ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣಾವತಿ: ನಾಲೆಗಳಿಗೆ ತಕ್ಷಣದಿಂದ ನೀರು ಹರಿಸಲು ತೀರ್ಮಾನ

ಜಿಲ್ಲಾ ಉಸ್ತುವಾರಿ ಸಚಿವ ಎಸ್‌,ಸುರೇಶ್‌ಕುಮಾರ್‌ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ
Last Updated 8 ಫೆಬ್ರುವರಿ 2021, 5:04 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಸುವರ್ಣಾವತಿ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ 2020-21ನೇ ಸಾಲಿನ ಬೇಸಿಗೆ ಬೆಳೆಗಳಿಗೆ ತಕ್ಷಣದಿಂದಲೇ ನೀರು ಬಿಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಬಿಡಲು ನಿರ್ಧಾರ ಕೈಗೊಳ್ಳಲಾಯಿತು.

ನೀರಿನ ಲಭ್ಯತೆ ಪ್ರಮಾಣವನ್ನು ಆಧರಿಸಿ ಪೂರ್ಣ ಪ್ರಮಾಣದ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಒದಗಿಸಲು ಸಾಧ್ಯವಿಲ್ಲದ ಕಾರಣ ಒಟ್ಟಾರೆ ಉಪಯೋಗಕ್ಕೆ ಬರುವ ನೀರಿನಲ್ಲಿ 384.10 ಎಂಸಿಎಫ್ಟಿ ನೀರನ್ನು 3,306.65 ಎಕರೆ ಪ್ರದೇಶಕ್ಕೆ ಅರೆ ನೀರಾವರಿ ಬೆಳೆಗಳಿಗೆ (ಅರೆ ಖಷ್ಕಿ) ಕಟ್ಟು ನೀರಿನ ಪದ್ಧತಿ ಅನ್ವಯ ನೀರು ಹರಿಸಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.

ಇದೇ ವೇಳೆ ಹಾಜರಿದ್ದ ನೀರು ಬಳಕೆದಾರರ ಸಂಘಗಳ ಪ್ರತಿನಿಧಿಗಳು, ರೈತ ಮುಖಂಡರು ನೀರು ಬಿಡುವ ಸಂಬಂಧ ಹಲವು ಮನವಿ ಹಾಗೂ ಬೆಳೆಗಾರರು, ರೈತರು ಎದರಿಸುತ್ತಿರುವ ಹಲವು ಸಮಸ್ಯೆಗಳನ್ನು ಗಮನಕ್ಕೆ ತಂದರು. ಎರಡು ವರ್ಷಗಳಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ನಾಲೆ ಸೇರಿದಂತೆ ಇತರೆ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ ಎಂದು ದೂರಿದರು.

ಎಲ್ಲರ ಸಲಹೆ ಮನವಿಗಳನ್ನು ಆಲಿಸಿ ಮಾತನಾಡಿದ ಸುರೇಶ್ ಕುಮಾರ್ ಅವರು, ‘ನೀರಿನ ಲಭ್ಯತೆ ಆಧರಿಸಿ ನೀರು ಬಿಡಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಯವರು ಮುಂದಿನ ವಾರದಲ್ಲೇ ನೀರು ಬಳಕೆದಾರರ ಸಭೆಯನ್ನು ಸುವರ್ಣಾವತಿ ಜಲಾಶಯ ಭಾಗದಲ್ಲೇ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ನೀರು ಬಿಡುವ ಸಂಬಂಧ ಆದಷ್ಟು ಮುಂಚಿತವಾಗಿಯೇ ಸಭೆ ಏರ್ಪಡಿಸಲಾಗುವುದು’ ಎಂದರು.

‘ಕಾವೇರಿ ನೀರಾವರಿ ನಿಗಮದ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂಬ ಆರೋಪಗಳ ಸಂಬಂಧ ಸಮಗ್ರ ತನಿಖೆ ನಡೆಸಿ ವರದಿ ಪಡೆಯಲಾಗುವುದು. ಕಾವೇರಿ ನೀರಾವರಿ ನಿಗಮದ ಸೂಪರಿಂಟೆಂಡೆಂಟ್‌ ಎಂಜಿನಿಯರ್ ಸಭೆಗೆ ಹಾಜರಾಗದಿರುವ ಬಗ್ಗೆ ಸಂಬಂಧ ಪಟ್ಟವರ ಜೊತೆ ಮಾತನಾಡುತ್ತೇನೆ’ ಎಂದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿದರು.

ಕಾಡಾ ಅಧ್ಯಕ್ಷ ಎಂ. ಶಿವಲಿಂಗಯ್ಯ, ಕಾಡಾ ಆಡಳಿತಾಧಿಕಾರಿ ಬಾಲಕೃಷ್ಣ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಎಂ.ಬಿ.ಪಾಟೀಲ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್‌ಗಳಾದ ಮಹದೇವಸ್ವಾಮಿ, ರತೀಶ್, ಮಹೇಶ್, ನೀರು ಬಳಕೆದಾರರ ಸಂಘಗಳ ಮುಖ್ಯಸ್ಥರು, ಪ್ರತಿನಿಧಿಗಳು, ರೈತ ಮುಖಂಡರಾದ ಶಿವಕುಮಾರ್, ಆರ್.ಮಹದೇವು, ಎಂ. ಮಹೇಶ್ ಪ್ರಭು, ದಡದಹಳ್ಳಿ ಗೋವಿಂದರಾಜು, ದಡದಹಳ್ಳಿ ರಮೇಶ್, ಸಿದ್ದಯ್ಯನಪುರದ ಗೋವಿಂದರಾಜು, ಚಂದ್ರಶೇಖರ್, ಆಲೂರುಮಲ್ಲು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT