ಭಾನುವಾರ, ಮೇ 22, 2022
28 °C
ಚಾಮರಾಜನಗರ ಜಿಲ್ಲೆ: ಅಭಿವೃದ್ಧಿ ಸಾಧ್ಯತೆಗಳು ವಿಚಾರ ಗೋಷ್ಠಿ ಅಭಿಮತ

ಶಿಕ್ಷಣ, ಶಾಲೆ ಅಸಮಾನತೆಯ ತೊಟ್ಟಿಲು‌: ಪ್ರೊ.ಜಿ.ಎಸ್‌.ಜಯದೇವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಶಿಕ್ಷಣ ಮತ್ತು ಶಾಲೆ ಅಸಮಾನತೆಯ ತೊಟ್ಟಿಲುಗಳಾಗಿವೆ. ನಾವು ಮಕ್ಕಳ ನಡುವೆ ಅಸಮಾನತೆಯನ್ನು ಶಾಲೆಗಳಲ್ಲಿಯೇ ಸೃಷ್ಟಿಸುತ್ತಿದ್ದೇವೆ’ ಎಂದು ಶಿಕ್ಷಣ ತಜ್ಞ ಹಾಗೂ ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್‌.ಜಯದೇವ ಅವರು ಹೇಳಿದರು. 

ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಾಮರಾಜನರಗರ ಜಿಲ್ಲೆ: ಅಭಿವೃದ್ಧಿಯ ಸಾಧ್ಯತೆಗಳು’ ಕುರಿತ ಗೋಷ್ಠಿಯಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ ಅವರು, ‘ಎಲ್ಲರಿಗೂ ಸಮಾನ ತರಗತಿ ಶಿಕ್ಷಣ ನೀಡಬೇಕು ಎಂದು ಕೊಠಾರಿ ಆಯೋಗ ಹೇಳಿದೆ. ಆದರೆ, ಸರ್ಕಾರವೇ ಒಂಬತ್ತು ರೀತಿಯ ಶಾಲೆಗಳನ್ನು ನಡೆಸುತ್ತಿದೆ. ಇವುಗಳ ಪಠ್ಯಕ್ರಮ ಬೇರೆ, ಪರೀಕ್ಷಾ ಮಂಡಳಿ ಬೇರೆ, ಆಡಳಿತ ಕ್ರಮಗಳು ಬೇರೆ, ಅನುದಾನ ಕೂಡ ಬೇರೆ ರೀತಿಯದ್ದು. ಅಂತರರಾಷ್ಟ್ರೀಯ ಶಾಲೆಯ ಒಬ್ಬ ವಿದ್ಯಾರ್ಥಿಗೆ ಮಾಡುವ ವೆಚ್ಚ. ಗ್ರಾಮೀಣ ಭಾಗದ ಶಾಲೆಯ 250 ವಿದ್ಯಾರ್ಥಿಗಳಿಗೆ ಮಾಡುವುದಕ್ಕೆ ಸಮ. ಶಾಲೆಗಳಲ್ಲೇ ನಾವು ಅಸಮಾನತೆಯನ್ನು ಸೃಷ್ಟಿಸುತ್ತೇವೆ’ ಎಂದು ಹೇಳಿದರು‌.

‘ಎಲ್ಲಿ ಸಾಧ್ಯವೋ ಅಲ್ಲೆಲ್ಲ ಮಾತೃಭಾಷೆ ಶಿಕ್ಷಣ ನೀಡಲಾಗುವುದು ಎಂದು ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಹೇಳುತ್ತಾರೆ. ನಮ್ಮ ರಾಜ್ಯದಲ್ಲಿ ಇದಕ್ಕೆ ಸಂಪೂರ್ಣ ಭಿನ್ನವಾದ ಸ್ಥಿತಿ. ಸರ್ಕಾರವೇ ಇಂಗ್ಲಿಷ್‌ ಶಾಲೆಗಳನ್ನು ಆರಂಭಿಸಿದೆ. ಸರ್ಕಾರಿ ಶಾಲೆಗಳಲ್ಲಿ ಮಾತೃಭಾಷೆಯ ಶಿಕ್ಷಣವನ್ನು ಅನುಷ್ಠಾನಕ್ಕೆ ತರುವುದಕ್ಕೆ ಅವಕಾಶ ಇದೆ. ಆ ಕೆಲಸ ಮಾಡಿ ಎಂದು ಸಚಿವರಿಗೆ ಖುದ್ದಾಗಿ ಮನವಿ ಮಾಡಿದ್ದೆ. ಯಾವ ಸ್ಪಂದನೆಯೂ ಸಿಕ್ಕಿಲ್ಲ. ಖಾಸಗಿ ವ್ಯವಸ್ಥೆಯನ್ನು ಪ್ರಸನ್ನಗೊಳಿಸಲು ಸರ್ಕಾರಕ್ಕೆ ಇರುವಷ್ಟು ಆಸ್ಥೆ, ಬಡವರ ಕಷ್ಟಗಳಿಗೆ ಸ್ಪಂದಿಸುವುದರಲ್ಲಿ ಇಲ್ಲ ಎಂಬುದು ಅದರ ನಡವಳಿಕೆಯಿಂದಲೇ ತಿಳಿಯುತ್ತದೆ’ ಎಂದು ಜಯದೇವ ಅವರು ಹೇಳಿದರು. 

‘ಮಕ್ಕಳಿಗೆ ಸರಳ ಜೀವನವನ್ನು ತಿಳಿಸಿಕೊಡಬೇಕಾಗಿದೆ. ನಿಸರ್ಗ ವಿವೇಕವನ್ನು ತಿಳಿ ಹೇಳಬೇಕಾಗಿದೆ. ಮಕ್ಕಳು ಅದನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಾದರೆ, ಶಾಲಾ ಶಿಕ್ಷಣದಲ್ಲಿ ಇದನ್ನು ಅಳವಡಿಸಿ ಕೊಳ್ಳಬೇಕು. ಇದಕ್ಕಾಗಿ ಸರಳ ಹಾಗೂ ಸಮಾನ ಶಾಲಾ ವ್ಯವಸ್ಥೆ ರೂಪಿಸಬೇಕು ಎಂದು ಅವರು ಪ್ರತಿಪಾದಿಸಿದರು. 

ಕೃಷಿಕ ಜಿ.ಜಿ.ಮಲ್ಲಿಕಾರ್ಜುನ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಕೆರೆ ತುಂಬಿಸುವ ಯೋಜನೆ ಸಣ್ಣ ಪ್ರಮಾಣದಲ್ಲಿ ಜಾರಿಯಾಗಿದೆ. ಇದನ್ನು ಜಿಲ್ಲೆಯಾದ್ಯಂತ ವಿಸ್ತರಿಸಬೇಕು. ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಅರಿಸಿನ ಬೆಳೆ, ಬಾಳೆಗೆ ಹೊರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಅದರ ಲಾಭ ಸಿಗುತ್ತಿಲ್ಲ. ಹಾಗಾಗಿ, ಕೃಷಿ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಅದರಲ್ಲೂ ಬಾಳೆಯಂತಹ ಹಣ್ಣಿನ ಬೆಳೆಗಳಿಗೆ ಒದಗಿಸಿಬೇಕು’ ಎಂದರು. 

‘ಜಿಲ್ಲೆಯ ಕೃಷಿಯಲ್ಲಿ ಈಗ ಕೇರಳಿಗರ ಪ್ರಭಾವ ಹೆಚ್ಚಾಗುತ್ತಿದೆ. ವಿಶೇಷವಾಗಿ ಗುಂಡ್ಲುಪೇಟೆಯಲ್ಲಿ ರೈತರಿಂದ ಜಮೀನು ಖರೀದಿಸುವ ಕೇರಳದ ಮಂದಿ, ಜಮೀನಿನ ಮಾಲೀಕರಾಗಿದ್ದವರನ್ನೇ ಕೂಲಿ ಕೆಲಸರನ್ನಾಗಿ ನೇಮಿಸಿಕೊಳ್ಳುವ ‌ಪ್ರವೃತ್ತಿ ಬೆಳೆಯುತ್ತಿದೆ. ಶುಂಠಿಯನ್ನು ಅವರು ಹೆಚ್ಚಾಗಿ ಬೆಳೆಯುತ್ತಿದ್ದು, ರಾಸಾ ಯನಿಕ ಸಿಂಪಡಿಸಿ, ನೆಲವನ್ನು ಹಾಳು ಮಾಡುತ್ತಿದ್ದಾರೆ’ ಎಂದು ದೂರಿದರು. 

ಮುಖಂಡ ವೆಂಕಟರಮಣಸ್ವಾಮಿ (ಪಾಪು) ಅವರು ಜಿಲ್ಲೆಯ ಅಭಿವೃದ್ಧಿಗೆ ಚಳವಳಿಗಳ ಕೊಡುಗೆ ಎಂಬ ವಿಷಯದ ಬಗ್ಗೆ ಮಾತನಾಡಿದರು. ಜಿಲ್ಲೆಯಲ್ಲಿ ನಡೆದ ರೈತ, ದಲಿತ ಹಾಗೂ ಕನ್ನಡ ಚಳವಳಿಗಳ ಬಗ್ಗೆ ಪ್ರಸ್ತಾಪಿಸಿದರು. 

‌‘ಕನ್ನಡ –ಇಂಗ್ಲಿಷ್‌ ಎರಡೂ ಕಲಿಸಿ‌‌’

ಗೋಷ್ಠಿಯ ಅಧ್ಯಕ್ಷ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹನೂರು ಕೃಷ್ಣಮೂರ್ತಿ ಅವರು ಜಿಲ್ಲೆಯ ಜಾನಪದ ಸಾಹಿತ್ಯದ ಶ್ರೀಮಂತಿಕೆ ಹಾಗೂ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಿದರು. 

ಮಲೆಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿರಂಗನಾಥಸ್ವಾಮಿ ಮಹಾಕಾವ್ಯಗಳನ್ನು ದಾಖಲಿಸಿಕೊಂಡು ಅವುಗಳನ್ನು ಜನರಿಗೆ ತಲುಪಿಸುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

‘ಕೃಷಿ ಗೌರವದ ಕೆಲಸ ಅಲ್ಲ ಎಂಬ ಭಾವನೆ ಜನರಲ್ಲಿ ಬಂದು ಬಿಟ್ಟಿದೆ. ಈ ಕಾರಣಕ್ಕೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ. ಸರ್ಕಾರ ಕೃಷಿ ಉತ್ತೇಜನಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸದ್ಬಳಕೆ ಆಗುತ್ತಿಲ್ಲ’ ಎಂದರು.

‘ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಶಿಕ್ಷಣದ ಮಾಧ್ಯಮದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡವನ್ನೂ, ಇಂಗ್ಲಿಷ್ ಎರಡೂ ಭಾಷೆಗಳನ್ನೂ ಕಲಿಸಿ. ಎರಡೂ ಭಾಷೆ ಕಲಿಸುವುದರಿಂದ ಆಗುವ ತೊಂದರೆಗಳೇನು? ನಮ್ಮ ಗುರುಗಳು ನಮಗೆ ಹಾಗೆಯೇ ಕಲಿಸಿದ್ದರು’ ಎಂದರು. 

‘ಸಂಪಾದಿಸಿದ್ದನ್ನು ಇಲ್ಲೇ ಖರ್ಚು ಮಾಡಿ’

‘ಆರ್ಥಿಕ ಅಭಿವೃದ್ಧಿ’ ವಿಷಯದ ಬಗ್ಗೆ ಮಾತನಾಡಿದ ಆರ್ಥಿಕ ತಜ್ಞ ಪ್ರೊ.ಆರ್‌.ಎಂ.ಚಿಂತಾಮಣಿ ಅವರು, ‘ಜಿಲ್ಲೆಯು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಕಷ್ಟು ಅವಕಾಶಗಳಿವೆ. ಆದರೆ, ದೂರದರ್ಶಿತ್ವ, ಇಚ್ಛಾಶಕ್ತಿಯ ಕೊರತೆಯಿಂದ ಪ್ರಗತಿ ಹೊಂದುತ್ತಿಲ್ಲ’ ಎಂದು ಹೇಳಿದರು. 

‘1974ರ ನಂತರ ಜಿಲ್ಲೆಯಲ್ಲಿ ಕೆಲವು ಕೈಗಾರಿಕೆಗಳು ಆರಂಭವಾಗಿದ್ದವು. ಆದರೆ, ಈಗ ಅವರು ಮುಚ್ಚಿ ಹೋಗಿವೆ. ಕರಿಕಲ್ಲು ಉದ್ದಿಮೆ ಅತಿಯಾಗಿ ಬೆಳೆದಿದೆ. ಜಿಲ್ಲೆ ರೇಷ್ಮೆ ಉದ್ಯಮಕ್ಕೂ ಹೆಸರಾಗಿತ್ತು. ಈಗ ಉದ್ಯಮ ತಳಹಿಡಿದಿದೆ. ಜಿಲ್ಲೆಯಲ್ಲಿ ಸಣ್ಣ ಹಾಗೂ ಗೃಹ ಕೈಗಾರಿಕೆಗಳು ಬೆಳೆಯಬೇಕಿದೆ. ಜಿಲ್ಲೆಯಲ್ಲಿ ಶೇ 30ರಿಂದ 35ರಷ್ಟು ಕೃಷಿ ಭೂಮಿಗಳಿದ್ದು, ರೈತರು ಭೂಮಿಯಿಂದ ಹೆಚ್ಚು ಇಳುವರಿ ತೆಗೆಯಲು ಗಮನ ಹರಿಸಬೇಕು. ಕೃಷಿ ಆಧಾರಿತ ಕೈಗಾರಿಕಗಳು ಬರಬೇಕು’ ಎಂದು ಅವರು ಸಲಹೆ ನೀಡಿದರು.  

ಜಿಲ್ಲೆಯಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ಇಲ್ಲಿ ನೆಲೆಸದೆ ಮೈಸೂರಿನಲ್ಲಿ ವಾಸ್ತವ್ಯ ಹೂಡುತ್ತಿರುವುದರಿಂದ ಆಗುತ್ತಿರುವ ತೊಂದರೆಯ ಬಗ್ಗೆಯೂ ಅವರು ಗಮನ ಸೆಳೆದರು. ‘ಸರ್ಕಾರಿ ನೌಕರರು ಇಲ್ಲಿ ಸಂಪಾದಿಸಿದ್ದನ್ನು ಮೈಸೂರಿನಲ್ಲಿ ಖರ್ಚು ಮಾಡುತ್ತಾರೆ. ಹಾಗಾಗಿ, ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತದೆ. ಇಲ್ಲಿ ಸಂಪಾದಿಸಿದ್ದನ್ನು ಇಲ್ಲಿಯೇ ಖರ್ಚು ಮಾಡಿದರೆ, ಹೂಡಿಕೆಯಾಗಿ ವ್ಯವಹಾರ ನಡೆಯುತ್ತಿದೆ. ಇದು ಜಿಲ್ಲೆಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಜಿಲ್ಲೆಯಲ್ಲಿ ಉದ್ಯಮ ಶೀಲತೆ ಬೆಳೆಯಬೇಕು. ಪ್ರವಾಸೋದ್ಯಮಕ್ಕೂ ಹೆಚ್ಚು ಅವಕಾಶವಿದೆ’ ಎಂದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು