವಿ ಮಾಡಿದರು.ಗ್ರಾಮಕ್ಕೆ ಉತ್ತಮ ರಸ್ತೆ, ಆಸ್ಪತ್ರೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಕೇಳಿಕೊಂಡರು.

‘ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ಎಲ್ಲರೂ ಒಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಕೆಲಸ ಮಾಡೋಣ. ಸಲ್ಲಿಸಿರುವ ಮನವಿಗಳನ್ನು ಪರಿಶೀಲಿಸಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ನೀಡಿ, ವಿಳಂಬವಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಖಾಸಗಿ ಬಸ್‌ ನಿಲ್ದಾಣದ ಕಾಮಗಾರಿಯನ್ನೂ ಪರಿಶೀಲಿಸಿದರು. ನಂತರ ದೊಡ್ಡರಸನಕೊಳ ವೀಕ್ಷಿಸಿ, ಕೊಳದ ಬೀದಿಯಲ್ಲಿರುವ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಭೆ: ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ ಜಿಲ್ಲೆಯ ಅಭಿವೃದ್ಧಿ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್.ನಿರಂಜನ್‌ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಎಸ್.ಮಹೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಿ.ಬಸವಣ್ಣ,ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಬಿ.ಎಚ್. ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಉಪ ವಿಭಾಗಾಧಿಕಾರಿ ನಿಖಿತಾ ಎಂ. ಚಿನ್ನಸ್ವಾಮಿ ಇತರರು ಹಾಜರಿದ್ದರು.

‘ಜಿಲ್ಲೆ ಅಭಿವೃದ್ಧಿ ಕಡೆಗೆ ಗಮನ ಇರಲಿ’

‘ಜಿಲ್ಲೆಯನ್ನು ಎಲ್ಲ ರೀತಿಯಿಂದಲೂ ಅಭಿವೃದ್ಧಿಪಡಿಸಿ, ರಾಜ್ಯದ ಗಮನ ಇತ್ತ ಹರಿಯುವಂತೆ ಮಾಡಬೇಕು. ಇದು ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿಯ ಮುಖ್ಯ ಗುರಿಯಾಗಬೇಕು’ ಎಂದು ಎಸ್.ಸುರೇಶ್‌ಕುಮಾರ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಅಧಿಕಾರಿಗಳೊಂದಿಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಸಕಾಲ ಯೋಜನೆಯಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಅಷ್ಟರ ಮಟ್ಟಿಗೆ ಕಾರ್ಯ ಚಟುವಟಿಕೆಗಳು ಸಾರ್ವಜನಿಕ ಸ್ನೇಹಿಯಾಗಿ ನಡೆಯುತ್ತಿವೆ. ಅದರಂತೆ ಇತರ ಎಲ್ಲ ಸರ್ಕಾರಿ ಕೆಲಸಗಳೂ ವಿಳಂಬವಿಲ್ಲದೆ ನಡೆಯಬೇಕು. ಜನರ ಸಮಸ್ಯೆಗಳು ನಿಗದಿತ ಸಮಯದೊಳಗೆ ಪರಿಹಾರವಾಗುವಂತೆ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಬೇಕು’ ಎಂದು ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆ ಸ್ಥಳ ಪರಿಶೀಲನೆ

ಕೊಳ್ಳೇಗಾಲ: ಸುರೇಶ್‌ ಕುಮಾರ್‌ ಅವರು ತಾಲ್ಲೂಕಿನಸರಗೂರು ಗ್ರಾಮದ ಕಾವೇರಿ ನದಿಯ ತೀರದಲ್ಲಿ ಶಾಶ್ವತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸ್ಥಳವನ್ನು ವೀಕ್ಷಿಸಿದರು.

‘ಹನೂರು ವಿಧಾನಸಭಾ ಕ್ಷೇತ್ರದ 291 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಶ್ರೀಘವೇ ಚಾಲನೆ ನೀಡಲಾಗುವುದು. ಇದರ ಅಂದಾಜು ವೆಚ್ಚ ₹ 432.35 ಕೋಟಿ. ಮೊದಲನೇ ಹಂತದಲ್ಲಿ 98 ಗ್ರಾಮಗಳಿಗೆ ₹ 192 ಕೋಟಿ ವೆಚ್ಚದಲ್ಲಿ ಮತ್ತು 2ನೇ ಹಂತದಲ್ಲಿ 193 ಗ್ರಾಮಗಳಿಗೆ ₹ 240.35 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುವುದು‌’ ಎಂದರು.

ಶಾಸಕ ಆರ್.ನರೇಂದ್ರ ಮಾತನಾಡಿ, ‘ಕುಡಿಯುವ ನೀರಿನ ಯೋಜನೆಯನ್ನು ಬೇಗನೆ ಪ್ರಾರಂಭ ಮಾಡಿ. ಈ ಯೋಜನೆಯಿಂದ ಅನೇಕ ಕೆರೆಗಳಿಗೂ ನೀರು ಹರಿಯುವಂತೆ ಮಾಡಿ’ ಎಂದು ಮನವಿ ಮಾಡಿದರು.

ಬೇರೆ ಕಡೆ ಮಾಡಿ: ‘ಯೋಜನೆಯ ಸ್ಥಳ ದಲಿತ ಜನಾಂಗಕ್ಕೆ ಸೇರುತ್ತದೆ. ಆದಕಾರಣ ಈ ಜಾಗದಲ್ಲಿ ಶಾಶ್ವತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಬೇಡಿ’ ಎಂದು ಗ್ರಾಮಸ್ಥರು, ಸಚಿವರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಈ ಯೋಜನೆಯಿಂದಾಗಿ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಸಿಗುತ್ತದೆ. ಆದ್ದರಿಂದ ಈ ಸ್ಥಳವನ್ನು ಗುರುತಿಸಲಾಗಿದೆ. ನಿಮಗೆ ಬೇಕಾದರೆ ಬೇರೆ ಕಡೆ ಜಾಗವನ್ನು ಕಲ್ಪಿಸಿಕೊಡುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT