ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕ್ರಮಕ್ಕೆ ಸುರೇಶ್‌ ಕುಮಾರ್‌ ಸೂಚನೆ

ಮೂಲೆಹೊಳೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಭೇಟಿ, ಖುದ್ದು ಪರಿಶೀಲನೆ
Last Updated 26 ಮಾರ್ಚ್ 2021, 15:54 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೋವಿಡ್ 19 ಎರಡನೇ ಅಲೆಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ನಿಯಂತ್ರಿಸುವ ನಿಟ್ಟಿನಲ್ಲಿ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಶುಕ್ರವಾರ ಸೂಚಿಸಿದರು.

ತಾಲ್ಲೂಕಿನ ಗಡಿಯಲ್ಲಿರುವ ಮೂಲೆಹೊಳೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಲ್ಲಿಯೇ ಅಧಿಕಾರಿಗಳ ಸಭೆ ನಡೆಸಿ ಕೋವಿಡ್‌ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.

‘ಚೆಕ್‌ಪೋಸ್ಟ್‌ಗಳನ್ನು ಇನ್ನಷ್ಟು ಬಿಗಿ ಗೊಳಿಸುವ ಸಂದರ್ಭದಲ್ಲಿ ಜನರಿಗೆ ತೊಂದರೆ ಕೊಡಬೇಡಿ. ಇರುವ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಿ’ ಎಂದು ತಿಳಿಸಿದರು.

‘ಬೆಳಿಗ್ಗೆಯಿಂದ ನೋಡುತ್ತಿದ್ದೇನೆ. ಜನರು ಯಾರೂ ಮಾಸ್ಕ್‌ ಬಳಸುತ್ತಿಲ್ಲ. ಹೀಗಾದರೆ ಕೋವಿಡ್‌ ನಿಯಂತ್ರಣ ಮಾಡುವುದಾದರೂ ಹೇಗೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಪ‍್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು, ‘ಗುರುವಾರದವರೆಗೂ ಅರಿವು ಮೂಡಿಸಲಾಗಿದೆ. ಶನಿವಾರದಿಂದ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಹೇಳಿದರು. ‘ದಂಡ ವಿಧಿಸುವುದು ನಮ್ಮ ಉದ್ದೇಶವಾಗಬಾರದು. ಮಾಸ್ಕ್‌ ಧರಿಸುವಂತೆ ಮಾಡಬೇಕು’ ಎಂದು ಸಚಿವರು ಹೇಳಿದರು.

‘ಶಾಲಾ ಕಾಲೇಜುಗಳಲ್ಲಿ, ಪಾರ್ಕ್ ಮತ್ತು ಹೆಚ್ಚು ಜನ ಸೇರುವ ಜಾಗದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜನರನ್ನು ಜಾಗೃತರನ್ನಾಗಿ ಮಾಡಬೇಕು. ಇದಕ್ಕಾಗಿ ಹೋಟೆಲ್, ಪೆಟ್ರೋಲ್ ಬಂಕ್, ದಿನಸಿ ಅಂಗಡಿ, ಬೇಕರಿ ಇತ್ಯಾದಿ ಉದ್ದಿಮೆಗಳ ಅಧ್ಯಕ್ಷರನ್ನು ಕರೆದು ಸಭೆ ನಡೆಸಿ’ ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.

‘ಸಭೆ ಸಮಾರಂಭಗಳಲ್ಲಿ ಹೆಚ್ಚು ಜನರು ಸೇರದಂತೆ ತಿಳಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಬಾಬು ಜಗಜೀವನ್ ರಾಂ ಮತ್ತು ಡಾ. ಬಿ.ಆರ್.ಅಂಬೇಡ್ಕರ್‌ ಅವರ ಜಯಂತಿ ಇರುವುದರಿಂದ ಅನೇಕ ಸಂಘಟನೆಗಳು ಅದ್ಧೂರಿಯಾಗಿ ಆಚರಣೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದೆ. ಯಾರಿಗೂ ಇನ್ನೂ ಅನುಮತಿ ನೀಡಿಲ್ಲ, ಸರ್ಕಾರದ ನಿಯಮಾವಳಿಗಳನ್ನು ನೋಡಿ ತಿಳಿಸಲಾಗುತ್ತದೆ ಎಂದು ಹೇಳಲಾಗಿದೆ’ ಎಂದು ಜಿಲ್ಲಾಧಿಕಾರಿ ಅವರು ಸಚಿವರ ಗಮನಕ್ಕೆ ತಂದರು.

ಕೋವಿಡ್‌ ಸ್ಥಿತಿಗತಿಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ಕೋವಿಡ್ ಪ್ರಾರಂಭವಾದಗಿನಿಂದ 7,027 ಪ್ರಕರಣಗಳು ದೃಢಪಟ್ಟಿವೆ. ಈಗ 32 ಮಾತ್ರ ಸೋಂಕಿತರಿದ್ದಾರೆ. ಐಸಿಯುನಲ್ಲಿ ಯಾರೂ ಇಲ್ಲ’ ಎಂದು ತಿಳಿಸಿದರು.

ಸಚಿವರು ಗರಂ: ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಸಚಿವರು, ಸಂಚರಿಸುವ ವಾಹನಗಳ ವಿವರಗಳನ್ನು ಸಮರ್ಪಕ ನಿರ್ವಹಿಸದೇ ಇರುವುದಕ್ಕೆ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.

‘ನಾನು ಬರುವಾಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಲೆಕ್ಕ ಹಾಕುತ್ತಾ ಬಂದೆ. ಅಲ್ಲಿ ಹೋದ ವಾಹನಗಳಿಗೂ ಇಲ್ಲಿ ಬರೆದಿರುವ ಲೆಕ್ಕಕ್ಕೂ ಸಂಬಂಧವೇ ಇಲ್ಲ’ ಎಂದರು.

‘ಕೇರಳ ಮತ್ತು ತಮಿಳುನಾಡಿನಿಂದ ರಾಜ್ಯಕ್ಕೆ ಸಂಚಾರ ಮಾಡುವ ಎಲ್ಲ ವಾಹನಗಳ ವಿವರಗಳು ಕಡ್ಡಾಯವಾಗಿ ಇರಲೇಬೇಕು. ರಾಜ್ಯದಿಂದ ಸರಕು ಸಾಗಾಣೆಯ ವಾಹನಗಳು ಮರಳಿ ಬರುವಾಗ ಸ್ಯಾನಿಟೈಸ್ ಮಾಡಬೇಕು. ಕೇರಳದಿಂದ ಬರುವವರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಇರಲೇ ಬೇಕು’ ಎಂದು ತಿಳಿಸಿದರು.

‘ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್‌ ಹಾಗೂ ಕಾರುಗಳನ್ನು ತಡೆದು ಸವಾರರೊಂದಿಗೆ ಮಾತನಾಡಿದ ಸಚಿವರು, ಪರೀಕ್ಷಾ ವರದಿಯನ್ನು ತರಲೇಬೇಕು. ನಿಮ್ಮ ಜಿಲ್ಲಾಧಿಕಾರಿವರೊಂದಿಗೂ ಮಾತುಕತೆ ನಡೆಸಿದ್ದೇವೆ. ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ ಹದ್ದಣ್ಣವರ್, ಡಿವೈಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

‘ಆರೋಗ್ಯ ಸಿಬ್ಬಂದಿ ಕೊರತೆ ಇದೆ’

ಜಿಲ್ಲಾಸ್ಪತ್ರೆಯಲ್ಲಿ ಏನೂ ಕೊರತೆ ಇಲ್ಲವೇ ಎಂದು ಸಚಿವರು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಅವರನ್ನು ಪ್ರಶ್ನಿಸಿದರು. ಇದಕ್ಕೆ ‘ಇಲ್ಲ’ ಎಂದು ಡಿಎಚ್‌ಒ ಹೇಳಿದಾಗ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣರಾವ್‌ ಅವರು, ‘ಇರುವ ಸಮಸ್ಯೆಗಳ ಬಗ್ಗೆ ಸಚಿವರಿಗೆ ಸರಿಯಾದ ಮಾಹಿತಿ ಕೊಡಿ. ಇಲ್ಲದಿದ್ದರೆ ಸಮಸ್ಯೆ ಬಗೆ ಹರಿಯುವುದು ಹೇಗೆ’ ಎಂದು ಡಿಎಚ್‌ಒ ಅವರನ್ನು ಪ್ರಶ್ನಿಸಿದರು.

ಸಮಸ್ಯೆ ಬಗ್ಗೆ ಸಚಿವರ ಗಮನಕ್ಕೆ ತಂದ ಸಿಇಒ ಅವರು, ‘ಜಿಲ್ಲಾಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆ ಅನೇಕ ದೂರುಗಳು ಬರುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT