ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ರಸ್ತೆ ದುರಸ್ತಿಗೆ ಅನುದಾನ, ವಿದ್ಯುತ್‌ ಬಿಲ್‌ ಬಾಕಿ ಮನ್ನಾಗೆ ಕ್ರಮ

ರೈತರು, ಜನಸಾಮಾನ್ಯರು, ಬಡ ಜನತೆಯ ಕೆಲಸಗಳಿಗೆ ಸ್ಪಂದಿಸಿ: ಸಚಿವ ಸೋಮಣ್ಣ ಕರೆ
Last Updated 22 ಅಕ್ಟೋಬರ್ 2022, 16:18 IST
ಅಕ್ಷರ ಗಾತ್ರ

ಚಾಮರಾಜನಗರ: ‘ಅಧಿಕಾರಿಗಳು ತಮ್ಮ ಕಾರ್ಯ ವೈಖರಿಯನ್ನು ಬದಲಿಸಿಕೊಂಡು ರೈತರು, ಜನಸಾಮಾನ್ಯರು, ಬಡವರ ಕೆಲಸಗಳಿಗೆ ಸ್ಪಂದಿಸಬೇಕು. ಜಿಲ್ಲೆಯ ಸವಾಂಗೀಣ ಅಭಿವೃದ್ದಿಗೆ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ರೈತರ ಕುಂದು ಕೊರತೆಗಳು ಹಾಗೂ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಜನರು ಹಿಂದೆಂದೂ ಕಾಣದ ಮಳೆ, ಪ್ರವಾಹದಿಂದ ತತ್ತರಿಸಿದ್ದಾರೆ. ಬೆಳೆ, ಮನೆಗಳಿಗೆ ಹಾನಿಯಾಗಿದೆ. ರಸ್ತೆ, ಸೇತುವೆ ಸೇರಿದಂತೆ ಇತರೆ ಮೂಲ ಸೌಕರ್ಯಗಳಿಗು ತೊಂದರೆಯಾಗಿದೆ. ಇಂತಹ ಸಮಯದಲ್ಲಿ ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಿ ಪರಿಹಾರ ಕಾರ್ಯಗಳಿಗೆ ಮುಂದಾಗಬೇಕು’ ಎಂದರು.

‘ಮಳೆಯಿಂದ ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಬೇಕು. ಇದಕ್ಕಾಗಿ ₹2.75 ಕೋಟಿ ಹಣ ಬಿಡುಗಡೆಯಾಗಿದೆ. ಹೆಚ್ಚುವರಿಯಾಗಿ ₹25 ಕೋಟಿ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಲಾಗುವುದು’ ಎಂದರು.

ರೈತ ಮುಖಂಡರ ಅನುಪಸ್ಥಿತಿಯಲ್ಲಿ ಜಿಲ್ಲೆಯ ರೈತರು ಎದುರಿಸುತ್ತಿರುವ ಹಾಗೂ ಅವರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದರು.

ಕರ ನಿರಾಕರಣೆ ಚಳವಳಿಯ ಸಂದರ್ಭದ ವಿದ್ಯುತ್‌ ಬಿಲ್‌ ಬಾಕಿಯನ್ನು ಮನ್ನಾ ಮಾಡಬೇಕು ಎಂಬ ರೈತರ ಬೇಡಿಕೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ₹25.37 ಕೋಟಿ ಬಿಲ್‌ ಬಾಕಿ ಮನ್ನಾ ಮಾಡುವ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ಇಡಲಾಗುವುದು. ಇಂಧನ ಸಚಿವ ಸುನಿಲ್‌ ಅವರೊಂದಿಗೆ ಈಗಾಗಲೇ ಚರ್ಚೆ ಮಾಡಲಾಗಿದೆ’ ಎಂದು ಸೋಮಣ್ಣ ಹೇಳಿದರು.

ಸಚಿವರೊಂದಿಗೆ ಚರ್ಚೆ: ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂಬ ಒತ್ತಾಯದ ಸಂಬಂಧ ಸಚಿವರು ಆರೋಗ್ಯ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗಾನಂದ ಹಾಗೂ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರಿಂದ ಮಾಹಿತಿ ಪಡೆದರು.

ಶಾಸಕರಾದ ಪುಟ್ಟರಂಗಶೆಟ್ಟಿ ಹಾಗೂ ನರೇಂದ್ರ ಮಾತನಾಡಿ, ‘ಕಬ್ಬು ಬೆಳೆಗಾರರಿಗೆ ಒಂದು ಟನ್‌ ಕಬ್ಬನ್ನು ಕಟಾವು ಮಾಡಿ ವಾಹನಕ್ಕೆ ತುಂಬಿ ಕಾರ್ಖಾನೆ ಸಾಗಿಸಬೇಕಾದರೆ ₹1000ದಿಂದ ₹1200ರಷ್ಟು ಖರ್ಚಾಗುತ್ತದೆ. ಕಾರ್ಖಾನೆ ಟನ್‌ ಕಬ್ಬಿಗೆ 2,949 ನೀಡುತ್ತದೆ. ರೈತರಿಗೆ ಇದರಲ್ಲಿ ಏನೂ ಲಾಭ ಸಿಗುವುದಿಲ್ಲ’ ಎಂದರು.

ಸೋಮಣ್ಣ ಮಾತನಾಡಿ, ‘ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಕಾರ್ಖಾನೆ ನೀಡುತ್ತಿರುವ ದರ ವಿತರಣೆಯ ವಿಳಂಬ ಇನ್ನಿತರ ವಿಚಾರಗಳ ಬಗ್ಗೆಯೂ ದೂರುಗಳಿವೆ. ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ’ ಎಂದರು.

ಬಸ್‌ ಸೌಲಭ್ಯ ಕಲ್ಪಿಸಿ: ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಸಮರ್ಪಕವಾಗಿ ಇಲ್ಲದಿರುವ ಬಗ್ಗೆ ಶಾಸಕರಾದ ಸಿ.ಎಸ್‌.ನಿರಂಜನ್‌ಕುಮಾರ್‌, ಎನ್‌.ಮಹೇಶ್‌ ಹಾಗೂ ಆರ್‌.ನರೇಂದ್ರ ಗಮನಕ್ಕೆ ತಂದರು.

‘ಲಭ್ಯ ಇರುವ ಬಸ್‌ ಹಾಗೂ ಸಿಬ್ಬಂದಿ ಬಳಸಿಕೊಂಡು ಗ್ರಾಮೀಣ ಭಾಗಗಳಿಗೆ ಬಸ್‌ ಸೌಕರ್ಯ ಕಲ್ಪಿಸಬೇಕು’ ಎಂದು ಸಚಿವರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ಗೆ ಸೂಚನೆ ನೀಡಿದರು.

ಅರ್ಧದಲ್ಲಿ ಎದ್ದು ಹೋದ ನಿಜಗುಣರಾಜು: ಕಾಡಾ ಅಧ್ಯಕ್ಷ ನಿಜಗುಣರಾಜು ಅವರು ಸಭೆಯಲ್ಲಿ ಹಾಜರಿದ್ದರು. ಸ್ವಾಗತ ಕೋರುವಾಗ ಅವರ ಹೆಸರು ಕರೆದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಸಭೆಯಿಂದ ಅವರು ಎದ್ದು ಹೋದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಎಡಿಸಿ ಎಸ್. ಕಾತ್ಯಾಯಿನಿದೇವಿ, ಎಎಸ್‌ಪಿ ಕೆ.ಎಸ್. ಸುಂದರ್ ರಾಜ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್‌ ಡಾ. ಸಂತೋಷ್ ಕುಮಾರ್, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ರಸಗೊಬ್ಬರ ಅಕ್ರಮ: ಕ್ರಮಕ್ಕೆ ತಾಕೀತು
ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದಲ್ಲಿ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಸೋಮಣ್ಣ ಅವರು ಎಸ್‌ಪಿ ಶಿವಕುಮಾರ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಭೆ
‘ಇನ್ನು ಮುಂದೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು, ಅಧಿಕಾರಿಗಳೊಂದಿಗೆ ಖುದ್ದಾಗಿ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಲಿದ್ದೇನೆ. ಅಲ್ಲಿಯೇ ಒಂದೆರಡು ದಿನ ಇದ್ದು ಪೂರ್ಣ ಪ್ರಮಾಣದಲ್ಲಿ ಎಲ್ಲ ವಿಷಯಗಳ ಬಗ್ಗೆ ವಿವರ ಪಡೆದು ಪರಿಹಾರ ಕ್ರಮಗಳ ಬಗ್ಗೆ ಮುಂದಾಗುವೆ’ ಎಂದು ಸೋಮಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT