ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯ ಕನ್ನಡ ಪ್ರತಿಭೆಗಳಿಗೆ ವೇದಿಕೆ ಸಿಗುತ್ತಿಲ್ಲ: ಡಿ.ಸಿ

ಮಾತಿನಂತೆ ನಡೆದ ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಕಚೇರಿ ಹಸ್ತಾಂತರ
Last Updated 27 ನವೆಂಬರ್ 2020, 15:49 IST
ಅಕ್ಷರ ಗಾತ್ರ

ಚಾಮರಾಜನಗರ:ಜಿಲ್ಲೆಯಲ್ಲಿ ಬಹಳಷ್ಟು ಜನ ಕನ್ನಡ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ವೇದಿಕೆಗಳು ಸಿಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಶುಕ್ರವಾರ ಅಭಿಪ್ರಾಯಪಟ್ಟರು.

ನಗರದ ರಥದ ಬೀದಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಚೇರಿಯ ಹಸ್ತಾಂತರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಕಸಾಪವು ಯಾವುದೇ ಜಿಲ್ಲೆಗೆ ಭೂಷಣ. ಅಲ್ಲಿ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿರಬೇಕು. ಇದು ನಡೆಯುವಂತೆ ನೋಡಿಕೊಳ್ಳುವುದು ಕನ್ನಡಿಗರ ಕರ್ತವ್ಯ’ ಎಂದರು.

‘ಇಲ್ಲಿ ಒಳ್ಳೆಯ ವಿಚಾರ ಮಂಥನ ಆಗಬೇಕು. ಸಂವಾದಗಳು ನಡೆದು, ವಾರಕ್ಕೊಮ್ಮೆಯಾದರೂ ಕವಿಗಳು ಪುಸ್ತಕ ಓದುವಂತಾಗಬೇಕು’ ಎಂದು ಅವರು ಹೇಳಿದರು.

‘ಕನ್ನಡ ಸಾಹಿತ್ಯ ಪರಿಷತ್ತು ಗಣಕೀಕರಣಗೊಳ್ಳಬೇಕು. ಎಲ್ಲ ಕಾರ್ಯಕ್ರಮಗಳ ದಾಖಲೀಕರಣ ಅಗಬೇಕು. ನಮ್ಮ ಜಿಲ್ಲೆಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಮಾಡಲು ನಾವು ಸಿದ್ಧರಿದ್ದೇವೆ. ನಮ್ಮಲ್ಲಿ ಮಾಡುವಂತಹ ಕಾರ್ಯಕ್ರಮಗಳು ಬೇರೆ ಜಿಲ್ಲೆಗೆ ಮಾದರಿ ಆಗಬೇಕು’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು.

‘ಜಿಲ್ಲಾ ಕಸಾಪಕ್ಕೆ ಕಚೇರಿ ಇಲ್ಲದಿರುವ ನೋವಿತ್ತು.ರಾಜ್ಯೋತ್ಸವದಂದು ನಡೆದ ಸಭೆಯಲ್ಲಿ ಪರಿಷತ್ತಿಗೆ ಕಚೇರಿಗೆ ಕಟ್ಟಡವನ್ನು ಜಿಲ್ಲಾಡಳಿತದಿಂದ ಕೊಡಿಸುವುದಾಗಿ ಸಭೆಯಲ್ಲಿ ಮಾತುಕೊಟ್ಟಿದ್ದೆ. ಅದರಂತೆ ಈಗ ಕಚೇರಿ ಉದ್ಘಾಟನೆಯಾಗಿದೆ. ಇದು ದೊಡ್ಡ ಸಾಧನೆ, ಸೇವೆ ಎಂದು ನನಗೆ ಅನಿಸುವುದಿಲ್ಲ. ನನ್ನ ತಾಯಿಗೆ ನಾನು ಮಾಡುವ ಕೆಲಸ. ನನ್ನ ಜೀವನದ ಅವಿಭಾಜ್ಯ ಕರ್ತವ್ಯ ಇದು’ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್‌.ವಿನಯ್ ಅವರು ಮಾತನಾಡಿ, ‘ಜಿಲ್ಲಾ ಕಸಾಪ ಮತ್ತು ತಾಲ್ಲೂಕು ಘಟಕಗಳು ನಾಲ್ಕು ವರ್ಷಗಳಿಂದ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿವೆ. ಮಾರ್ಚ್‌ ತಿಂಗಳಿನಿಂದ ಕಚೇರಿ ಇಲ್ಲದೆ ತೊಂದರೆಯಾಗಿತ್ತು. ಜಿಲ್ಲಾಧಿಕಾರಿ ಅವರು ಪರಿಸ್ಥಿತಿ ಮನಗಂಡು ಕನ್ನಡದ ಕುರಿತ ಅಪಾರ ಕಾಳಜಿಯಿಂದ ಹೊಸ ಕಚೇರಿ ಮಾಡಿಕೊಟ್ಟಿದ್ದಾರೆ’ ಎಂದರು.

ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಅವರು ಮಾತನಾಡಿ, ‘ಸಾಹಿತ್ಯ ಚಟುವಟಿಕೆ ಮಾಡಲು ಜಿಲ್ಲಾಧಿಕಾರಿ ಅವರು ಆಸಕ್ತಿ ವಹಿಸಿ ಜಾಗವನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದೇ ಉತ್ಸಾಹದಿಂದ ಪರಿಷತ್ತಿನ ನಿವೇಶನದಲ್ಲಿ ಕಟ್ಟಡ ಕೂಡ ನಿರ್ಮಾಣ ಮಾಡಬೇಕು ಮತ್ತು ಜಿಲ್ಲಾಧಿಕಾರಿ ರವಿಯವರಂತಹ ಅಧಿಕಾರಿ ಇದ್ದರೆ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡಲು ಸಾಧ್ಯ’ ಎಂದು ಹೇಳಿದ ಅವರು, ಪರಿಷತ್ತಿಗೆ ಗಣಕಯಂತ್ರವನ್ನು ಕೊಡಿಸಬೇಕು ಎಂದು ಮನವಿ ಮಾಡಿಕೊಂಡರು.

ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ರಂಗಮಂದಿರ ಆಗಬೇಕಾಗಿದೆ ಮತ್ತು ಅದರ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು’ ಎಂದು ತಿಳಿಸಿದರು.

ಹಚ್ಚುವರಿ ಜಿಲ್ಲಾಧಿಕಾರಿ ಆನಂದ್, ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ, ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಗೋವಿಂದರಾಜು, ಕಸಾಪ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT